ಕೋಲಾರ: ಕೊರೊನಾ ಎರಡನೇ ಅಲೆ ದೇಶದಾದ್ಯಂತ ಹರಡಿದ್ದು, ಸಾವು- ನೋವಿನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಸುಧಾರಿಲಸು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಜನರ ಜೀವನವನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಹೀಗಿರುವಾಗಲೇ ಹೈನೋಧ್ಯಮವನ್ನೇ ನಂಬಿ ಬದುಕುತ್ತಿರುವ ಕೋಲಾರ ಜಿಲ್ಲೆಯ ರೈತರಲ್ಲಿ ಸದ್ಯ ಕಾಲು ಬಾಯಿ ರೋಗದ ಆತಂಕ ಶುರುವಾಗಿದೆ. ಕೋಲಾರ ತಾಲೂಕು ವೇಮಗಲ್ ಹೋಬಳಿ ಪುರಹಳ್ಳಿ ಗ್ರಾಮದಲ್ಲಿನ ಜನ ಕೃಷಿ ಜತೆಗೆ ಹೈನೋಧ್ಯಮವನ್ನು ನಂಬಿಕೊಂಡಿದ್ದಾರೆ. ಇದು ಈ ಭಾಗದ ಜನರ ಪ್ರಮುಖ ಆದಾಯದ ಮೂಲ, ಹೀಗಿರುವಾಗ ಹೈನೋಧ್ಯಮಕ್ಕೆ ಪೆಟ್ಟು ನೀಡುವ ಕಾಲುಬಾಯಿ ರೋಗ ಕೋಲಾರದಲ್ಲಿ ಕಂಡು ಬಂದಿದೆ.
ಕೋಲಾರ ತಾಲ್ಲೂಕಿನ ಪುರಹಳ್ಳಿ ಗ್ರಾಮ ಒಂದರಲ್ಲೇ ಸುಮಾರು ಹತ್ತಕ್ಕೂ ಹೆಚ್ಚು ಹಸುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ರೈತರಲ್ಲಿ ಆತಂಕ ಮೂಡಿಸಿದೆ. ಸರ್ಕಾರ ಈ ಕೂಡಲೇ ಕಾಲುಬಾಯಿ ರೋಗಕ್ಕೆ ಚಿಕಿತ್ಸೆ ನೀಡುವ ಮೂಲಕ ಆತಂಕದಲ್ಲಿರುವ ಜನರ ನೆರವಿಗೆ ನಿಲ್ಲಬೇಕು ಎಂದು ಸ್ಥಳೀಯರಾದ ಕೃಷ್ಣ ಮೂರ್ತಿ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 1,86,285 ಹಸುಗಳು ಸೇರಿದಂತೆ, 2,15,533 ಜಾನುವಾರುಗಳಿವೆ. ಈ ಪೈಕಿ ಕಾಲು ಬಾಯಿ ರೋಗ ಜಿಲ್ಲೆಯ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಪಶುಸಂಗೋಪನಾ ಇಲಾಖೆ ಈಗಾಗಲೇ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಿದೆ, ಹೀಗಿದ್ದರು ಕೆಲವು ರೈತರು ಲಸಿಕೆ ಹಾಕಿಸಿದರೆ ಹಾಲು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಲಸಿಕೆ ಹಾಕಿಸದೆ ನಿರ್ಲ್ಯಕ್ಷ ವಹಿಸುತ್ತಾರೆ ಪರಿಣಾಮ ಜಿಲ್ಲೆಯ ಕೆಲವು ಹಸುಗಳಲ್ಲಿ ಕಾಲು ಬಾಯಿ ರೋಗ ಕಂಡುಬಂದಿದೆ.
ಈ ರೋಗ ಗಾಳಿಯ ಮೂಲಕವೂ ಹರಡುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಹಸುಗಳಲ್ಲಿ ಕಾಲುಬಾಯಿ ರೋಗ ಹರಡುವ ಆತಂಕ ಎದುರಾಗಿದೆ. ಇದೇ ಕಾಲು ಬಾಯಿ ರೋಗಕ್ಕೆ 2013 ರಲ್ಲಿ ಜಿಲ್ಲೆಯ ಸಾವಿರಾರು ಹಸುಗಳು ಸಾವನ್ನಪ್ಪಿದ್ದವು. ಹೀಗಾಗಿ ಇಂತಹ ಕಹಿ ಘಟನೆ ಮತ್ತೆ ಮರುಕಳಿಸಿದರೆ ನಷ್ಟವಾಗುವತ್ತದೆ. ಸೂಕ್ತ ಕಾಲಕ್ಕೆ ಕಾಲು ಬಾಯಿ ರೋಗ ಹರಡದಂತೆ ಪಶು ಸಂಗೋಪನಾ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಒಟ್ಟಾರೆ ಮತ್ತೆ ಜಿಲ್ಲೆಯಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಅದು ವ್ಯಾಪಕವಾಗಿ ಹರಡುವ ಮುನ್ನವೇ ಪಶುಸಂಗೋಪನಾ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅದರ ನಿಯಂತ್ರಣ ಮಾಡಬೇಕಿದೆ. ಇಲ್ಲವಾದಲ್ಲಿ ಜಿಲ್ಲೆಯ ಹೈನೋದ್ಯಮಕ್ಕೆ ಮತ್ತೆ ಆತಂಕ ಎದುರಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಜಾನುವಾರಗಳು; ಕಾಲುಬಾಯಿ ರೋಗದಿಂದ ಕಂಗಾಲಾದ ಆನೆಕಲ್ ರೈತರು