ಕೋಲಾರ: ರಾಜ್ಯದ ಮೊದಲ ಪೊಲೀಸ್ ಜಿಲ್ಲೆಯ ಸ್ಥಳಾಂತರಕ್ಕೆ ಸಿದ್ಧತೆ; ಕೆಜಿಎಫ್ ಭಾಗದಲ್ಲಿ ಭಾರೀ ವಿರೋಧ
ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ತಂಗಂ, ಪಳನಿ, ಸೆಲ್ವಂ, ಸೇರಿದಂತೆ ಹಲವು ಕುಖ್ಯಾತ ರೌಡಿಗಳು ಇಲ್ಲಿ ತಮ್ಮ ಅಟ್ಟಹಾಸ ಮೆರೆದಾಗ ಎನ್ಕೌಂಟರ್ ಮೂಲಕ ಅವರಿಗೆ ಉತ್ತರ ಹೇಳಿದ ಇತಿಹಾಸ ಕೆಜಿಎಫ್ ಪೊಲೀಸರಿಗಿದೆ.
ಕೋಲಾರ: ಗತವೈಭವವನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವ ಕೆಜಿಎಫ್ ಪೊಲೀಸ್ ಜಿಲ್ಲೆಗೆ ಸ್ಥಳಾಂತರದ ಭೀತಿ ಶುರುವಾಗಿದ್ದು, ಚಿನ್ನದ ನೆಲವನ್ನು ಕಾಯುವ ಜೊತೆಗೆ ರೌಡಿಗಳ ಸಾಮ್ರಾಜ್ಯವನ್ನು ಮಟ್ಟಹಾಕಿ ಹೆಸರು ಮಾಡಿದ್ದ ಕೆಜಿಎಫ್ ಪೊಲೀಸ್ ಜಿಲ್ಲೆ ಇನ್ನು ಇತಿಹಾಸದ ಪುಟ ಸೇರುವ ಲಕ್ಷಣಗಳು ಗೋಚರವಾಗುತ್ತಿದ್ದು, ಇದಕ್ಕೆ ಕೆಜಿಎಫ್ ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
130 ವರ್ಷಗಳ ಇತಿಹಾಸ ಹೊಂದಿರುವ ಪೊಲೀಸ್ ಜಿಲ್ಲೆಯ ಹಿನ್ನೆಲೆ ಏನು? ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಜಾನ್ ಟೈಲರ್ ಅಂಡ್ ಸನ್ಸ್ ಕಂಪನಿ 130 ವರ್ಷಗಳ ಹಿಂದೆ ಚಿನ್ನದ ಗಣಿಗಾರಿಕೆ ಆರಂಭವಾದಾಗ ಅಂದಿನ ಬ್ರಿಟಿಷಿಗರು ತಮ್ಮ ಸುರಕ್ಷತೆಗಾಗಿ ಹೆಚ್ಚಿನ ಆಧ್ಯತೆ ನೀಡಿ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲು ಇಲ್ಲಿ ಜಾರಿಗೆ ತಂದಿದ್ದರು. ಇಡೀ ರಾಜ್ಯದಲ್ಲಿಯೇ ಕೆಜಿಎಫ್ ಪೊಲೀಸ್ ವ್ಯವಸ್ಥೆ ಪಾರಂಪರಿಕ ಹಿನ್ನಲೆ ಹೊಂದಿದೆ. ಇಂತಹ ಕಚೇರಿ ಇಂದು ಸ್ಥಳಾಂತರಗೊಳ್ಳಲು ಸಿದ್ಧಗೊಂಡಿದೆ.
ಚಿನ್ನದ ಗಣಿಗಾರಿಕೆ ನಡಸುತ್ತಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚಿನ್ನದ ಗಣಿಗಳಲ್ಲಿ ಕಳ್ಳತನ ತಡೆಯುವುದು ಮತ್ತು ತಮ್ಮ ಭದ್ರತೆಗಾಗಿ ಬ್ರಿಟೀಷರು ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಕೆಜಿಎಫ್ನಲ್ಲಿ ಮೈನಿಂಗ್ ಮತ್ತು ನಾನ್ ಮೈನಿಂಗ್ ಏರಿಯಾ ಎಂಬ ಎರಡು ಪ್ರತ್ಯೇಕ ಪ್ರದೇಶಗಳನ್ನು ಬ್ರಿಟೀಷರು ಮಾಡಿಕೊಂಡಿದ್ದರು. ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶ ಮತ್ತು ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟೀಷ್ ಅಧಿಕಾರಿಗಳು ವಾಸಿಸುವ ಬಂಗಲೆಗಳು ಹಾಗೂ ಕೆಜಿಎಫ್ ಕ್ಲಬ್ ಸೇರಿ ನಂದಿ ದುರ್ಗ, ಮೈಸೂರು ಹಾಲ್ ಮನರಂಜನಾ ಕ್ಲಬ್ ಪ್ರದೇಶಗಳಿಗೆ ಇತರ ನಾಗರಿಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು.
ಅಂದಿಗೆ ಚಿನ್ನದ ಗಣಿಯ ಅಧಿಕಾರಿಯೊಬ್ಬರಿಗೆ ಪೊಲೀಸ್ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ ಸ್ವತಂತ್ರ್ಯ ಬಂದ ಮೇಲೂ ಕೆಜಿಎಫ್ ಎಸ್ಪಿ ಕಚೇರಿ ಮುಂದುವರೆಯಿತು.ಎಸ್ಪಿ ಕಚೇರಿ ಅಲ್ಲದೆ ಕೆಜಿಎಫ್ನಲ್ಲಿ ಪ್ರತ್ಯೇಕ ಡಿಎಆರ್ ಸಿಬ್ಬಂದಿಯನ್ನು ಅಂದಿಗೆ ನೇಮಕ ಮಾಡಲಾಯಿತು. ಅವರಿಗಾಗಿ ಚಾಂಪಿಯನ್ ರೀಫ್‌ನಲ್ಲಿ ಪ್ರತ್ಯೇಕವಾದ ವಸತಿ ಗೃಹಗಳನ್ನು ನರ್ಮಿಸಲಾಗಿದೆ.
ವಿಜಯನಗರಕ್ಕೆ ಸ್ಥಳಾಂತರ ಮಾಡಲು ಸಿದ್ಧತೆ ರಾಜ್ಯದಲ್ಲೇ ಕೆಜಿಎಫ್ ಅನ್ನು ಪ್ರತ್ಯೇಕ ಪೊಲೀಸ್ ಜಿಲ್ಲೆ ಎಂದು ಕೆರೆಯಲಾಗುತ್ತದೆ. ಅದಕ್ಕೆ ಪ್ರತ್ಯೇಕ ಎಸ್ಪಿ ಇರುತ್ತಾರೆ. ಇಂಥಹ ಪ್ರತ್ಯೇಕ ವ್ಯವಸ್ಥೆ ಇಲ್ಲಿ ಇದೆ. ಎಸ್ಪಿ ಬಂಗಲೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ವಸತಿ ಗೃಹ ಎಲ್ಲವೂ ಇದೆ. ಆದರೆ ಈಗ ಇದೇ ಪೊಲೀಸ್ ಜಿಲ್ಲೆಯನ್ನು ನೂತನ ಜಿಲ್ಲೆ ವಿಜಯನಗರಕ್ಕೆ ಸ್ಥಳಾಂತರಿಸಲು ಡಿಎಆರ್ ಕಚೇರಿ ಸಿದ್ಧತೆ ನಡೆಸುತ್ತಿದೆ.
90ರ ದಶಕದಲ್ಲೇ ಎಸ್ಪಿ ಕಚೇರಿ ಎತ್ತಂಗಡಿ ಮಾಡಲು ಸಿದ್ಧತೆ ನಡೆದಿತ್ತು ಇನ್ನೂ ಕೆಜಿಎಫ್ ಜನರು ಎಸ್ಪಿ ಕಚೇರಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. 90 ರ ದಶಕದಲ್ಲಿಯೇ ಕೆಜಿಎಫ್ ಎಸ್ಪಿ ಪ್ರತ್ಯೇಕ ಕಚೇರಿ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಒಂದು ತಾಲ್ಲೂಕಿಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಇರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಕೋಲಾರ ಎಸ್ಪಿ ಕಚೇರಿಯೊಂದಿಗೆ ವಿಲೀನ ಮಾಡಲು ಮುಂದಾಗಿತ್ತು. ಆದರೆ ರಾಜಕೀಯ ಒತ್ತಡದಿಂದಾಗಿ ಸರ್ಕಾರದ ಆಜ್ಞೆ ಅನುಷ್ಠಾನವಾಗಲಿಲ್ಲ. ಈಗ ರಾಜ್ಯದಲ್ಲಿ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯವಾಗಿದೆ. ಇಲ್ಲಿ ನೂತನವಾಗಿ ಎಸ್ಪಿ ಕಚೇರಿಯನ್ನು ಆರಂಭಿಸಲಾಗಿದೆ. ಹೊಸದಾಗಿ ಹುದ್ದೆಗಳನ್ನು ಸೃಷ್ಟಿ ಮಾಡುವ ಬದಲು ಕೆಜಿಎಫ್ ಎಸ್ಪಿ ಕಚೇರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆ ಕಳೆದ ಆಗಸ್ಟ್ 19 ರಂದು ಆದೇಶ ಹೊರಡಿಸಿದೆ.
ಕೆಜಿಎಫ್ ಪೊಲೀಸ್ ಇಲಾಖೆ ಎರಡು ತಾಲೂಕಿಗೆ ಮಾತ್ರ ಸೀಮಿತವಾಗಿದ್ದು, 12 ಪೊಲೀಸ್ ಠಾಣೆ, 14 ಜನ ಸಿಪಿಐ ಸೇರಿ 900 ಮಂದಿ ಸಿಬ್ಬಂದಿ ಇಲ್ಲಿದ್ದಾರೆ. ಎಸ್ಪಿ ಕಚೇರಿಯ 240 ಮಂದಿ ಆಡಳಿತಾತ್ಮಕ ಸಿಬ್ಬಂದಿ ಮತ್ತು 248 ಡಿಎಆರ್ ಸಿಬ್ಬಂದಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಎರಡು ರಾಜ್ಯಗಳ ಗಡಿಯನ್ನು ಹೊಂದಿರುವ ಕೆಜಿಎಫ್ ಪೊಲೀಸ್ ಜಿಲ್ಲೆ ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ತಮ್ಮದೇ ಹೆಸರು ಉಳಿಸಿಕೊಂಡಿದೆ.
ಕೆಜಿಎಫ್ ನಲ್ಲಿ ಎಸ್ಪಿ ಕಚೇರಿ ಯಾಕೆ ಉಳಿಸಿಕೊಳ್ಳಬೇಕು? ಕೆಜಿಎಫ್ ಪೊಲೀಸ್ ಜಿಲ್ಲೆ ಭೌಗೋಳಿಕವಾಗಿಯೂ ಕೂಡಾ ಹಲವು ವೈಶಿಷ್ಯತೆಯನ್ನು ಹೊಂದಿದೆ. ಆಂಧ್ರ ಹಾಗೂ ತಮಿಳುನಾಡಿನ ಗಡಿಗಳನ್ನು ಹೊಂದಿದೆ. 12500 ಎಕರೆ ಪ್ರದೇಶದಲ್ಲಿ ಬೃಹತ್ ಚಿನ್ನದ ನಿಕ್ಷೇಪವಿರುವ ಚಿನ್ನದ ಗಣಿ ಹಾಗೂ ಗಣಿ ಪ್ರದೇಶವನ್ನು ಹೊಂದಿದೆ. ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬೆಮೆಲ್ ಕಾರ್ಖಾನೆಯನ್ನು ಹೊಂದಿದೆ. ಅಲ್ಲದೆ ಸರ್ಕಾರದಲ್ಲಿ ಕೆಜಿಎಫ್ನಲ್ಲಿ ನೂತನ ಪ್ರತ್ಯೇಕ ಕೈಗಾರಿಕಾ ವಲಯ ಸ್ಥಾಪನೆ ಮಾಡುವ ಕಾರ್ಯ ಅಂತಿಮ ಹಂತದಲ್ಲಿದೆ. ಇದೆಲ್ಲದಕ್ಕೂ ಪ್ರಮುಖವಾಗಿ ಕೆಜಿಎಫ್ನಲ್ಲಿ ರೌಡಿ ಚಟುವಟಿಕೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು, ಸಾರ್ವಜನಿಕರ ಮಾನ, ಪ್ರಾಣ ಕಾಪಾಡುವ ದೃಷ್ಟಿಯಿಂದ ಇಲ್ಲಿಗೆ ಪ್ರತ್ಯೇಕ ಎಸ್ಪಿ ಹಾಗೂ ಎಸ್ಪಿ ಕಚೇರಿ ಅವಶ್ಯಕತೆ ಇದೆ.
ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ತಂಗಂ, ಪಳನಿ, ಸೆಲ್ವಂ, ಸೇರಿದಂತೆ ಹಲವು ಕುಖ್ಯಾತ ರೌಡಿಗಳು ಇಲ್ಲಿ ತಮ್ಮ ಅಟ್ಟಹಾಸ ಮೆರೆದಾಗ ಎನ್ಕೌಂಟರ್ ಮೂಲಕ ಅವರಿಗೆ ಉತ್ತರ ಹೇಳಿದ ಇತಿಹಾಸ ಕೆಜಿಎಫ್ ಪೊಲೀಸರಿಗಿದೆ. ಅದಷ್ಟೇ ಅಲ್ಲದೆ ಈಗಲೂ ಕೆಜಿಎಫ್ನಲ್ಲಿ ಕಳ್ಳತನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದು ಇದು ಆರ್ಥಿಕವಾಗಿ ಸರ್ಕಾರಕ್ಕೆ ಹೊರೆಯಾದರೂ ಜನರ ಪ್ರಾಣ, ಮಾನ, ಸುರಕ್ಷತೆ ದೃಷ್ಟಿಯಿಂದ ಕೆಜಿಎಫ್ನಲ್ಲಿ ಪ್ರತ್ಯೇಕ ಪೊಲೀಸ್ ಜಿಲ್ಲೆ ಬೇಕಾಗಿದೆ.
ಕೆಜಿಎಫ್ ಜಿಲ್ಲೆ ಸ್ಥಳಾಂತರಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ! ಸರ್ಕಾರ ಆರ್ಥಿಕ ಹೊರೆಯನ್ನು ತಪ್ಪಿಸಿಕೊಳ್ಳಲು ಕೆಜಿಎಫ್ ಪ್ರತ್ಯೇಕ ಪೊಲೀಸ್ ಜಿಲ್ಲೆಯನ್ನು ಸ್ಥಳಾಂತರ ಮಾಡಲು ನಿರ್ಧಾರ ಮಾಡಿದೆ. ಆದರೆ ಇದಕ್ಕೆ ಕೆಜಿಎಫ್ ಹಾಗೂ ಕೋಲಾರ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಕ್ಷಾತೀತವಾಗಿ, ಹೋರಾಟ ಶುರುವಾಗಿದೆ. ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪೊಲೀಸ್ ಸಿಬ್ಬಂದಿಗಳು ಮಾನಸೀಕವಾಗಿ ಸಿದ್ಧರಿಲ್ಲ. ಕುಟುಂಬಗಳೊಂದಿಗೆ ಇಲ್ಲಿ ನೆಲೆ ಕಂಡುಕೊಂಡಿರುವ ಪೊಲೀಸರು ಈಗ ಏಕಾಏಕಿ ವಿಜಯನಗರಕ್ಕೆ ಹೋಗಲು ಸಿದ್ಧರಿಲ್ಲ. ಹಾಗಾಗಿ ಈಗಾಗಲೇ ಹಲವು ಸಂಘಟನೆಗಳು ಕೆಜಿಎಫ್ ನಗರವನ್ನು ಬಂದ್ ಮಾಡುವ ಮೂಲಕ ಎಚ್ಚರಿಕೆ ನೀಡಿವೆ. ಅದರ ಜೊತೆಗೆ ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಕೆಜಿಎಫ್ ಎಸ್ಪಿ ಕಚೇರಿಯನ್ನು ಸ್ಥಳಾಂತರ ವಿಚಾರ ಕೈಬಿಡದಿದ್ದರೆ ಹೋರಾಟದ ಬಿಸಿ ಎದುರಿಸಲು ಸಿದ್ಧವಾಗಬೇಕಾಗಿರುವುದು ಅನಿವಾರ್ಯ.
ಒಟ್ಟಾರೆ ಕೆಜಿಎಫ್ ಎಸ್ಪಿ ಕಚೇರಿಯ ಸ್ಥಳಾಂತರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬೆಳವಣಿಗೆಗಳು ನಡೆದಂತೆ ಕೆಜಿಎಫ್ನಲ್ಲೂ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಇದು ಮುಂದೆ ಹಿಂಸಾತ್ಮಕ ರೂಪ ತಾಳಿದರೂ ಆಶ್ಚರ್ಯವಿಲ್ಲ. ಕೊನೆಗೆ ಎಸ್ಪಿ ಕಚೇರಿಯನ್ನು ಉಳಿಸಲು ಹೋರಾಟ ಮಾಡುವವರನ್ನು ಪೊಲೀಸರೆ ತಡೆಯಬೇಕಾದ ಸ್ಥಿತಿ ಎದುರಾಗುವುದರಲ್ಲೂ ಅನುಮಾನವಿಲ್ಲ.
ವರದಿ : ರಾಜೇಂದ್ರ ಸಿಂಹ
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ವಾಲಿದ 3 ಅಂತಸ್ತಿನ ಕಟ್ಟಡ; ಹಲವು ಕುಟುಂಬಗಳ ಸ್ಥಳಾಂತರ