ಕೋಲಾರ
ಕೋಲಾರ, ಏ.28: ಕೋಲಾರ(
Kolar) ಅಂದ್ರೆನೆ ಬರದ ಜಿಲ್ಲೆ, ವರ್ಷಪೂರ್ತಿ ಸುಡುವ ಬಿಸಿಲು, ಧಗ ಧಗಿಸುವ ಸೂರ್ಯ, ಜನರ ನೆತ್ತಿ ಸುಡುತ್ತಾನೆ. ಹೀಗಿರುವಾಗ ಈ ವರ್ಷ ಏಪ್ರಿಲ್ ಕಳೆದರೂ ಒಂದು ಹನಿ ಮಳೆಯೂ ಬಂದಿಲ್ಲ. ಕಳೆದ ವರ್ಷವೂ ಬರಗಾಲದಿಂದ ಮಳೆ ಇಲ್ಲ,
ಕೆರೆ-ಕುಂಟೆಗಳಲ್ಲಿದ್ದ ನೀರು ಬತ್ತಿ ಹೋಗಿದ್ದು, ಕೆರೆಯ ಒಡಲೇ ಬಿಸಿಲಿನ ತಾಪಕ್ಕೆ ಬಿರುಕುಬಿಡುತ್ತಿದೆ. ಫೆಬ್ರವರಿಯಲ್ಲಿ ಆರಂಭವಾದ ಬಿಸಿಲ ಬೇಗೆ ಇನ್ನೂ ಮುಗಿದಿಲ್ಲ, ದಿನೇ ದಿನೇ ಬಿಸಿಲ ತೀವ್ರತೆ ಹೆಚ್ಚಾಗುತ್ತಿದೆ. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ಅಂದರೆ 36 ರಿಂದ 39 ಡಿಗ್ರಿ ತಾಪಮಾನ ದಾಖಲಾಗಿದೆ. ಎಂದೂ ಕಂಡರಿಯದ ಈ ರಣಬಿಸಿಲಿಗೆ ಜನ ತತ್ತರಿಸಿ ಹೋಗಿದ್ದು, ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಯಳನೀರು, ಮಜ್ಜಿಗೆಯಂತ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ.
ಹಾಗಾಗಿ ನಗರದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್ಗಳು ಜೋರಾಗಿದೆ. ಎಲ್ಲಾ ಕಡೆ ಕೂಡ ಜನರು ಮುಗಿಬಿದ್ದು, ಬಿಸಿಲಲ್ಲಿ ಕಲ್ಲಂಗಡಿ ಸವಿಯುತ್ತಿರುವ ಜನ ಬಿಸಿಲಿನಿಂದ ಬೆಂದು ಕೊಂಚ ನಿಟ್ಟುಸಿರುವ ಬಿಡುತ್ತಿದ್ದಾರೆ. ಆದರೂ ಬಿಸಿಲು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನು ಕೋಲಾರ ಜಿಲ್ಲೆಯಲ್ಲೂ ಈ ಬಾರಿ ತಾಪಮಾನ ಏರಿಕೆಯಾಗಿದೆ. ಇಷ್ಟೊತ್ತಿಗೆ ಎರಡು ಮೂರು ಬಾರಿ ಮಳೆ ಬರಬೇಕಿದ್ದ ಮಳೆಯೂ ಮುನಿಸಿಕೊಂಡಿದೆ. ಕೆರೆಗಳಲ್ಲೂ ನೀರಿಲ್ಲದೆ ಓಣಗಲಾರಂಭಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ನೀರಾವರಿ ಇರುವ ಅಲೊಬ್ಬ ಇಲ್ಲೊಬ್ಬ ರೈತರು ಕಲ್ಲಂಗಡಿ ಹಣ್ಣು ಬೆಳೆದಿದ್ದು, ಅದನ್ನು ತಂದು ಮಾರಾಟ ಮಾಡುತ್ತಿದ್ದಾರೆ.
ಜ್ಯೂಸ್ಗಳಿಗೆ ಹೆಚ್ಚಿದ ಡಿಮ್ಯಾಂಡ್
ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆ ಕಲ್ಲಂಗಡಿ ಸೇರಿದಂತೆ ಎಳನೀರು, ಕಬ್ಬಿನ ಜ್ಯೂಸ್ಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಪ್ರತಿ ವರ್ಷದ ಬಿಸಿಲ ತಾಪಮಾನಕ್ಕೂ ಈ ವರ್ಷದ ಬಿಸಿಲ ತಾಪಮಾನಕ್ಕೂ ಬಹಳ ವ್ಯತ್ಯಾಸ ಇದೆ. ಅದರಲ್ಲೂ ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದರೂ ಬಿಸಿಲ ತಾಪಮಾನ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿ ಬಿಸಿಲ ಜೊತೆಗೆ ಬಿಸಿಗಾಳಿ ಜನರಿಗೆ ಕೂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದೆ, ಮನೆಯಲ್ಲೂ ಇರಲಾಗದೆ, ಮನೆಯ ಹೊರಗೂ ಇರಲಾರದೆ ಕಾದ ಕಾವಲಿಯಂತಾಗಿರುವ ಭೂಮಿಯ ಮೇಲೆ ಜನರು ನರಳಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ. ಕೊನೇ ಪಕ್ಷ ಮಳೆ ಬಂದರೆ ಜನರು ಒಂದಷ್ಟು ನಿಟ್ಟುಸಿರು ಬಿಡಬಹುದು ಇಲ್ಲವಾದರೆ ಜನರ ಪಾಡು ದೇವರೇ ಗತಿ.
ಒಟ್ಟಾರೆ ಬಯಲು ಸೀಮೆ ಕೋಲಾರದಲ್ಲಿ ಬಿಸಿಲ ತಾಪಮಾನ ಮಿತಿ ಮೀರಿದ್ದು, ಜನರು ಅಕ್ಷರಶ: ಬಿಸಿಲ ತಾಪಕ್ಕೆ ಬೇಸತ್ತು ಹೋಗಿದ್ದಾರೆ. ಅಯ್ಯೋ ದೇವರ ಎರಡು ಹನಿ ಮಳೆಯಾದರೂ ಬರಬಾರದೆ ಎಂದು ಮುಗಿಲತ್ತ ಮುಖ ಮಾಡಿ ಅಂಗಲಾಚುತಿದ್ದಾರೆ. ಜನರು ಸೂರ್ಯ ಮತ್ತು ಭೂಮಿಯ ಮದ್ಯೆ ಸಿಲುಕಿ ಜನರಿಂದ ನೀರಿಳಿಯುತ್ತಿರುವುದಂತು ಸುಳ್ಳಲ್ಲ.