ಕೋಲಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಮಕ್ಕಳ ಮಾರಾಟ ದಂಧೆ ಸಕ್ರಿಯದ ಬಗ್ಗೆ ಅನುಮಾನ!

| Updated By: preethi shettigar

Updated on: Nov 14, 2021 | 7:35 AM

ಕೋಲಾರ ನಗರದ ಕಾರಂಜಿಕಟ್ಟೆ ನಿವಾಸಿಯಾದ ಮುನಿಯಪ್ಪ ಅವರ ಪುತ್ರಿ ಪುಷ್ಪಾ ಅವರು ಆತ್ಮಹತ್ಯೆಗೂ ಮೊದಲು ಬರೆದ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಈ ಡೆತ್ ನೋಟ್ ಆಧಾರದಲ್ಲಿ ನವಜಾತ ಶಿಶುವನ್ನು ಮಗುವಿನ ತಂದೆ ಸತ್ಯ ಹಾಗೂ ಗೀತಾ ಎಂಬುವವರು ಮಾರಾಟ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕೋಲಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಮಕ್ಕಳ ಮಾರಾಟ ದಂಧೆ ಸಕ್ರಿಯದ ಬಗ್ಗೆ ಅನುಮಾನ!
ಗೀತಾ ಹಾಗೂ ಮಗುವಿನ ತಂದೆ ಸತ್ಯ. ಪುಷ್ಪ ಸೇರಿ 5 ಜನರ ಸಿಸಿಟಿವಿ ದೃಶ್ಯ
Follow us on

ಕೋಲಾರ: ಒಂದು ತಿಂಗಳ ಹೆಣ್ಣು ಮಗುವೊಂದನ್ನು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮರ್ಯಾದೆಗಂಜಿ ಐದು ಜನರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಐವರು ಆತ್ಮಹತ್ಮೆ(Suicide) ವಿಚಾರದಲ್ಲಿ ಜಿಲ್ಲೆಯಲ್ಲಿ ಮಗು ಮಾರಾಟ ದಂಧೆ ಸಕ್ರಿಯವಾಗಿದೆಯಾ ಎನ್ನುವ ಅನುಮಾನ ಮೂಡಲಾರಂಭಿಸಿದ್ದು, ಈ ವಿಚಾರವಾಗಿ ಅಮಾಯಕರು ಬಲಿಯಾದರಾ ಎನ್ನುವ ಶಂಕೆ ಎಲ್ಲರನ್ನು ಕಾಡಲಾರಂಭಿಸಿದೆ. ನವಜಾತ ಶಿಶುವೊಂದರ ಅಪಹರಣಕ್ಕೆ ಸಂಬಂಸಿದಂತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ಒಂದೇ ಕುಟುಂಬದ ಐವರು ತಂಪು ಪಾನಿಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಗುವಿನ ತಂದೆ ಸತ್ಯ ಹಾಗೂ ಮಗುವನ್ನು ಪಡೆದಿದ್ದ ಗೀತಾ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಗು ಮಾರಾಟ ಮಾಡಿರುವ ಬಗ್ಗೆ ಡೆತ್ ನೋಟ್ನಲ್ಲಿ ಪ್ರಸ್ತಾಪ
ಕೋಲಾರ ನಗರದ ಕಾರಂಜಿಕಟ್ಟೆ ನಿವಾಸಿಯಾದ ಮುನಿಯಪ್ಪ ಅವರ ಪುತ್ರಿ ಪುಷ್ಪಾ ಅವರು ಆತ್ಮಹತ್ಯೆಗೂ ಮೊದಲು ಬರೆದ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಈ ಡೆತ್ ನೋಟ್ ಆಧಾರದಲ್ಲಿ ನವಜಾತ ಶಿಶುವನ್ನು ಮಗುವಿನ ತಂದೆ ಸತ್ಯ ಹಾಗೂ ಗೀತಾ ಎಂಬುವವರು ಮಾರಾಟ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜತೆಗೆ ಪೊಲೀಸರು ತಮಗೆ ಕಿರುಕುಳ ನೀಡಿದರು ಎಂದು ದೂರಿದ್ದಾರೆ. ಗೀತಾ ಹಾಗೂ ಮಗುವಿನ ತಂದೆ ಸತ್ಯ ಎಂಬುವವರು ಮಗುವನ್ನು 50 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದು, ಇಬ್ಬರೂ ಹಣ ಹಂಚಿಕೊಂಡಿದ್ದನ್ನು ತಾನು ಕಣ್ಣಾರೆ ಕಂಡಿರುವುದಾಗಿ ಆ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಮಗುವಿನ ಮಾರಾಟದ ಬಗ್ಗೆ ಪೊಲೀಸರಿಗೆ ಹೇಳಿದರೆ ನಿನ್ನ ಮಗಳನ್ನು ಸಾಯಿಸುವುದಾಗಿ ಗೀತಾ ಬೆದರಿಕೆ ಹಾಕಿದ್ದಳು. ಈ ಕಾರಣದಿಂದಲೇ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಬರೆದಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಹಾಗೂ ಸುಮಿತ್ರ ಎಂಬುವವರು ಪ್ರೀತಿಸಿ ಗುಟ್ಟಾಗಿ ಮದುವೆಯಾಗಿದ್ದರು. ಈ ನಡುವೆ ಅವರಿಗೆ ಒಂದು ಹೆಣ್ಣು ಮಗುವಾಗಿತ್ತು. ಆಗ ಮನೆಯವರಿಗೆ ವಿಷಯ ತಿಳಿಯುತ್ತದೆ ಎನ್ನುವ ಭಯದಲ್ಲಿ ಮಗುವನ್ನು ತಮ್ಮ ಪರಿಚಯಸ್ಥರಾದ ಕಾರಂಜಿಕಟ್ಟೆ ನಿವಾಸಿ ಗೀತಾ ಎನ್ನುವವರಿಗೆ ಸತ್ಯ ಹಾಗೂ ಸುಮಿತ್ರ ಅಕ್ಟೋಬರ್ 18 ರಂದು ಕೊಟ್ಟಿದ್ದರು. ಈ ವೇಳೆ ಗೀತಾರ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದ ಪುಷ್ಪಾ ಎಂಬಾಕೆ ಹೋಗಿದ್ದರು ಎನ್ನುವ ಕಾರಣಕ್ಕೆ ಸತ್ಯ ಹಾಗೂ ಸಮಿತ್ರ ಮಗು ಅಪಹರಣ ಪ್ರಕರಣದಲ್ಲಿ ಪುಷ್ಪಾ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಪರಿಣಾಮವಾಗಿ ಹೆದರಿದ ಪುಷ್ಪಾ ಹಾಗೂ ಅವರ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗು ತೆಗೆದುಕೊಂಡು ಹೋಗಿರುವ ಸಿಸಿಟಿವಿ ದೃಶ್ಯ ಲಭ್ಯ
ಗೀತಾ ಹಾಗೂ ಮಗುವಿನ ತಂದೆ ಸತ್ಯ ಜೊತೆಗೆ ಪುಷ್ಪ, ಮಗುವಿನ ತಾಯಿ ಸುಮಿತ್ರ, ಸುಮಿತ್ರ ತಾಯಿ, ಸೇರಿ ಒಟ್ಟು ಐದು ಜನರು ಎಲ್ಲರೂ ನಗರದ ಸೋಮೇಶ್ವರ ದೇವಾಲಯದ ಬಳಿ ಕುಳಿತು ಮಾತನಾಡಿ ಮಗುವನ್ನು ತೆಗೆದುಕೊಂಡು ಹೋಗಿರುವ ಸಿಸಿಟಿವಿ ವಿಡಿಯೋಗಳು ಪೊಲೀಸರಿಗೆ ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಗೀತಾ ಹಾಗೂ ಪುಷ್ಪಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಜತೆಗೆ ಏಳು ದಿನಗಳಲ್ಲಿ ಮಗುವನ್ನು ವಾಪಸ್ ತಂದುಕೊಡುವಂತೆ ಸೂಚಿಸಿದ್ದರು. ಪೊಲೀಸರು ಠಾಣೆಗೆ ಕರೆದೊಯ್ದಿದ್ದರಿಂದ ಬೇಸರಗೊಂಡಿದ್ದ ಪುಷ್ಪಾ ಮತ್ತು ಕುಟುಂಬ ಸದಸ್ಯರು ಬಂಧನ ಭೀತಿಯಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡೆತ್ ನೋಟ್ ಆಧರಿಸಿ ಪ್ರಕರಣ ದಾಖಲು
ಪುಷ್ಪಾ ಅವರ ಡೆತ್ ನೋಟ್ ಆಧರಿಸಿ ಗೀತಾ ಮತ್ತು ಸತ್ಯನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗೀತಾ ತಲೆಮರೆಸಿಕೊಂಡಿದ್ದು, ಮಗುವಿನ ಬಗ್ಗೆ ಸುಳಿವು ಸಿಕ್ಕಿಲ್ಲ. ಮಗುವಿನ ತಂದೆ ಸತ್ಯ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಗೀತಾ ಸಿಕ್ಕ ನಂತರವಷ್ಟೇ ಪ್ರಕರಣದ ಅಸಲಿಯತ್ತು ತಿಳಿಯಲಿದೆ ಎಂದು ಕೋಲಾರ ಎಸ್​ಪಿ ಕಿಶೋರ್ ಬಾಬು ಹೇಳಿದ್ದಾರೆ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:
ಮಗು ಅಪರಹಣ ಪ್ರಕರಣ; ಕೋಲಾರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಸಾವು

ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಸದಸ್ಯೆ ಆತ್ಮಹತ್ಯೆಗೆ ಯತ್ನ; ತನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್

Published On - 7:33 am, Sun, 14 November 21