Bangarpet: ಬಂಗಾರಪೇಟೆಯಲ್ಲಿ ಚಿನ್ನಕ್ಕಾಗಿ ಪಕ್ಕದ ಮನೆಯ ಅಜ್ಜಿಯನ್ನೇ ಕೊಂದ ಅಜ್ಜಿ! ಸಿಕ್ಕಿಬಿದ್ದಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ರಸ್ತೆಯಲ್ಲಿ ಹಾಕಿದ್ದ ಒಂದು ಸಿಸಿಟಿವಿ ಕ್ಯಾಮರಾವನ್ನು ನೋಡಿದ ಪೊಲೀಸರು ಅದರಲ್ಲಿ ಏನಾದ್ರು ಸುಳಿವು ಸಿಗಬಹುದಾ ಎಂದು ಪರಿಶೀಲನೆ ನಡೆಸಿದಾಗ ಅಲ್ಲಿ ಪೊಲೀಸರಿಗೆ ಬೇಕಾದ ಎಲ್ಲಾ ಮಾಹಿತಿ ಸಿಕ್ಕಿತ್ತು. ಅಷ್ಟೇ ಅಲ್ಲಾ ಕೊಲೆ ಆರೋಪಿಗಳನ್ನು ಕೂಡಾ ಅದೇ ಸಿಸಿಟಿವಿ ಕ್ಯಾಮರಾ ತನ್ನಲ್ಲಿ ಹಿಡಿದಿಟ್ಟುಕೊಂಡಿತ್ತು.
ಆಕೆಗೆ ವಯಸ್ಸಾಗಿತ್ತು, ತನ್ನ ಮಕ್ಕಳ ಮನೆಯಲ್ಲಿ ಮೊಮ್ಮಕ್ಕಳನ್ನು ಆಟವಾಡಿಸಿಕೊಂಡು ಬದುಕುತ್ತಿದ್ದ ವೃದ್ದೆ. ಆದರೆ ಅಂಥ ವೃದ್ದೆಯನ್ನೂ ಬಿಡದೆ ಯಾರೋ ಕೊಲೆ ಮಾಡಿ ಆಕೆಯ ಮೈ ಮೇಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು. ಆದರೆ ಈ ಪ್ರಕರಣವನ್ನು ಬೇಧಿಸಿದ ಪೊಲೀಸರಿಗಂತೂ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಆ ವೃದ್ದೆಯನ್ನು ಕೊಂದಿದ್ದು ಅದೇ ವಯಸ್ಸಿನ ಮತ್ತೊಬ್ಬ ವೃದ್ದೆ ಅನ್ನೋದು! ಹಂತಕಿ ತನ್ನ ಮಗನೊಂದಿಗೆ ಹೋಗಿ ಹೇಯ ಕೃತ್ಯವೆಸಗಿದ್ದಳು. ಅಷ್ಟಕ್ಕೂ ಏನ್ನಿದು ಸ್ಟೋರಿ? ಇಲ್ಲಿದೆ ಡೀಟೇಲ್ಸ್..
ಆವತ್ತು ಅಕ್ಟೋಬರ್ 13 ಇನ್ನೇನು ಸಂಜೆಯಾಗುತ್ತಿತ್ತು. ಆ ವೇಳೆಗೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಶಾಂತಿನಗರದಿಂದ ಬಂಗಾರಪೇಟೆ ಪೊಲೀಸ್ ಠಾಣೆಗೆ ಪೋನ್ ಕರೆಯೊಂದು ಬಂದಿತ್ತು. ಮನೆಯಲ್ಲಿದ್ದ ಸುಮಾರು 70 ವರ್ಷ ವಯಸ್ಸಿನ ಗೀತಾ ಎಂಬುವರನ್ನು ಯಾರೋ ಕೊಲೆ ಮಾಡಿ ಅವರ ಮೈಮೇಲಿದ್ದ ಒಡವೆಗಳನ್ನೆಲ್ಲಾ ದೋಚಿಕೊಂಡು ಪರಾರಿಯಾಗಿದ್ದಾರೆ, ಪ್ರಕರಣ ನೋಡಲು ನಮಗೆ ಅನುಮಾನಾಸ್ಪದವಾಗಿದೆ ಎಂದು ಪ್ರಕರಣ ಕೇಳುತ್ತಿದ್ದಂತೆ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಬಂದು ನೋಡಲಾಗಿ ವೃದ್ದೆಯನ್ನು ಕತ್ತುಹಿಸುಕಿ ಸಾಯಿಸಿ, ಮೈಮೇಲಿದ್ದ ಒಡವೆಗಳನ್ನು ದೋಚಿದ್ದ ಹಂತಕರು ಅಲ್ಲಿ ಶ್ವಾನದಳಕ್ಕೆ ಮಾಹಿತಿ ಸಿಗಬಾರದೆಂದು ಖಾರದ ಪುಡಿಯನ್ನು ಎರೆಚಿದ್ದರು ಅನ್ನೋದು ಮೇಲ್ನೋಟಕ್ಕೆ ತಿಳಿದು ಬರುತ್ತಿತ್ತು.
ಅವತ್ತು ಜೋರು ಮಳೆ ಬೆಂಬಿಡದೆ ಸುರಿಯುತ್ತಲೇ ಇತ್ತು, ಸಂಜೆಯಾಗಿ ಹೋಗಿತ್ತು ಈ ಸಮಯದಲ್ಲಿ ಪೊಲೀಸರಿಗೆ ಈ ಕೊಲೆ ಪ್ರಕರಣವನ್ನು ಬೇಧಿಸುವುದು ಒಂದು ರೀತಿಯ ತಲೆನೋವಾಗಿ ಪರಿಣಮಿಸಿತ್ತು, ಯಾಕಂದ್ರೆ ಮೃತಪಟ್ಟಿದ್ದ ವೃದ್ದೆಯ ಮೈಮೇಲೆ ಅಷ್ಟೊಂದು ಗಾಯಗಳು ಕಂಡು ಬಂದಿಲ್ಲ, ಬಾಯಿಯಲ್ಲಿ ನೊರೆ ಬಂದಿತ್ತು, ಮನೆಯಲ್ಲಿ ಖಾರದ ಪುಡಿ ಚೆಲ್ಲಾಡಲಾಗಿತ್ತು, ಇದನ್ನು ಕಂಡ ಪೊಲೀಸರಿಗೆ ಅಕಸ್ಮಾತ್ ಅಜ್ಜಿಯೇ ಮನೆಯಲ್ಲಿ ಕೆಲಸ ಮಾಡುವಾಗ ಕೆಳಗೆ ಬಿದ್ದಿರಬಹುದಾ? ಮೈಮೇಲಿದ್ದ ಒಡವೆಗಳನ್ನು ಆಕೆಯೇ ಬಿಚ್ಚಿಟ್ಟಿರಬಹುದು ಅನ್ನೋ ಅನುಮಾನ ಕೂಡಾ ಇವರಿಗೆ ಕಾಡುತ್ತಿತ್ತು, ಹಾಗಾಗಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲನೆ ನಡೆಸಲು ಶುರುಮಾಡಿದ್ರು. ಏನಾದ್ರು ಸಾಕ್ಷಿಗಳು ಸಿಗುತ್ತವಾ ಅನ್ನೋದನ್ನು ಹುಡುಕಲು ಶುರುಮಾಡಿದ್ರು. (ವರದಿ: ರಾಜೇಂದ್ರ ಸಿಂಹ, ಕೋಲಾರ)
ಅಂದು ಬೆಂಬಿಡದೆ ಸುರಿಯುತ್ತಿರುವ ಮಳೆಯಲ್ಲೂ ಸ್ಥಳಕ್ಕೆ ಡಿವೈಎಸ್ಪಿ ರಮೇಶ್, ಕೆಜಿಎಫ್ ಎಸ್ಪಿ ಧರಣಿ ದೇವಿ ಅವರು ಕೂಡಾ ರಾತ್ರಿಯಲ್ಲೇ ಬಂದು ಸ್ಥಳ ಪರಿಶೀಲನೆ ನಡೆಸಿದ್ರು ಈವೇಳೆ ಇದೊಂದು ಕೊಲೆ ಅನ್ನೋದು ತಿಳಿದು ಬಂದಿತ್ತು, ಪೊಲೀಸರು ಕೂಡಾ ಇದೊಂದು ವೃದ್ದೆಯ ಮೈಮೇಲಿದ್ದ ಒಡವೆಗಳನ್ನು ದೋಚಲು ಮಾಡಲಾಗಿರುವ ಕೊಲೆ ಅನ್ನೋ ನಿರ್ಧಾರಕ್ಕೆ ಬಂದು, ಕೊಲೆ ಮಾಡಿದವರ ಸುಳಿವು ಏನಾದ್ರು ಸಿಗುತ್ತಾ ಅನ್ನೋ ಹಿನ್ನೆಲೆ ಹುಡುಕಾಟ ಮಾಡಿದರಾದರೂ ರಾತ್ರಿಯಾಗಿತ್ತು, ಜೊತೆಗೆ ಮಳೆ ಬರುತ್ತಿದ್ದ ಕಾರಣ ಪೊಲೀಸರಿಗೆ ಅಷ್ಟಾಗಿ ಯಾವುದೇ ಮಾಹಿತಿ ಸಿಗಲಿಲ್ಲ ಆದರೆ ಕೊಲೆಯಾದ ಮನೆ ಎದುರಲ್ಲೇ ಮನೆ ನಿರ್ಮಾಣ ಕೆಲಸ ನಡೆಯುತ್ತಿತ್ತು ಈವೇಳೆ ಅಲ್ಲಿದ್ದ ಹೊರ ರಾಜ್ಯದವರು ಯಾರಾದ್ರು ಈ ಕೃತ್ಯ ಮಾಡಿರಬಹುದಾ ಅನ್ನೋ ಅನುಮಾನ ಕೂಡಾ ಪೊಲೀಸರಲ್ಲಿತ್ತು.
ಈ ಎಲ್ಲಾ ಅನುಮಾನಗಳ ನಡುವೆಯೇ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಕೊಲೆಯಾದ ಗೀತಾ ಅವರ ಮಗ ಸಂದೀಪ್ ಅವರನ್ನು ಮೊದಲು ಶವವನ್ನು ನೋಡಿದ ಕಾರಣ ಅವರ ಬಳಿ ಮಾಹಿತಿಯನ್ನು ಪಡೆದುಕೊಂಡರು. ಯಾರ ಮೇಲಾದ್ರು ಅನುಮಾನ ಇದೆಯಾ ಅನ್ನೋ ಮಾಹಿತಿಗಳನ್ನೂ ಕಲೆಹಾಕಿದರು, ಆದರೆ ಯಾವುದೇ ಸುಳಿವು ಸಿಗಲಿಲ್ಲ. ಆದರೆ ಅದೇ ರಸ್ತೆಯಲ್ಲಿ ಹಾಕಿದ್ದ ಒಂದು ಸಿಸಿಟಿವಿ ಕ್ಯಾಮರಾವನ್ನು ನೋಡಿದ ಪೊಲೀಸರು ಅದರಲ್ಲಿ ಏನಾದ್ರು ಸುಳಿವು ಸಿಗಬಹುದಾ ಎಂದು ಪರಿಶೀಲನೆ ನಡೆಸಿದಾಗ ಅಲ್ಲಿ ಪೊಲೀಸರಿಗೆ ಬೇಕಾದ ಎಲ್ಲಾ ಮಾಹಿತಿ ಸಿಕ್ಕಿತ್ತು. ಅಷ್ಟೇ ಅಲ್ಲಾ ಕೊಲೆ ಆರೋಪಿಗಳನ್ನು ಕೂಡಾ ಅದೇ ಸಿಸಿಟಿವಿ ಕ್ಯಾಮರಾ ತನ್ನಲ್ಲಿ ಹಿಡಿದಿಟ್ಟುಕೊಂಡಿತ್ತು.
ಸಿಸಿಟಿವಿ ಕ್ಯಾಮರಾದ ಪರಿಶೀಲನೆ ನಡೆಸಿದ ಪೊಲೀಸರಿಗೆ ಕೊಲೆಯಾದ ದಿನ ಅಂದ್ರೆ ಅಕ್ಟೊಬರ್ 13 ರಂದು ಸಂದೀಪ್ ಅವರ ಪತ್ನಿ, ಮಗ ಎಲ್ಲರೂ ಮನೆಯಿಂದ ಹೋದ ನಂತರ ಸುಮಾರು 12.30 ರ ಸುಮಾರಿಗೆ ಕೊಲೆಯಾದ ಮನೆಯೊಳಗೆ ಒಬ್ಬ ವೃದ್ದೆ ಹಾಗೂ ಒಬ್ಬ ವ್ಯಕ್ತಿ ಒಳಗಹೋಗಿ ಸುಮಾರು ಅರ್ಧ ಗಂಟೆಯ ನಂತರ ಅವರಿಬ್ಬರೂ ಹೊರ ಹೋಗುವ ದೃಶ್ಯಗಳು ಸೆರೆಯಾಗಿದ್ದವು. ಅದಲ್ಲದೆ ಅವರು ಹೋಗಿ ಬಂದ ನಂತರ ಆ ಮನೆಯೊಳಗೆ ಯಾರೂ ಹೋಗಿಲ್ಲ, ನಾಲ್ಕು ಗಂಟೆ ಸುಮಾರಿಗೆ ಸಂದೀಪ್ ಅವರ ಮಗ ಸ್ಕೂಲ್ ಮುಗಿಸಿಕೊಂಡು ಮನೆಗೆ ಬರುವ ದೃಶ್ಯಗಳು ಆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದ ಆ ಕೊಲೆ ಮಾಡಿರುವುದು ಆ ವೃದ್ದೆ ಹಾಗೂ ಆಕೆ ಜೊತೆಗಿದ್ದ ವ್ಯಕ್ತಿಯೇ ಎಂಬ ನಿರ್ಧಾರಕ್ಕೆ ಬಂದ ಪೊಲೀಸರಿಗೆ ಅವರು ಯಾರು ಅನ್ನೋದನ್ನ ಪರಿಶೀಲನೆ ನಡೆಸಿದಾಗ ಅವರಿಬ್ಬರು ಕೂಡಾ ಕೊಲೆಯಾದ ಮನೆಯ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ 70 ವರ್ಷದ ಶಾಂತಾಬಾಯಿ ಹಾಗೂ ಆಕೆಯ ಮಗ 47 ವರ್ಷದ ಆನಂದ್ ಕಿರಣ್ ಸಿಂದೆ ಅನ್ನೋದು ತಿಳಿದು ಬಂದಿತ್ತು.
ಪೊಲೀಸರು ತಮಗೆ ಸಿಕ್ಕ ಮಾಹಿತಿ ಮೇರೆಗೆ ಕೊಲೆ ಮಾಡಿದ ಆರೋಪಿಗಳಿದ್ದ ಮನೆಯನ್ನು ಹೋಗಿ ನೋಡಲಾಗಿ ಪಕ್ಕದ ಮನೆಯಲ್ಲಿ ವಾಸವಿದ್ದ ವೃದ್ದೆ ಶಾಂತಾಬಾಯಿ ಹಾಗೂ ಆನಂದ್ ಕಿರಣ್ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಅವರಿಬ್ಬರು ತಲೆಮರೆಸಿಕೊಂಡು ಆಂಧ್ರದ ಕುಪ್ಪಂ, ತಿರುಪತಿ, ಬೆಂಗಳೂರು, ಸುತ್ತಾಡಿಕೊಂಡು ಬಂದು ಕೆಜಿಎಫ್ನಲ್ಲಿ ತಲೆಮರೆಸಿಕೊಂಡಿರುವುದು ತಿಳಿದುಬಂದಿತ್ತು. ಪೊಲೀಸರು ಕೆಜಿಎಫ್ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುತ್ತಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಕೊಲೆ ಮಾಡಿದ ಆರೋಪಿಗಳು ಅಸಲಿಯತ್ತನ್ನ ಬಾಯಿ ಬಿಟ್ಟಿದ್ದರು.
ಅಷ್ಟಕ್ಕೂ ಬಂಧಿಯಾದ ಆರೋಪಿಗಳು ಪೊಲೀಸರಿಗೆ ಬಾಯಿಬಿಟ್ಟ ಸತ್ಯವಾದರೂ ಏನು ಅಂತ ನೋಡಿದ್ರೆ, ಕಳೆದ ಮೂರು ವರ್ಷಗಳಿಂದ ಕೊಲೆಯಾದ ಗೀತಾ ಅವರ ಪಕ್ಕದ ಮನೆಯಲ್ಲಿ ವಾಸವಿದ್ದ ಶಾಂತಾಬಾಯಿ ಹಾಗೂ ಮಗ ಆನಂದ್ ಕಿರಣ್, ಅವರನ್ನು ಗಮನಿಸಿದ್ದರು. ಇತ್ತೀಚೆಗೆ ಆನಂದ್ ಕುಮಾರ್ ಹಾಗೂ ಶಾಂತಾಬಾಯಿ ಅವರಿಗೆ ಹಣದ ಅನಿವಾರ್ಯವಿದ್ದ ಕಾರಣ ದುಡ್ಡಿಗಾಗಿ ಪರಿತಪಿಸುವ ಸ್ಥಿತಿ ಬಂದಿತ್ತು. ಹಾಗಾಗಿ ಬೇರೆ ದಾರಿ ಕಾಣದೆ ತಾವು ಪಕ್ಕದ ಮನೆಯಲ್ಲಿದ್ದ ವೃದ್ದೆ ಮೈಮೇಲಿದ್ದ ಒಡವೆಗಳನ್ನು ಕದಿಯುವ ಪ್ಲಾನ್ ಮಾಡಿದ್ರು . ಈ ವೇಳೆ ಅವತ್ತು ಮಧ್ಯಾಹ್ನ ಮನೆಯ ಒಳಗೆ ಹೋಗಿ ಆಕೆಗೆ ಒಡವೆ ಅಥವಾ ಹಣ ಕೊಡುವಂತೆ ಬೆದರಿಸಿದ್ದಾರೆ. ಆದರೆ ಅವರು ಅದಕ್ಕೆ ಒಪ್ಪದ ಕಾರಣ ಅವರ ಮುಖಕ್ಕೆ ಖಾರದ ಪುಡಿ ಎರಚಿ ಅವರು ಕೆಳಗೆ ಬಿದ್ದ ಮೇಲೆ ಅವರ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಸಾಯಿಸಿ ನಂತರ ಅವರ ಮೈಮೇಲಿದ್ದ ಚಿನ್ನದ ಸರ ಹಾಗೂ ಚಿನ್ನದ ಕೈಬಳೆಗಳನ್ನು ತೆಗೆದುಕೊಂಡು ಇಬ್ಬರೂ ಪರಾರಿಯಾಗಿದ್ದರು, ನಂತರ ಒಡವೆಗಳನ್ನು ಕುಪ್ಪಂನ ಅಂಗಡಿಯಲ್ಲಿ ಮಾರಿ, ಬಂದ ಹಣ ತೆಗೆದುಕೊಂಡು ತಿರುಪತಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಬಂದು ನಂತರ ಕೆಜಿಎಫ್ನಲ್ಲಿ ಸಂಬಂಧಿಕರೊಬ್ಬರ ಮನೆಗೆ ಹೋಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಒಟ್ಟಾರೆ ಹಣಕ್ಕಾಗಿ ಹಲವು ವರ್ಷಗಳಿಂದ ಪಕ್ಕದ ಮನೆಯಲ್ಲೇ ವಾಸವಿದ್ದು ನೆರೆಹೊರೆಯವರು ಒಬ್ಬರ ಕಷ್ಟಕ್ಕೆ ಒಬ್ಬರು ಆಗುವಂತಹ ವಾತಾವರಣ ಇರಬೇಕು. ಆದರೆ ಇಲ್ಲಿ ಕಷ್ಟ ಎಂದು ಪಕ್ಕದ ಮನೆಯವರನ್ನು ಕೊಲೆ ಮಾಡುವ ಮಟ್ಟಿಗೆ ಹೋಗಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ. ಅದರಲ್ಲೂ ಒಬ್ಬ ವೃದ್ದೆಯನ್ನು ಮತ್ತೊಬ್ಬ ವೃದ್ದೆಯೇ ಕೊಲೆ ಮಾಡಲು ತನ್ನ ಮಗನನ್ನೇ ಬಳಸಿಕೊಂಡು ಹಣ ದೋಚಿರುವುದು ನಿಜಕ್ಕೂ ದುರಂತವೇ ಸರಿ. ಅದಕ್ಕೇ ಇರಬೇಕು ಈಗಿನ ಕಾಲದಲ್ಲಿ ಯಾರನ್ನು ಯಾರೂ ನಂಬೋದಕ್ಕೆ ಆಗೋದಿಲ್ಲ ಅನ್ನೋದು.
Published On - 4:43 pm, Wed, 19 October 22