Siddaramaiah: ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ ಎಂದ ಸಿದ್ದರಾಮಯ್ಯ; ನಾಳೆಯೇ ಗೊಂದಲಕ್ಕೆ ತೆರೆ?

|

Updated on: Mar 21, 2023 | 8:29 PM

ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು: ಹೈಕಮಾಂಡ್ ಸೂಚನೆ ಮೇರೆಗೆ ಕೋಲಾರ (Kolar) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಇದೀಗ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದು, ಹೈಕಮಾಂಡ್ ತೀರ್ಮಾನ ಕೈಗೊಂಡರೆ ನಾಳೆಯೇ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಆಯ್ಕೆಯ ಕ್ಷೇತ್ರಗಳ ಪೈಕಿ ಈಗಲೂ ಕೋಲಾರವನ್ನು ಹೆಸರಿಸಿರುವುದು, ಅಲ್ಲಿಂದ ಸ್ಪರ್ಧಿಸುವ ವಿಚಾರದಲ್ಲಿ ಅವರು ಇನ್ನೂ ಆಶಾವಾದಿಯಾಗಿದ್ದಾರೆಯೇ? ಆ ನಿಟ್ಟಿನಲ್ಲಿ ಹೈಕಮಾಂಡ್ ಮನವೊಲಿಸುವ ಯತ್ನ ನಡೆಸಿದ್ದಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ್ತೆ ವರುಣಾ ಕ್ಷೇತ್ರಕ್ಕೆ ಯತೀಂದ್ರ ಬರುವುದನ್ನು ತಳ್ಳಿ ಹಾಕುವಂತಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೋಲಾರದ ಜನರಿಗೂ ವರಿಷ್ಠರ ಜತೆ ಚರ್ಚಿಸಿ ತಿಳಿಸುತ್ತೇನೆ ಎಂದಿದ್ದೇನೆ. ಅರ್ಜಿಯಲ್ಲಿ ಹೈಕಮಾಂಡ್​ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂಬುದಾಗಿ ಬರೆದಿದ್ದೇನೆ. ನಾನು ಎಲ್ಲಿ ಸ್ಪರ್ಧಿಸಬೇಕೆಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನ ಮಾಡಿದರೆ ನಾಳೆಯೇ ಗೊಂದಲಕ್ಕೆ ತೆರೆ ಎಳೆಯಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯದ ಕಾರಣಕ್ಕಾಗಿ ಅಮಿತ್ ಶಾ ಬಸವಣ್ಣನ ಪ್ರತಿಮೆ ಅನಾವರಣಕ್ಕೆ ಆಗಮಿಸುತ್ತಿದ್ದಾರೆ: ಸಿದ್ದರಾಮಯ್ಯ

ಕೋಲಾರದಿಂದಲೇ ಸ್ಪರ್ಧಿಸಲಿದ್ದೇನೆ ಎಂದು ಈ ಹಿಂದೆ ಘಂಟಾಘೋಷವಾಗಿ ಹೇಳಿದ್ದ ಸಿದ್ದರಾಮಯ್ಯ ಕಳೆದ ವಾರ ಹೈಕಮಾಂಡ್​ ಭೇಟಿಯಾಗಿ ಬಂದ ನಂತರ ಆ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಶನಿವಾರ ಮಧ್ಯಾಹ್ನ ಬೆಂಗಳೂರಿನ ನಿವಾಸದಲ್ಲಿ ಬೆಂಬಲಿಗರ ಹಾಗೂ ಪಕ್ಷದ ನಾಯಕರ ಜತೆ ಸಭೆ ನಡೆಸಿದ್ದ ಅವರು, ಎಲ್ಲಿಂದ ಕಣಕ್ಕಿಳಿಯುವುದು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಈ ನಡೆಯನ್ನು ಆಡಳಿತಾರೂಢ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು. ಸಿದ್ದರಾಮಯ್ಯ ಅವರು ವರುಣಾದಲ್ಲೇ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗಿತ್ತು.

ಅಶ್ವತ್ಥ್​ ಹಾಗೂ ಸಿಟಿ ರವಿ ಸುಳ್ಳು ಕಂಪನಿಯ ತಂದೆ-ತಾಯಿ; ಡಿಕೆಶಿ ವ್ಯಂಗ್ಯ

ಉರಿಗೌಡ, ನಂಜೇಗೌಡಗೆ ಅಪ್ಪ, ಅವ್ವ ಡಾ. ಅಶ್ವತ್ಥನಾರಾಯಣ ಹಾಗೂ ಸಿಟಿ ರವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್​ನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರದ್ದು ವಾಟ್ಸ್​ಆ್ಯಪ್​ ಕಂಪನಿ ಇದೆಯಲ್ಲ, ಅದು ಸುಳ್ಳು ಸೃಷ್ಟಿಸುವ ಕಂಪನಿಯಾಗಿದೆ. ಆ ಕಂಪನಿಗೆ ಅಶ್ವತ್ಥನಾರಾಯಣ ಹಾಗೂ ಸಿಟಿ ರವಿಯೇ ತಂದೆ-ತಾಯಿ. ಅವರು ಒಕ್ಕಲಿಗರು, ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಕ್ಷಮೆ ಕೇಳಬೇಕೆಂದು ಸಿಟಿ ರವಿ ಆಗ್ರಹಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಇರುವ ವಿಚಾರ ಮಾತನಾಡಿದ್ದಕ್ಕೆ ಕುಮಾರಸ್ವಾಮಿ ಕ್ಷಮೆ ಕೇಳಬೇಕಾ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Tue, 21 March 23