ಕೋಲಾರ ಜಿಲ್ಲೆಯಲ್ಲಿ ಸಿಎಂ ಮಳೆ ಹಾನಿ ಪರಿಶೀಲನೆ; ತೋಟ, ಗದ್ದೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಕೋಲಾರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಎಂಗೆ ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ ಸಾಥ್ ನೀಡಿದ್ದಾರೆ.
ಕೋಲಾರ: ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಬಹುತೇಕ ಜಿಲ್ಲೆಗಳು ತತ್ತರಿಸಿ ಹೋಗಿವೆ. ಎಲ್ಲಿ ನೋಡಿದ್ರೂ ವರುಣನ ರೌದ್ರನರ್ತನ ಮುಂದುವರೆದಿದೆ. ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಮಳೆ ಹಾನಿಯ ಬಗ್ಗೆ ಚರ್ಚಿಸಲು ಸಭೆ ಕರೆದು ಮೀಟಿಂಗ್ ಮಾಡಿ ಕೆಲವು ಕ್ರಮಗಳನ್ನು ಕೈಗೊಂಡಿದ್ದರೆ. ಸದ್ಯ ಇಂದು ಕೋಲಾರ ಜಿಲ್ಲೆಯಲ್ಲಿ ಸಿಎಂ ಮಳೆ ಹಾನಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಕೋಲಾರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಎಂಗೆ ಸಂಸದ ಮುನಿಸ್ವಾಮಿ, ಸಚಿವ ಮುನಿರತ್ನ ಸಾಥ್ ನೀಡಿದ್ದಾರೆ. ಕೋಲಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ರಾಗಿ, ಹೂವು, ಟೊಮ್ಯಾಟೊ, ಕ್ಯಾರೆಟ್, ಶುಂಠಿ, ಬೀಟ್‌ರೂಟ್ ತೋಟಗಳಿಗೆ ಸಿಎಂ ಭೇಟಿ ನೀಡಿ ನಷ್ಟದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇನ್ನು ನರಸಾಪುರದ ರೈತ ಅಪ್ಪಣ್ಣರ ರಾಗಿ ಹೊಲಕ್ಕೆ, ಚೌಡದೇನಹಳ್ಳಿ ಗ್ರಾಮದ ಜಗದೀಶ್ ಅವರ ತೋಟಕ್ಕೆ, ಕಲ್ವಮಂಜಲಿಯ ಯಶೋದಮ್ಮ ಹೊಲಕ್ಕೆ ಸಿಎಂ ಭೇಟಿ ನೀಡಿದ್ದಾರೆ. ಹೂ ಹಾಗೂ ಕೊತ್ತಂಬರಿ ಸೊಪ್ಪಿನ ತೋಟಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಬಳಿ ಮಾಹಿತಿ ಪಡೆದಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ನೆಲಗಡಲೆ, ತೊಗರಿ, ಮುಸಕಿನ ಜೋಳ ಬೆಳೆ ಹಾನಿಯಾಗಿದೆ. ಸುಮಾರು 7000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಕೋಲಾರ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 70 ಕೋಟಿ ರೂ ನಷ್ಟ ಉಂಟಾಗಿದೆ.
ಇದನ್ನೂ ಓದಿ: ‘ಚುಟು ಚುಟು’ ಜೋಡಿಯ ‘ಅವತಾರ ಪುರುಷ’; ಸುನಿ-ಪುಷ್ಕರ್ ಕಟ್ಟಿಕೊಟ್ಟ ಚಿತ್ರದಲ್ಲಿ ಏನೆಲ್ಲ ಇರಲಿದೆ?