ಮಳೆಯಿಂದ ಹಾನಿ: 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಬಸವರಾಜ ಬೊಮ್ಮಾಯಿ ಸೂಚನೆ

| Updated By: ganapathi bhat

Updated on: Nov 22, 2021 | 9:29 PM

ಭಾರಿ ಹಾನಿಯಾದ ಜಿಲ್ಲೆಗಳಿಗೆ ನಾನೇ ಭೇಟಿ ನೀಡುತ್ತೇನೆ. ನಾನೇ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಮಳೆಯಿಂದ ಹಾನಿ: 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಬಸವರಾಜ ಬೊಮ್ಮಾಯಿ ಸೂಚನೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಕೋಲಾರ: ಕರ್ನಾಟಕದ ವಿವಿಧೆಡೆ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಬೆಳೆ ಹಾನಿ ಆಗಿದೆ. ಈ ಸಂಬಂಧ ಮುಂದಿನ 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ ₹5 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದ್ದು ತಕ್ಷಣಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚನೆ ಕೊಡಲಾಗಿದೆ. ಮೂರು ಹಂತದಲ್ಲಿ ಪರಿಹಾರ ವಿತರಣೆ ಮಾಡಲಾಗುವುದು. ಕಳೆದ ಬಾರಿ ಮಾನದಂಡದಂತೆ ಪರಿಹಾರ ವಿತರಿಸುತ್ತೇವೆ ಎಂದು ಕೋಲಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ನವೆಂಬರ್ 22) ಹೇಳಿಕೆ ನೀಡಿದ್ದಾರೆ.

48 ಸಾವಿರ ಹೆಕ್ಟೇರ್ ಬೆಳೆ ಹಾನಿ ಆಗಿರುವ ಬಗ್ಗೆ ಮಾಹಿತಿ ಇದೆ. 7 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಮಾಹಿತಿ ಲಭ್ಯವಾಗಿದೆ. ಸರ್ವೆ ಮಾಡಿದ ಬಳಿಕ ಪೂರ್ಣ ಮಾಹಿತಿ ಸಿಗಲಿದೆ. ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಲಾಗಿದೆ. ಒತ್ತುವರಿ ತೆರವು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಭಾರಿ ಹಾನಿಯಾದ ಜಿಲ್ಲೆಗಳಿಗೆ ನಾನೇ ಭೇಟಿ ನೀಡುತ್ತೇನೆ. ನಾನೇ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಬೆಂಗಳೂರು ನಂತರ ಕೋಲಾರ ವೇಗವಾಗಿ ಬೆಳೆಯುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಹಳ ವರ್ಷಗಳ‌ ಬಳಿಕ ಇಷ್ಟು ಪ್ರಮಾಣದಲ್ಲಿ ಮಳೆ ಆಗಿದೆ. ಕೆರೆಗಳು ತುಂಬಿ‌ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಭಾರಿ ಪ್ರಮಾಣದಲ್ಲಿ ಬೆಳೆ‌ ಹಾನಿ, ಪ್ರಾಣ ಹಾನಿ ಆಗಿದೆ. ರಾಗಿ ಬೆಳೆ ಹೆಚ್ಚಿನ‌ ಪ್ರಮಾಣದಲ್ಲಿ ಹಾನಿ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು‌ ಹಾನಿಯಾಗಿವೆ. ಮಳೆ ನೀರು ಹೆಚ್ಚಾಗಿ ಬೆಳೆಗಳು ಕೊಳೆಯುತ್ತಿವೆ. ಮಳೆ ಹಾನಿಯಾದ ‌ಜಿಲ್ಲೆಗಳಿಗೆ ಆದ್ಯತೆ ಕೊಡಲಾಗುತ್ತಿದೆ ಎಂದು ಕೋಲಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ. ರಾಜಕಾಲುವೆ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ಕಂದವಾರ ಕೆರೆಯಿಂದ ಅಮಾನಿಕೆರೆವರೆಗೆ ರಾಜಕಾಲುವೆ ನಿರ್ಮಾಣ ಮಾಡುತ್ತೇವೆ. ನೀರು ನುಗ್ಗಿರುವ ಮನೆಗೆ 10 ಸಾವಿರ ಪರಿಹಾರಕ್ಕೆ ಸೂಚನೆ ಕೊಡಲಾಗಿದೆ. ಮಳೆಯಿಂದ ಮನೆ ಸಂಪೂರ್ಣ ಬಿದಿದ್ರೆ 5 ಲಕ್ಷ ಪರಿಹಾರ ನೀಡಲಾಗುವುದು. ಮಳೆಯಿಂದ ಮನೆ ಭಾಗಶಃ ಬಿದಿದ್ರೆ 3 ಲಕ್ಷ ರೂ. ಪರಿಹಾರ ನೀಡುತ್ತೇವೆ. ಜಿಲ್ಲೆಯಲ್ಲಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿತವಾಗಿವೆ. ಹಾನಿ ಕುರಿತು ಚಿಕ್ಕಬಳ್ಳಾಪುರ ಡಿಸಿ ವರದಿಯನ್ನು ನೀಡಿದ್ದಾರೆ. ವರದಿ ಆಧರಿಸಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದರು.

ರಾಜ್ಯದಲ್ಲಿ ಮಳೆಯಿಂದ 5 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಆಗಿದೆ. ರಾಜ್ಯದಲ್ಲಿ ಮಳೆಯಿಂದ 40 ಸಾವಿರ ಮನೆಗಳು ಬಿದ್ದಿವೆ. ಬಿದ್ದ ಮನೆಗಳಿಗೆ ಪರಿಹಾರ ನೀಡಲು ಡಿಸಿಗಳಿಗೆ ಸೂಚಿಸಿದ್ದೇನೆ. ಸಂಪೂರ್ಣ ಬಿದ್ದ ಮನೆಗೆ ತಾತ್ಕಾಲಿಕವಾಗಿ 95 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ. ಹಾನಿ ಬಗ್ಗೆ ಸಂಪೂರ್ಣ ವರದಿ ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಮೊದಲಿಗೆ ರಸ್ತೆ, ಸೇತುವೆ ಕಾಮಗಾರಿ ಪೂರ್ಣ ಮಾಡುತ್ತೇವೆ. ಒಡೆದು ಹೋಗಿರುವ ಕೆರೆಗಳ ಶಾಶ್ವತ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಆನೆಮಡಗು ಗ್ರಾಮ ಕೆರೆ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದರು.

ಬೆಳೆಹಾನಿ ವೀಕ್ಷಣೆಯಲ್ಲಿ ಬಸವರಾಜ ಬೊಮ್ಮಾಯಿ

ಬೆಳೆಹಾನಿಯಾದ ರೈತರ ಖಾತೆಗೆ ಪರಿಹಾರಧನ: ಸಿಎಂ ಬಸವರಾಜ ಬೊಮ್ಮಾಯಿ
ಕೋಲಾರ ಪ್ರದೇಶದಲ್ಲಿ ಮಳೆಯಿಂದಾಗಿ 90% ರಷ್ಟು ರಾಗಿ ಬೆಳೆ ನಾಶ ಆಗಿದೆ. ಅದಕ್ಕೆ ಕೃಷಿ, ತೋಟಗಾರಿಕೆ, ಕಂದಾಯ, ಆರ್ ಡಿಪಿಆರ್ ಇಲಾಖೆಗಳು ಕೂಡಲೇ ಸಮೀಕ್ಷೆ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ತಕ್ಷಣ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಲಾಗುವುದು ಎಂದ ಹೇಳಿದ್ದಾರೆ.

ಇಂದು ನರಸಾಪುರದಿಂದ ಕೋಲಾರದವರೆಗೂ ಬೆಳೆ ನಷ್ಟವನ್ನು ಗಮನಿಸಲಾಗಿದೆ. ರಾಗಿ ಬೆಳೆ, ತೋಟಗಾರಿಕೆ ಬೆಳೆ, ಕಾಯಿಪಲ್ಲೆ, ಹೂವಿನ ತೋಟ ನಷ್ಟವಾಗಿದೆ. ಗಮನಿಸಿದ್ದೇನೆ. ಕೋಲಾರದ ಮುದವಾಡಿ ಕೆರೆ ತುಂಬಿಹರಿದು,ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಪ್ರಾಥಮಿಕ ವರದಿಯ ಪ್ರಕಾರ 9 ಮನೆ ಪೂರ್ಣ ಹಾನಿಯಾಗಿದ್ದು, 790 ಮನೆಗಳಿಗೆ ಭಾಗಶ: ಹಾನಿಯಾಗಿದೆ. 48333 ಹೆ.ಪ್ರದೇಶದಲ್ಲಿ ಬೆಳೆ ನಾಶ ಹಾಗೂ 6966 ಹೆ.ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ. 189 ಕಿ.ಮೀ.ರಸ್ತೆಗಳು ಹಾಗೂ 34 ಸೇತುವೆಗಳು ಹಾಳಾಗಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿನ ಹಣ ಪರಿಹಾರಕ್ಕೆ ಬಳಕೆ
ಪೂರ್ಣ ಮನೆ ಹಾನಿಗೆ 5 ಲಕ್ಷ ಪರಿಹಾರ ಮೊತ್ತದಲ್ಲಿ ಮೊದಲನೇ ಕಂತಾಗಿ 1 ಲಕ್ಷ ರೂ. ಕೂಡಲೇ ಬಿಡುಗಡೆ ನಂತರ ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ 3 ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಅಂತೆಯೇ ಬಿ ವರ್ಗದಲ್ಲಿ ಹಾನಿಯಾಗಿರುವ ಮನೆಗೆ 3 ಲಕ್ಷ ಪರಿಹಾರದಲ್ಲಿ 1 ಲಕ್ಷ ರೂ. ಕೂಡಲೇ ಬಿಡುಗಡೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಜಿಲ್ಲಾದಿಕಾರಿಗಳ ಪಿಡಿ ಖಾತೆಯಲ್ಲಿ ಸುಮಾರು 685 ಕೋಟಿ ಇದ್ದು, ಇದಕ್ಕಾಗಿ ಬಳಕೆ ಮಾಡಲು ಸೂಚನೆ ನೀಡಲಾಗಿದೆ.

ರಸ್ತೆ ಹಾಗೂ ಸೇತುವೆ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ
ರಸ್ತೆ ಮತ್ತು ಸೇತುವೆ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲೆಗೆ ತುರ್ತು ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು, ಒಂದು ಭಾಗ ಎನ್ ಡಿಆರ್ ಎಫ್ ಮಾರ್ಗಸೂಚಿಯಂತೆ ರಿಪೇರಿ ವೆಚ್ಚ , ದೊಡ್ಡ ಪ್ರಮಾಣದ ಕಾಮಗಾರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸಲಿದೆ. ಈ ಬಗ್ಗೆ ಕೂಡಲೇ ಅಂದಾಜು ಕಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಾಲೆ, ಅಂಗನವಾಡಿಗಳು ಹಾನಿಯಾಗಿದ್ದು, ಅದರ ರಿಪೇರಿ ಗೆ ಎನ್ ಡಿಆರ್ ಎಫ್ ನಲ್ಲಿ ಹಣ ನೀಡಲು ಅವಕಾಶವಿದೆ. ಅದನ್ನು ಬಳಸಿಕೊಂಡು ದುರಸ್ತಿ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಕೆರೆಗಳನ್ನು ಉಳಿಸುವುದು ಸರ್ಕಾರದ ಪ್ರಥಮ ಆದ್ಯತೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ದೊಡ್ಡ ಪ್ರಮಾಣದ ಕೆರೆ, ಕೆರೆ ಅಂಗಳ ಇರುವ ಪ್ರದೇಶ. ಇವುಗಳು ರಾಜ್ಯದ ಆಸ್ತಿ. ಇವುಗಳನ್ನು ದುರಸ್ತಿ, ಸ್ವಚ್ಛ ಮಾಡಲು ಕೂಡಲೇ ಕ್ರಮ ಕೈಗೊಳ್ಳಲು ಹಾಗೂ ಕೋಡಿಗಳು, ಗೇಟುಗಳು ಶಿಥಿಲಗೊಂಡಿದ್ದಲ್ಲಿ ಕೂಡಲೇ ಅಂದಾಜು ಕಳಿಸಿದ್ದಲ್ಲಿ ಹಣ ಬಿಡುಗಡೆಗೊಳಿಸಲಾಗುವುದು. ಕೆರೆಗಳನ್ನು ಉಳಿಸುವುದು ನಮ್ಮ ಪ್ರಥಮ ಆದ್ಯತೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿ ಕೂಡಲೇ ತೆರವು
ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿಯನ್ನು ಕೂಡಲೇ ಗುರುತಿಸಿ, ಒತ್ತುವರಿಯಾದ ಪ್ರದೇಶವನ್ನು ಕೂಡಲೇ ತೆರೆವುಗೊಳಿಸಲು ಆದೇಶ ನೀಡಲಾಗಿದೆ. ಕೆರೆಗಳ ಬಗ್ಗೆ ಸರ್ವೇ ನಂತರ ಬೌಂಡರಿ ನಿಗದಿ ಮಾಡಿಸಿ, ಬೇಲಿ ಅಥವಾ ಗ್ರೀನ್ ಬೇಲಿ ಹಾಕುವ ಮೂಲಕ ಅವುಗಳ ರಕ್ಷಣೆ ಮಾಡಲು ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳ ದುರಸ್ತಿಯನ್ನು ಮಳೆ ನಿಂತ 24 ಗಂಟೆಗಳಲ್ಲಿ ಗೆ ಬೆಸ್ಕಾಂಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯದಲ್ಲಿ ನವೆಂಬರ್ ನಲ್ಲಿ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆ ಹಾನಿಯಾಗಿದೆ. ಕೆರೆ ಕಟ್ಟೆ ಒಡೆದು,ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿರುವ ಮನೆಗಳಿಗೆ ಕೂಡಲೇ 10,000 ನೀಡಲು ಸೂಚನೆ ನೀಡಿದೆ. ನಂತರ ಹಾನಿಯಾದ ಪ್ರಮಾಣದ ಪ್ರಕಾರ ಪರಿಹಾರವನ್ನು ನೀಡಲಾಗುವುದು ಇನ್ನೂ 4 ದಿನ ಮಳೆ ಬರುವ ಸೂಚನೆ ಇದ್ದು, ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತಗಳು ಸನ್ನದ್ಧರಾಗಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು ತಿಳಿಸಿದ್ದಾರೆ.

ಈ ಅನಿರೀಕ್ಷಿತ ಮಳೆಯಿಂದ ಆಗಿರುವ ತೊಂದರೆಯಿಂದ ಜನರಿಗೆ ಕೂಡಲೇ ಪರಿಹಾರ ಹಾಗೂ ಅವರ ಸಹಾಯಕ್ಕೆ ಧಾವಿಸುವ ಮುಖಾಂತರ ಅತ್ಯಂತ ದಕ್ಷತೆ ಹಾಗೂ ಕ್ಷಮತೆಯಿಂದ ಈ ಸಂದರ್ಭವನ್ನು ನಿಭಾಯಿಸುತ್ತೇವೆ ಎಂದು ಭರವಸೆ ಇರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ರೈತರು ಪರಿಹಾರ ಮೊತ್ತ ಹೆಚ್ಚಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಚರ್ಚೆ ಆಗಿದ್ದು, ಕೇಂದ್ರ ಈ ಬಗ್ಗೆ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಬೆಳೆದ ಬೆಳೆಗಳನ್ನು ಕೆಲ ರೈತರು ದಾಸ್ತಾನು ಮಾಡಿದ್ದು, ನೀರು ನುಗ್ಗಿ ಹಾಳಾಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಜಮೀನನಲ್ಲಿರುವ ಬೆಳೆದು ನಿಂತ ಹಾಗೂ ಕಟಾವಾಗಿ ಜಮೀನನಲ್ಲೆ ಇರುವ ಪೈರಿಗೆ , ಪರಿಹಾರ ನೀಡಲಾಗುವುದು, ಆದರೆ ದಾಸ್ತಾನು ಮಾಡಿಕೊಂಡಿರುವ ಬೆಳೆಯ ಹಾನಿಗೆ ಪರಿಹಾರ ನಿಯಮದಂತೆ ಆಗದಿರುವ ಕಾರಣ, ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸಹಾಯ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ ಜಿಲ್ಲೆಯಲ್ಲಿ ಸಿಎಂ ಮಳೆ ಹಾನಿ ಪರಿಶೀಲನೆ; ತೋಟ, ಗದ್ದೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಹಾಸನದಲ್ಲಿ ಮಳೆ ಅವಾಂತರ: ರಾತ್ರಿ ಕುಸಿದು ಬಿದ್ದ ಶಾಲಾ ಕಟ್ಟಡ, ಕೊಠಡಿ ಇಲ್ಲದೆ ಅತಂತ್ರರಾದ ವಿದ್ಯಾರ್ಥಿಗಳು

Published On - 2:36 pm, Mon, 22 November 21