ಕೋಲಾರ: ನಮ್ಮ ದೇಶದಲ್ಲಿ ರಸ್ತೆ, ನೀರು ಸೇರಿ ಇನ್ನಿತರ ಮೂಲಭೂತ ಸೌಲಭ್ಯಗಳಿಂದ ಇನ್ನು ಕೂಡ ಜನರು ವಂಚಿತರಾಗಿದ್ದಾರೆ. ಇದಕ್ಕೆ ನಿದರ್ಶನ ಕೋಲಾರ ಜಿಲ್ಲೆಯ 270 ಗ್ರಾಮಗಳು. ಕೋಲಾರದ ಜನರಿಗೆ ಇನ್ನೂ ಸರಿಯಾದ ಕುಡಿಯುವ ನೀರು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಅಂತರ್ಜಲ ಬತ್ತಿ ಹೋಗಿದ್ದು, ಭೂ ಗರ್ಭದಿಂದ ತೆಗೆದ ವಿಷಪೂರಿತ ಪ್ಲೋರೈಡಿ ನೀರನ್ನು ಇಲ್ಲಿನ ಜನರು ಕುಡಿಯಬೇಕಾದ ದುಸ್ಥಿತಿ ಎದುರಾಗಿದೆ. ವಿಷಪೂರಿತ ನೀರು ಕುಡಿದು ಇಲ್ಲಿನ ಜನರು ಹತ್ತಾರು ಕಾಯಿಲೆಗಳಿಂದ ಭಾದಿಸುತ್ತಲೇ ಇದ್ದಾರೆ. ಆದರೆ ಇವರೆಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 270 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರಿಲ್ಲ. ವಿಷಪೂರಿತ ನೀರು ಕುಡಿದು ವರ್ಷದಿಂದ ವರ್ಷಕ್ಕೆ ನಾನಾ ರೀತಿಯ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಈ ಗ್ರಾಮಗಳಲ್ಲಿನ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ 3 ಪಿಪಿಎಂ ನಿಂದ 6 ಪಿಪಿಎಂ ವರೆಗಿದೆ. ಪರಿಣಾಮವಾಗಿ ಈ ನೀರನ್ನು ಕುಡಿಯುತ್ತಿರುವ ಜನರಲ್ಲಿ ಪ್ಲೋರೋಸಿಸ್ ಎನ್ನುವ ಕಾಯಿಲೆ ಕಾಣಿಸಿಕೊಂಡಿದೆ.
ಈ ಪ್ಲೋರೋಸಿಸ್ನಲ್ಲಿ ಹಲವು ರೀತಿಯ ಕಾಯಿಲೆಗಳು ಜನರನ್ನು ಬಾದಿಸುತ್ತಿವೆ. ಅದರಲ್ಲೂ ಪ್ರಮುಖವಾಗಿ ದಂತ ಪ್ಲೋರೋಸಿಸ್ ಹಾಗೂ ಮೂಳೆ ಪ್ಲೋರೋಸಿಸ್ ಹೆಚ್ಚಿನ ಜನರನ್ನು ಬಾದಿಸುತ್ತಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು, ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜೆಕೆ ಪುರಂ ಎನ್ನುವ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಪ್ಲೋರೋಸಿಸ್ಗೆ ತುತ್ತಾಗಿ ಕಳೆದ ಹದಿನೈದು ವರ್ಷಗಳಿಂದ ಅಂಗವೈಕಲ್ಯ ಅನುಭವಿಸುತ್ತಿದ್ದಾರೆ.
ಜೆಕೆ ಪುರಂನಲ್ಲಿ ಪಾಷಾ ಸಾಬ್ ಎಂಬುವರ ಮೂರು ಜನ ಮಕ್ಕಳಲ್ಲಿ ಪ್ಲೋರೋಸಿಸ್ ಕಾಯಿಲೆ ಇದೆ. ಇವರು ಹತ್ತಾರು ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ ವೈದ್ಯರು ನೀವು ಸಂಬಂಧದಲ್ಲಿ ಮದುವೆಯಾಗಿರುವುದಕ್ಕೆ ಈ ರೀತಿ ಆಗಿರಬಹುದು ಎಂದು ಹೇಳಿ ಕಳಿಸಿದ್ದಾರೆ. ಅದನ್ನು ಸರಿಪಡಿಸಲು ಪಾಷಾ ಸಾಬ್ ತಮ್ಮ ಬಳಿ ಇದ್ದ ಜಮೀನು ಮನೆ ಎಲ್ಲವನ್ನೂ ಮಾರಿ ತಮ್ಮ ಮೂವರು ಮಕ್ಕಳಾದ ಅಪ್ಸರ್ಪಾಷಾ, ವಾಹಿದ್ ಪಾಷಾ, ಆಸಿಯಾಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಅದು ಪ್ರಯೋಜನವಾಗಿಲ್ಲ, ಕೊನೆಗೆ ಮಕ್ಕಳನ್ನು ತಾವೇ ಕೈಲಾದ ಮಟ್ಟಿಗೆ ಸಾಕಿಕೊಂಡು ಮಕ್ಕಳ ಪರಿಸ್ಥಿತಿಯನ್ನು ಕಂಡು ನಿತ್ಯಾ ಸಂಕಟ ಪಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ನಿಜವಾದ ಸಂಗತಿ ಅಂದರೆ ಹತ್ತು ವರ್ಷದ ವರೆಗೆ ಮಕ್ಕಳು ಎಲ್ಲರಂತೆ ಇದ್ದರು. ಆದರೆ ಹತ್ತು ವರ್ಷದ ನಂತರ ಈ ಮೂರು ಮಕ್ಕಳಲ್ಲಿ ಈ ರೀತಿಯ ಕೈಕಾಲುಗಳು ಸೊಟ್ಟವಾಗೋದು, ಮೂಳೆಯ ಗಂಟುಗಳಲ್ಲಿ ಊತ, ನೋವು ಕಾಣಿಸಿಕೊಳ್ಳಲು ಆರಂಭಿಸಿದೆ. ಹತ್ತಾರು ಆಸ್ಪತ್ರೆಗಳನ್ನು ಸುತ್ತಿ ಬಂದ ನಂತರ ತಿಳಿದ ಅಂಶ ಅಂದರೆ ಇದು ಸಂಬಂಧದಿಂದ ಮದುವೆಯಾದ ಪರಿಣಾಮ ಅಲ್ಲ. ಇದು ತಾವು ನಿತ್ಯ ಕುಡಿಯುವ ನೀರಿನಿಂದಾಗಿರುವ ಅನಾಹುತ ಎನ್ನುವುದು. ಈ ಮಕ್ಕಳೆಲ್ಲಾ ಪ್ಲೋರೈಡ್ ಯುಕ್ತ ವಿಷ ನೀರನ್ನು ಕುಡಿದರಿಂದ ಪ್ಲೋರೋಸಿಸ್ ಎನ್ನುವ ಮಾರಕ ಕಾಯಿಲೆ ಬಾದಿಸುತ್ತಿದೆ ಎಂದು ಪಾಷಾ ಸಾಬ್ ತಿಳಿಸಿದ್ದಾರೆ.
ದಂತ ಪ್ಲೋರೋಸಿಸ್
ಬಂಗಾರಪೇಟೆ ತಾಲ್ಲೂಕಿನ ರಾಮನಾಯಕನಹಳ್ಳಿ, ಹಾಗೂ ಹೊಸೂರು ಗ್ರಾಮದಲ್ಲಿ ಹತ್ತಾರು ಮಕ್ಕಳು ಹಾಗೂ ಯುವಕರು ದಂತ ಪ್ಲೋರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೇವಲ ಹತ್ತು ಹದಿನೈದು ವರ್ಷದ ಮಕ್ಕಳಲ್ಲಿ ಹಲ್ಲುಗಳ ಮೇಲೆ ಕಂದು ಬಣ್ಣದ ಕರೆ ಕಟ್ಟಿ, ಹಲ್ಲು ಬಲವಿಲ್ಲದೆ ಗಟ್ಟಿ ಪದಾರ್ಥಗಳನ್ನು ತಿನ್ನಲಾಗದೆ, ತಮ್ಮ ಸ್ನೇಹಿತರೆದುರು ಹಲ್ಲು ಬಿಟ್ಟು ನಗಲಾರದೆ ಸಂಕೋಚದಿಂದ ಮುಜುಗರ ಅನುಭವಿಸುವ ಸ್ಥಿತಿಯಲ್ಲಿ ನಿತ್ಯ ಇದ್ದು, ಮಾನಸೀಕ ವೇದನೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ನೂರಾರು ವೃದ್ಧರು ಹಾಗೂ ಮಹಿಳೆಯರಲ್ಲಿ ಈ ಮೂಳೆ ಪ್ಲೋರೋಸಿಸ್ ಕಾಯಿಲೆ ಬಾದಿಸುತ್ತಿದೆ. ಅಲ್ಲದೆ ಈ ಪ್ಲೋರೈಡ್ ಯುಕ್ತ ನೀರನ್ನು ಕುಡಿಯುತ್ತಿರುವ ಜನರಲ್ಲಿ ಮೂತ್ರಪಿಂಡಗಳಲ್ಲಿ ಕಲ್ಲಿನ ಸಮಸ್ಯೆ, ಸೇರಿದಂತೆ ಮಹಿಳೆಯರಲ್ಲಿ ಬಂಜೆತನ ಕೂಡಾ ಕಾಡುತ್ತಿದೆ. ಆರೋಗ್ಯ ಚೆನ್ನಾಗಿದ್ದರೂ ಕೂಡಾ ಮದುವೆಯಾಗಿ ಹತ್ತು ಹದಿನೈದು ವರ್ಷಗಳು ಕಳೆದರೂ ಮಕ್ಕಳಾಗದೆ ಬಂಜೆತನ ಅನುಭವಿಸುವ ಸ್ಥಿತಿ ಎದುರಾಗುತ್ತಿದೆ ಎಂದು ಜಿಲ್ಲಾ ಪ್ಲೋರೋಸಿಸ್ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಸುಮಾರು 270 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ, ಸುಮಾರು 1800 ಅಡಿಗೂ ಹೆಚ್ಚು ಆಳಕ್ಕೆ ಬೋರ್ವೆಲ್ ಕೊರೆದು ಪ್ಲೋರೈಡ್ ಯುಕ್ತ ನೀರನ್ನು ಕುಡಿಯುತ್ತಿದ್ದಾರೆ. ಪರಿಣಾಮ ಈ ಕಾಯಿಲೆ ಜನರನ್ನು ಬಾದಿಸುತ್ತಿದೆ. ಇನ್ನು ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ನಡೆಸಿದ ಸರ್ವೆ ಪ್ರಕಾರ
ಜಿಲ್ಲೆಯಲ್ಲಿ ಈ ಪ್ಲೋರೈಡ್ ಎನ್ನುವ ಮಾರಕ ವಿಷ ಕೇವಲ ಜೀವವಿರುವ ಮನುಷ್ಯರನ್ನಷ್ಟೇ ಅಲ್ಲಾ, ನೀರು ಹರಿಯುವ ನೀರಿನ ಪೈಪ್ಗಳನ್ನೂ ಬಾದಿಸುತ್ತದೆ. ಪೈಪ್ಗಳಲ್ಲಿ ದಪ್ಟನಾದ ಉಪ್ಪು ಮಿಶ್ರಿತ ಗಟ್ಟಿಯಾದ ಕಲ್ಲು ಕಟ್ಟಿಕೊಂಡು ನೀರಿನ ಪೈಪ್ಗಳು ಒಡೆಯುತ್ತಿವೆ. ಕೊನೆಗೆ ನೀರು ಹರಿಯದೆ ಪೈಪ್ಗಳನ್ನೇ ತೆಗೆದು ಹಾಕಬೇಕಾದ ಪರಿಸ್ಥಿತಿ ನಿರ್ಮಾಣದ ಅನೇಕ ಉದಾಹರಣಗೆಗಳಿವೆ.
ಒಟ್ಟಾರೆ ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 270 ಕ್ಕೂ ಹೆಚ್ಚು ಗ್ರಾಮಗಳ ಜನರು ಶುದ್ಧ ಕುಡಿಯುವ ನೀರಿಲ್ಲದೆ ಹೀಗೆ ಹಲವು ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿದ್ದಾರೆ. ಕುಡಿಯಲು ಶುದ್ಧ ನೀರು ಸಿಗದೆ ಸಿಕ್ಕ ನೀರನ್ನು ಕುಡಿಯುತ್ತಾ ರೋಗಗಳನ್ನು ಅಂಗೈಲಿಟ್ಟುಕೊಂಡು ಬದುಕುವ ಸ್ಥಿತಿ ಬಂದೊದಗಿದೆ. ಸರ್ಕಾರ ಇನ್ನಾದರೂ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಿ ಎನ್ನುವುದು ನಮ್ಮ ಆಶಯ.
ವರದಿ : ರಾಜೇಂದ್ರ ಸಿಂಹ
ಇದನ್ನೂ ಓದಿ:
ಹುಬ್ಬಳ್ಳಿ: ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ! ಜೀವವೈವಿಧ್ಯಗಳಿಗೆ ವಿಷವಾದ ಕೆರೆ ನೀರು
ಟಿವಿ9 ವರದಿ ಫಲಶೃತಿ: ಸುಳ್ಳ ಗ್ರಾಮಕ್ಕೆ 8ವರ್ಷಗಳ ನಂತರ ಶುದ್ಧ ಕುಡಿಯುವ ನೀರು..