ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಸುಪ್ರಿಯಾ ಹಾಗೂ ಲಲಿತ ಎಂಬ ಅಕ್ಕ ತಂಗಿಯರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಅಷ್ಟೇ ಅಲ್ಲ, ಮದುವೆ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಆದರೆ, ವಿವಾಹ ಆದ ಕೆಲವೇ ದಿನಗಳಲ್ಲಿ ವರ ಅರೆಸ್ಟ್ ಆಗಿದ್ದಾನೆ.
ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅವರಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ. ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ತಮ್ಮ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು. ಅದಕ್ಕೆ ಒಪ್ಪಿದ ಅವರು ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದರು.
ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಆದರೆ, ಮದುವೆಯಾದ ಹುಡುಗಿಯರ ಪೈಕಿ ಒಬ್ಬರು ಅಪ್ರಾಪ್ತೆಯಂತೆ ಕಂಡು ಬಂದಿದ್ದರು. ಹೀಗಾಗಿ ಈ ಬಗ್ಗೆ ಪರಿಶೀಲನೆ ಮಾಡಲು ಡಿಸಿ ಆರ್. ಸೆಲ್ವಮಣಿ ಆದೇಶಿಸಿದ್ದರು. ಪರಿಶೀಲನೆ ನಡೆಸಿದಾಗ ಲಲಿತಾ ಅಪ್ರಾಪ್ತೆ ಅನ್ನೋ ವಿಚಾರ ತಿಳಿದು ಬಂದಿದೆ.
ಅಪ್ರಾಪ್ತೆಯನ್ನು ಮದುವೆ ಆಗೋದು ಕಾನುನು ಪ್ರಕಾರ ಅಪರಾಧ. ಬಾಲ್ಯವಿವಾಹ ನಡೆದಿದೆ ಎನ್ನುವ ಕಾರಣಕ್ಕೆ ಉಮಾಪತಿ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವರ ಅರೆಸ್ಟ್ ಆಗಿದ್ದಾನೆ.
ವಂಶ ಪಾರಂಪರ್ಯವಾಗಿ ಮುಂದುವರೆದ ಎರಡು ಮದುವೆ
ಸುಪ್ರಿಯಾ ಹಾಗೂ ಲಲಿತಾ ಕುಟುಂಬದಲ್ಲಿ ಈ ರೀತಿ ಮದುವೆ ನಡೆದಿದ್ದು ಇದೇ ಮೊದಲಲ್ಲ. ಇವರ ತಂದೆ ಕೂಡಾ ಇದೆ ರೀತಿಯಲ್ಲಿ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದರು. ಅಲ್ಲೂ ಒಬ್ಬರಿಗೆ ಮಾತು ಬರುತ್ತಿರಲಿಲ್ಲ ಅನ್ನೋದು ವಿಶೇಷ. ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವರನ್ನು ಇವರ ಸೋದರ ಸಂಬಂಧಿ ನಾಗರಾಜಪ್ಪ ಎಂಬುವರು ಮದುವೆಯಾಗಿದ್ದರು. ಈಗ ಅದೇ ರೀತಿಯಲ್ಲಿ ಮತ್ತೊಂದು ಮದುವೆ ಆಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ವರಿಸಿದ ವರ; ಯಾವ ಸಿನಿಮಾಗೂ ಕಮ್ಮಿ ಇಲ್ಲಈ ಕಥೆ
Published On - 7:46 pm, Sun, 16 May 21