ಕೋಲಾರ​: ರಾಗಿ ಖರೀದಿ ಕೇಂದ್ರದಲ್ಲಿ ಇಲ್ಲ ಸರಿಯಾದ ಸೌಕರ್ಯ; ರೈತರಲ್ಲಿ ಹೆಚ್ಚಿದ ಆತಂಕ

| Updated By: preethi shettigar

Updated on: Feb 18, 2022 | 11:28 AM

ಕೋಲಾರ ತಾಲ್ಲೂಕೊಂದರಲ್ಲೇ ಈವರೆಗೆ 3186 ಜನ ರೈತರು ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ, ಸರ್ಕಾರ ನಿಗದಿ ಮಾಡಿರುವಂತೆ ಕ್ವಿಂಟಾಲ್​ಗೆ 3377 ರೂಪಾಯಿಗೆ ರೈತರಿಂದ ಖರೀದಿ ಮಾಡಲಾಗುತ್ತಿದೆ. ಸದ್ಯ ಈ ಬಾರಿ ಕನಿಷ್ಠ 30070 ಕ್ವಿಂಟಾಲ್​ ರಾಗಿ ಸಂಗ್ರಹವಾಗುವ ನಿರೀಕ್ಷೆ ಇದೆ.

ಕೋಲಾರ​: ರಾಗಿ ಖರೀದಿ ಕೇಂದ್ರದಲ್ಲಿ ಇಲ್ಲ ಸರಿಯಾದ ಸೌಕರ್ಯ; ರೈತರಲ್ಲಿ ಹೆಚ್ಚಿದ ಆತಂಕ
ರಾಗಿ ಮಾರಾಟ ಮಾಡಲು ರೈತರಿಂದ ಪರದಾಟ
Follow us on

ಕೋಲಾರ ​: ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ದಿನಗಟ್ಟಲೆ ಸಾಲು ನಿಲ್ಲಬೇಕಿದೆ. ತಾವು ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿದಿಯೇ ಇಲ್ಲವೇ ಎನ್ನುವುದನ್ನು ಪರಿಶೀಲನೆ ಮಾಡಲು ಹಣ ಕೊಡಬೇಕು. ಅಷ್ಟೇ ಯಾಕೆ ಬೆವರು ಸುರಿಸಿ ತಾವು ಬೆಳೆದ ಬೆಳೆಯನ್ನು(Crop) ಮಾರಾಟ ಮಾಡಲು ಅನ್ನ ನೀರು ಇಲ್ಲದೆ ಕಾಯಬೇಕಾದ ಸ್ಥಿತಿ ಇದೆ. ಒಟ್ಟಾರೆ ಕೋಲಾರ ತಾಲ್ಲೂಕು ಗದ್ದೆಕಣ್ಣೂರು ಬಳಿ ಇರುವ ರಾಗಿ ಖರೀದಿ ಕೇಂದ್ರದ ಬಳಿ ರಾಗಿ(Maillet) ಖರೀದಿ ನೊಂದಣಿ ಮಾಡಿಸಲು ರೈತರು(Farmers) ಪರದಾಡುವ ಸ್ಥಿತಿ ಇದೆ.

ಜನವರಿ 1 ರಿಂದ ರಾಗಿ ಖರೀದಿಗೆ ನೊಂದಣಿ ಆರಂಭ ಮಾಡಲಾಗಿದ್ದು, ಫೆಬ್ರವರಿ 11 ರಿಂದ ಖರೀದಿ ಆರಂಭವಾಗಿದೆ. ಆದರೆ ರಾಗಿ ಖರೀದಿ ಕೇಂದ್ರಕ್ಕೆ ತಾವು ಬೆಳೆದ ರಾಗಿಯನ್ನು ಮಾರಾಟ ಮಾಡಲು ಬರುವ ರೈತರಿಗೆ ಸರಿಯಾದ ಸೌಕರ್ಯಗಳಿಲ್ಲದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಗಿ ಮಾರಾಟ ಮಾಡಲು ಬರುವ ರೈತರು ರಾಗಿಯನ್ನು ಆಹಾರ ನಿಗಮದ ಗೋಡೋನ್​ನಲ್ಲಿ ಇಳಿಸಲು ಕನಿಷ್ಠ ಒಂದರಿಂದ ಎರಡು ದಿನಗಳ ಕಾಲ ಕಾಯಬೇಕಿದೆ.

ಇಲ್ಲಿ ರೈತರಿಂದ ಚೀಲಕ್ಕೆ ಇಂತಿಷ್ಟು ಹಣ ಎಂದು, ಅದರ ಗುಣಮಟ್ಟ ಪರಿಶೀಲನೆ ಮಾಡಲು ಇಂತಿಷ್ಟು ಹಣ ಎಂದು ರೈತರಿಂದ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಇನ್ನು ಊರ ಹೊರಗಿರುವ ರಾಗಿ ಖರೀದಿ ಕೇಂದ್ರದ ಬಳಿ ಬರುವ ರೈತರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದೆ ಅಧಿಕಾರಿಗಳು ರಾಗಿ ಖರೀದಿ ನೆಪದಲ್ಲಿ ರೈತರನ್ನು ಹಿಂಸಿಸುತ್ತಿದ್ದಾರೆ ಎಂದು ರೈತ ಬೈರೇಗೌಡ ಆರೋಪ ಮಾಡಿದ್ದಾರೆ.

ಕೋಲಾರ ತಾಲ್ಲೂಕೊಂದರಲ್ಲೇ ಈವರೆಗೆ 3186 ಜನ ರೈತರು ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ, ಸರ್ಕಾರ ನಿಗದಿ ಮಾಡಿರುವಂತೆ ಕ್ವಿಂಟಾಲ್​ಗೆ 3377 ರೂಪಾಯಿಗೆ ರೈತರಿಂದ ಖರೀದಿ ಮಾಡಲಾಗುತ್ತಿದೆ. ಸದ್ಯ ಈ ಬಾರಿ ಕನಿಷ್ಠ 30070 ಕ್ವಿಂಟಾಲ್​ ರಾಗಿ ಸಂಗ್ರಹವಾಗುವ ನಿರೀಕ್ಷೆ ಇದೆ.

ಫೆಬ್ರವರಿ 11 ರಿಂದ ಈವರೆಗೆ 188 ಜನ ರೈತರಿಂದ 2400 ಕ್ವಿಂಟಾಲ್​ ರಾಗಿ ಖರೀದಿ ಮಾಡಲಾಗಿದೆ. ಆದರೆ ಇಷ್ಟೊಂದು ಜನ ರೈತರು ರಾಗಿ ಖರೀದಿ ಮಾಡಲು ಈ ಮೊದಲೇ ಹೆಸರು ನೊಂದಾಯಿಸಿಕೊಂಡಿದ್ದರು ಕೂಡಾ ಇಲಾಖೆ, ಶೀಘ್ರವಾಗಿ ಅನ್​ ಲೋಡ್​ ಮಾಡುವ ರೈತರಿಗೆ ಕನಿಷ್ಠ ಕುಡಿಯುವ ನೀರು ಸೇರಿದಂತೆ ವ್ಯವಸ್ಥೆಗಳನ್ನು ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ. ಅಷ್ಟೇ ಅಲ್ಲದೆ ರೈತರಿಂದ ಪ್ರತಿಯೊಂದು ಹಂತದಲ್ಲಿ ಲಂಚದ ರೂಪದಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಇನ್ನು ಈ ಬಗ್ಗೆ ಆಹಾರ ನಿಗಮದ ಅಧಿಕಾರಿ ಚೌಡೇಗೌಡ ಅವರನ್ನು ಕೇಳಿದರೆ ನಮಗೆ ಆ ರೀತಿ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಾರೆ ಎಲ್ಲಾ ಪಕ್ಷಗಳು ಸರ್ಕಾರಗಳು ರೈತರ ಪರವಾಗಿಯೇ ಮಾತನಾಡುತ್ತಾರೆ. ಆದರೂ ರೈತರು ಮಳೆ, ಗಾಳಿ ಎನ್ನದೆ ಹಗಲು-ರಾತ್ರಿ ಬೆವರು ಸುರಿಸಿ ಬೆಳೆಯುವ ಬೆಳೆಯನ್ನು ಮಾರಾಟ ಮಾಡಲು ಹೀಗೆ ರಸ್ತೆಯಲ್ಲಿ ನಿಂತು ಕಷ್ಟ ಪಟ್ಟು ಲಂಚ ಕೊಟ್ಟು ಮಾರಾಟ ಮಾಡುವ ಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸವೇ ಸರಿ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:
ಧಾರವಾಡ: ಬೆಂಬಲ ಬೆಲೆ ಯೋಜನೆ; ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಆದೇಶ

ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು