ಕೋಲಾರ: ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರ ಖಂಡಿಸಿ ಬಂದ್ಗೆ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳಿಂದ ಕೋಲಾರ ಜಿಲ್ಲೆ ಕೆಜಿಎಫ್, ಬಂಗಾರಪೇಟೆ ತಾಲೂಕು ಬಂದ್ ಮಾಡಲಾಗಿದೆ. 2 ತಾಲೂಕುಗಳಲ್ಲಿ ವ್ಯಾಪಾರ, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬಸ್, ಆಟೋಗಳು ರಸ್ತೆಗೆ ಇಳಿಯುತ್ತಿಲ್ಲ. ಬಸ್ಗಾಗಿ ಕಾದು ಕಾದು ಜನರು, ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಸ್ಥಳಾಂತರ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ
ಸದ್ಯ KGF ಎಸ್ಪಿ ಕಚೇರಿ, ಸಿಬ್ಬಂದಿ ಸ್ಥಳಾಂತರ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಟ್ವೀಟ್ ಮಾಡಿ ಕೇಂದ್ರ ವಲಯ ಐಜಿಪಿಯಿಂದ ಸ್ಪಷ್ಟಪಡಿಸಿದೆ. ಸುಳ್ಳು ವಂದತಿಗಳಿಗೆ ಸಾರ್ವಜನಿಕರು ಕಿವಿಗೊಡದಂತೆ ಮನವಿ ಮಾಡಿದೆ. KGF ಎಸ್ಪಿ ಕಚೇರಿ, ಸಿಬ್ಬಂದಿ ಸ್ಥಳಾಂತರ ಬಗ್ಗೆ ಚರ್ಚಿಸಿಲ್ಲ. ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.
130 ವರ್ಷಗಳ ಇತಿಹಾಸ ಹೊಂದಿರುವ ಪೊಲೀಸ್ ಜಿಲ್ಲೆಯ ಹಿನ್ನೆಲೆ ಏನು?
ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಜಾನ್ ಟೈಲರ್ ಅಂಡ್ ಸನ್ಸ್ ಕಂಪನಿ 130 ವರ್ಷಗಳ ಹಿಂದೆ ಚಿನ್ನದ ಗಣಿಗಾರಿಕೆ ಆರಂಭವಾದಾಗ ಅಂದಿನ ಬ್ರಿಟಿಷಿಗರು ತಮ್ಮ ಸುರಕ್ಷತೆಗಾಗಿ ಹೆಚ್ಚಿನ ಆಧ್ಯತೆ ನೀಡಿ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲು ಇಲ್ಲಿ ಜಾರಿಗೆ ತಂದಿದ್ದರು. ಇಡೀ ರಾಜ್ಯದಲ್ಲಿಯೇ ಕೆಜಿಎಫ್ ಪೊಲೀಸ್ ವ್ಯವಸ್ಥೆ ಪಾರಂಪರಿಕ ಹಿನ್ನಲೆ ಹೊಂದಿದೆ. ಇಂತಹ ಕಚೇರಿ ಇಂದು ಸ್ಥಳಾಂತರಗೊಳ್ಳಲು ಸಿದ್ಧಗೊಂಡಿದೆ.
ಚಿನ್ನದ ಗಣಿಗಾರಿಕೆ ನಡಸುತ್ತಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚಿನ್ನದ ಗಣಿಗಳಲ್ಲಿ ಕಳ್ಳತನ ತಡೆಯುವುದು ಮತ್ತು ತಮ್ಮ ಭದ್ರತೆಗಾಗಿ ಬ್ರಿಟೀಷರು ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಕೆಜಿಎಫ್ನಲ್ಲಿ ಮೈನಿಂಗ್ ಮತ್ತು ನಾನ್ ಮೈನಿಂಗ್ ಏರಿಯಾ ಎಂಬ ಎರಡು ಪ್ರತ್ಯೇಕ ಪ್ರದೇಶಗಳನ್ನು ಬ್ರಿಟೀಷರು ಮಾಡಿಕೊಂಡಿದ್ದರು. ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶ ಮತ್ತು ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟೀಷ್ ಅಧಿಕಾರಿಗಳು ವಾಸಿಸುವ ಬಂಗಲೆಗಳು ಹಾಗೂ ಕೆಜಿಎಫ್ ಕ್ಲಬ್ ಸೇರಿ ನಂದಿ ದುರ್ಗ, ಮೈಸೂರು ಹಾಲ್ ಮನರಂಜನಾ ಕ್ಲಬ್ ಪ್ರದೇಶಗಳಿಗೆ ಇತರ ನಾಗರಿಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು.
ಅಂದಿಗೆ ಚಿನ್ನದ ಗಣಿಯ ಅಧಿಕಾರಿಯೊಬ್ಬರಿಗೆ ಪೊಲೀಸ್ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ ಸ್ವತಂತ್ರ್ಯ ಬಂದ ಮೇಲೂ ಕೆಜಿಎಫ್ ಎಸ್ಪಿ ಕಚೇರಿ ಮುಂದುವರೆಯಿತು.ಎಸ್ಪಿ ಕಚೇರಿ ಅಲ್ಲದೆ ಕೆಜಿಎಫ್ನಲ್ಲಿ ಪ್ರತ್ಯೇಕ ಡಿಎಆರ್ ಸಿಬ್ಬಂದಿಯನ್ನು ಅಂದಿಗೆ ನೇಮಕ ಮಾಡಲಾಯಿತು. ಅವರಿಗಾಗಿ ಚಾಂಪಿಯನ್ ರೀಫ್‌ನಲ್ಲಿ ಪ್ರತ್ಯೇಕವಾದ ವಸತಿ ಗೃಹಗಳನ್ನು ನರ್ಮಿಸಲಾಗಿದೆ.
ವಿಜಯನಗರಕ್ಕೆ ಸ್ಥಳಾಂತರ ಮಾಡಲು ಸಿದ್ಧತೆ
ರಾಜ್ಯದಲ್ಲೇ ಕೆಜಿಎಫ್ ಅನ್ನು ಪ್ರತ್ಯೇಕ ಪೊಲೀಸ್ ಜಿಲ್ಲೆ ಎಂದು ಕೆರೆಯಲಾಗುತ್ತದೆ. ಅದಕ್ಕೆ ಪ್ರತ್ಯೇಕ ಎಸ್ಪಿ ಇರುತ್ತಾರೆ. ಇಂಥಹ ಪ್ರತ್ಯೇಕ ವ್ಯವಸ್ಥೆ ಇಲ್ಲಿ ಇದೆ. ಎಸ್ಪಿ ಬಂಗಲೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ವಸತಿ ಗೃಹ ಎಲ್ಲವೂ ಇದೆ. ಆದರೆ ಈಗ ಇದೇ ಪೊಲೀಸ್ ಜಿಲ್ಲೆಯನ್ನು ನೂತನ ಜಿಲ್ಲೆ ವಿಜಯನಗರಕ್ಕೆ ಸ್ಥಳಾಂತರಿಸಲು ಡಿಎಆರ್ ಕಚೇರಿ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: ಕೋಲಾರ: ರಾಜ್ಯದ ಮೊದಲ ಪೊಲೀಸ್ ಜಿಲ್ಲೆಯ ಸ್ಥಳಾಂತರಕ್ಕೆ ಸಿದ್ಧತೆ; ಕೆಜಿಎಫ್ ಭಾಗದಲ್ಲಿ ಭಾರೀ ವಿರೋಧ
Published On - 9:45 am, Mon, 25 October 21