ದಂಪತಿ ಆತ್ಮಹತ್ಯೆ
ಕೋಲಾರ, ಜು.11: ಕೋಲಾರ(
Kolar)ತಾಲೂಕಿನ
ಕಲ್ವಮಂಜಲಿ ಗ್ರಾಮದಲ್ಲಿ ಇಂದು(ಗುರುವಾರ) ಬೆಳ್ಳಂ ಬೆಳಿಗ್ಗೆಯೇ ಇಡೀ ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿತ್ತು. ಗ್ರಾಮದ ಲಕ್ಷ್ಮಣ್ ಹಾಗೂ ಮಾಲಾಶ್ರೀ ಎಂಬ ದಂಪತಿ ಊರ ಹೊರಗಿನ ಮರವೊಂದಕ್ಕೆ ಒಂದೇ ಹಗ್ಗದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಓಡೋಡಿ ಬಂದಿದ್ದ ಗ್ರಾಮಸ್ಥರಿಗೆ ಒಂದು ರೀತಿಯ ಶಾಕ್ ಆಗಿತ್ತು. ನಿನ್ನೆ(ಜು.10) ಅಷ್ಟೊಂದು ಅನ್ಯೋನ್ಯವಾಗಿದ್ದ ಕುಟುಂಬಕ್ಕೆ ದಿಢೀರ್ ಏನಾಯ್ತು ಎಂದು ಬಂದಿದ್ದವರು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು.
ಘಟನೆ ವಿವರ?
ಕಲ್ವಮಂಜಲಿ ಗ್ರಾಮದ ಲಕ್ಷ್ಮಣ್ ಹಾಗೂ ಮಾಲಶ್ರೀ ಕಳೆದ ಹದಿಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಯಿಂದ ಸಂಸಾರ ಮಾಡುತ್ತಿದ್ದ ಅವರಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದರು. ಪ್ರೀತಿಸಿ ಮದುವೆಯಾಗಿದ್ದ ಕುಟುಂಬ ಕಷ್ಟ ಪಟ್ಟು ದುಡಿಯುತ್ತಿದ್ದರು. ಲಕ್ಷ್ಮಣ್ ಆಟೋ ಓಡಿಸುತ್ತಿದ್ದರೆ, ಮಾಲಾಶ್ರೀ ಕಲ್ವಮಂಜಲಿ ಗ್ರಾಮದಲ್ಲೇ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕಷ್ಟು ಪಟ್ಟು ದುಡಿದು ಸ್ವಂತ ಮನೆ ಕಟ್ಟಿಕೊಂಡಿದ್ದರು. ಮಕ್ಕಳನ್ನು ವೇಮಗಲ್ನಲ್ಲಿ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದರು. ಇಷ್ಟೆಲ್ಲ ಇದ್ದರೂ ಕೂಡ ಇಂದು(ಜು.11) ಡೆತ್ ನೋಟ್ ಬರೆದಿಟ್ಟುಕೊಂಡು ಲಕ್ಷ್ಮಣ ಹಾಗೂ ಆತನ ಪತ್ನಿ ಮಾಲಾಶ್ರೀ ಇಬ್ಬರೂ ಮನೆಯ ಬಳಿಯಲ್ಲೇ ಇರುವ ಒಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಗಿನ ಜಾವ 3 ಗಂಟೆಗೆ ಲಕ್ಷ್ಮಣ್ ಎಂದಿನಂತೆ ಮಾರುಕಟ್ಟೆಗೆ ಹೋಗಿ ತರಕಾರಿ ತಂದಿದ್ದಾನೆ. ಆದಾದ ನಂತರ ಇಬ್ಬರ ನಡುವೆ ಅದೇನು ಮಾತುಕಥೆ ನಡೆಯಿತೋ ಗೊತ್ತಿಲ್ಲ. ಬೆಳಿಗ್ಗೆಯಾಗುವಷ್ಟರಲ್ಲಿ ಗಂಡ ಹೆಂಡತಿ ಇಬ್ಬರೂ ಸಾವಿನ ಮನೆ ಸೇರಿದ್ದರು. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ವೇಮಗಲ್ ಪೊಲೀಸರು ಪರಿಶೀಲನೆ ವೇಳೆ ಲಕ್ಷ್ಮಣ ಬಳಿಯಲ್ಲಿ ಒಂದು ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತಾನು ಮಾನಸೀಕ ಕಾಯಿಲೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಬರೆದಿದ್ದಾನೆ. ತಂದೆ ಇಲ್ಲದ ಮಕ್ಕಳು ಸಮಾಜದಲ್ಲಿ ಬದುಕೊದು ಕಷ್ಟ ಹಾಗಾಗಿ ನನ್ನ ಜೊತೆಗೆ ನನ್ನ ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆಂದು ಬರೆದಿದ್ದಾನೆ. ಅಲ್ಲದೆ ನನ್ನ ಸಾವಿಗೆ ನಾನೇ ಕಾರಣ ನಾನೇ ಸ್ವ ಇಚ್ಚೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದರಲ್ಲಿ ನನ್ನ ಹೆಂಡತಿ ಮಾಲಾಶ್ರೀ ಪಾತ್ರವಿಲ್ಲ, ನನ್ನ ಸಾವಿನ ನಂತರವೂ ಅವಳಿಗೆ ಯಾವುದೇ ತೊಂದರೆ ಕೊಡಬೇಡಿ ಎಂದು ಲಕ್ಷ್ಮಣ ಬಳಿ ಸಿಕ್ಕ ಡೆತ್ ನೋಟ್ನಲ್ಲಿ ಬರೆಯಲಾಗಿದೆ.
ಆದರೆ, ಇಲ್ಲಿ ಗಂಡ ಹೆಂಡತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡು ಮಕ್ಕಳನ್ನು ಅನಾಥ ಮಾಡಿ ಹೋಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವೇಮಗಲ್ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಪ್ರೀತಿಸಿ ಮದುವೆಯಾಗಿ ಸುಂದರವಾದ ಸಂಸಾರ ನಡೆಸುತ್ತಿದ್ದ ಕುಟುಂಬಕ್ಕೆ ಸಾವಿನ ಆಘಾತ ಬಂದೊದಗಿದೆ. ಚೆನ್ನಾಗಿದ್ದ ಸಂಸಾರಕ್ಕೆ ಏನಾಯ್ತು? ಆತ್ಮಹತ್ಯೆ ದಾರಿ ಹಿಡಿದಿದ್ದಾರೂ ಯಾಕೆ ಎನ್ನುವ ಹಲವು ಪ್ರಶ್ನೆಗಳು ಕಾಡುತ್ತಿದ್ದು. ಸದ್ಯ ಪೊಲೀಸರ ತನಿಖೆಯಿಂದ ಸಾವಿನ ಸತ್ಯಾಂಶ ಹೊರಬೇಕಿದೆ.