ಕೋಲಾರ: ಕೆಲವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನ ಬಗ್ಗೆ ಅವರಿಗೆ ಇನ್ನೆಷ್ಟು ಭಯ ಇರಬೇಕು. ನನಗೆ ಇದಕ್ಕಿಂತಲೂ ಗೌರವ ಬೇಕೆ ಎಂದು ಮಾಜಿ ಸಚಿವ ಡಾ.ಕೆ.ರಮೇಶ್ಕುಮಾರ್ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹೆಸರು ಹೇಳದೆ ಟೀಕಿಸಿದರು.
ಡಿಸಿಸಿ ಬ್ಯಾಂಕ್ನಲ್ಲಿ ಮಾತನಾಡಿದ ಅವರು, ನೆನಪಿರಲಿ ನಾನು ದೇವರಾಜ ಅರಸು ಬಳಿ ತರಬೇತಿ ಪಡೆದಿದ್ದೇನೆ. ಅವರಂತೆ 8 ವರ್ಷ ಈ ರಾಜ್ಯ ಆಳಲು ಯಾರಿಂದಲೂ ಆಗಿಲ್ಲ. ಅಂತಿಮಯಾತ್ರೆಯಲ್ಲಿ ಅರಸು ಹುಲಿ ಹೋದಂತೆ ಹೋದರು. ಯಾರಾದ್ರೂ ನನ್ನನ್ನ ಟಾರ್ಗೆಟ್ ಮಾಡಿದರೆ ಮನಸ್ಸಿನಲ್ಲಿ ಜೈ ದೇವರಾಜ ಅರಸು ಎಂದು ನೆನಪಿಸಿಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸುಧಾಕರ್ಗೆ ಟಾಂಗ್ ಕೊಟ್ಟರು.
ನಾನು ಜನರ ಕೃಪೆಯಿಂದ ಉಳಿದಿದ್ದೇನೆ. ನನ್ನ ತಾಯಿ ಅನಕ್ಷರಸ್ಥೆ, ತಂದೆ 2ನೇ ಕ್ಲಾಸ್ ಓದಿದ್ದಾರೆ. ಇಷ್ಟು ಜನ ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಅಂದ್ರೆ ಅದಕ್ಕಿಂತ ಗೌರವ ಬೇಕಾ ನನಗೆ ಎಂದು ತಮ್ಮನ್ನು ಟಾರ್ಗೆಟ್ ಮಾಡುವವರಿಗೆ ಟೇಬಲ್ ಗುದ್ದಿ ಎಚ್ಚರಿಕೆ ಕೊಟ್ಟರು.
ಡಿಸಿಸಿ ಬ್ಯಾಂಕ್ನಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ ಪಕ್ಷ, ಜಾತಿ, ಪಂಗಡ ನೋಡದೆ ಎಲ್ಲರಿಗೂ ಸಾಲ ನೀಡಿದ್ದೇವೆ. ಯಾರು ಬೇಕಾದರೂ ಸಂಘ ರಚಿಸಿಕೊಂಡು ಬಂದು ಸಾಲ ಕೇಳಬಹುದು. ಉದ್ದೇಶ ಪೂರ್ವಕವಾಗಿ ಸಾಲ ಕೊಟ್ಟಿಲ್ಲ ಅಂದ್ರೆ ಪ್ರಶ್ನಿಸಬಹುದು ಎಂದರು. ಡಿಸಿಸಿ ಬ್ಯಾಂಕ್ನಲ್ಲಿ ಅವ್ಯವಹಾರ ಆಗಿದ್ದರೆ ದಾವೆ ಹೂಡಲಿ. ಮೊಕದ್ದಮೆ ಹೂಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಸುಖಾಸುಮ್ಮನೆ ಗಾಳಿಯಲ್ಲಿ ಮಾತಾಡುವುದನ್ನು ಬಿಡಬೇಕು ಎಂದು ಡಿಸಿಸಿ ಬ್ಯಾಂಕ್ನಲ್ಲಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೆಸರು ಪ್ರಸ್ತಾಪಿಸದೇ ತಾಕೀತು ಮಾಡಿದರು.
ಇದನ್ನೂ ಓದಿ: ಸುಧಾಕರ್ಗೆ ಅಧಿಕಾರದ ಮದ! ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ- ಸಿದ್ದರಾಮಯ್ಯ ತಿರುಗೇಟು
ಇದನ್ನೂ ಓದಿ: ಕೋಲಾರ ಡಿಸಿಸಿ ಬ್ಯಾಂಕ್ನಲ್ಲಿ ಭ್ರಷ್ಟಾಚಾರ ನಡೆದಿದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
Published On - 11:06 pm, Thu, 28 October 21