ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೇರೆ ಹಾಡು ಹಾಕಲು ಹೇಳಿದ ಯುವಕನ ಕೊಲೆ
ಮಹಾರಾಷ್ಟ್ರದ ಮೀರಾ ಭಯಂದರ್ನ ಕಾಶಿಮಿರಾದಲ್ಲಿ ಹೊಸ ವರ್ಷದ ಪಾರ್ಟಿಯ ವೇಳೆ ಬೇರೆ ಹಾಡು ಹಾಕಲು ಹೇಳಿದ್ದಕ್ಕೆ ಜಗಳ ಉಂಟಾಗಿ, 23 ವರ್ಷದ ಯುವಕನನ್ನು ಕೊಲೆ ಮಾಡಲಾಗಿದೆ. ಆರೋಪಿಗಳಾದ ಮೂವರು ತಪ್ಪಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸಲು ಆಯೋಜಿಸಿದ್ದ ಕುಡಿತದ ಪಾರ್ಟಿಯಲ್ಲಿ 6 ಜನರಿಂದ ಅಮಾನುಷವಾಗಿ ಹಲ್ಲೆಗೊಳಗಾದ 23 ವರ್ಷದ ಯುವಕ ಇಂದು ಮಧ್ಯಾಹ್ನ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮುಂಬೈ: ಹೊಸ ವರ್ಷವನ್ನು ಸ್ವಾಗತಿಸಲು ಕುಡಿತದ ಪಾರ್ಟಿ ಆಯೋಜಿಸಿದ ವೇಳೆ 6 ಜನರಿಂದ ಅಮಾನುಷವಾಗಿ ಹಲ್ಲೆಗೊಳಗಾದ 23 ವರ್ಷದ ಯುವಕ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ ಭಯಾನಕ ಘಟನೆ ನಡೆದಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹಾಡುಗಳನ್ನು ಹಾಕುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕ್ಷುಲ್ಲಕ ಜಗಳದಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ಕಾಶಿಮಿರಾದ ಡೆಲ್ಟಾ ಗಾರ್ಡನ್ ಹಿಂಭಾಗದಲ್ಲಿರುವ MHADA ವಸಾಹತು ಆವರಣದಲ್ಲಿ ಈ ಘಟನೆ ನಡೆದಿದೆ. ರಾಜ ಪರಿಯಾರ್ ಎಂಬ ಮೃತ ವ್ಯಕ್ತಿ ಸೇರಿದಂತೆ ಸುಮಾರು 10ರಿಂದ 15 ಯುವಕರ ಗುಂಪು ಹೊಸ ವರ್ಷದ ಮುನ್ನಾದಿನವನ್ನು ಆಚರಿಸಲು ಜಮಾಯಿಸಿತ್ತು. ಈ ವೇಳೆ ತಮಗಿಷ್ಟವಾದ ಹಾಡು ಹಾಕುವ ವಿಚಾರದಲ್ಲಿ ಜಗಳ ನಡೆಯಿತು.
ಇದನ್ನೂ ಓದಿ: ಪಾರ್ಸೆಲ್ನಲ್ಲಿ ಶವ ಬಂದ ಪ್ರಕರಣ, ಕೊಲೆಗೆ ಕಾರಣ ಬಹಿರಂಗ, ಆರೋಪಿಯ ಬಂಧನ
ಈ ವೇಳೆ ವಾಗ್ವಾದ ತಾರಕಕ್ಕೇರಿತು. ಇದರಿಂದ ಇಬ್ಬರೂ ಪರಸ್ಪರರ ಮೇಲೆ ಜಗಳ ನಡೆಸಿದರು. ನಂತರ ಅವರಿಬ್ಬರೂ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬಂದರು. ಇದರಿಂದ ಜಗಳ ಹೆಚ್ಚಾಯಿತು. ಈ ಸ್ಥಳದಿಂದ ಪರಾರಿಯಾಗುವ ಮೊದಲು ಅವರು ಪರಿಯಾರ್ ಮತ್ತು ಅವರ ಸ್ನೇಹಿತ-ವಿಪುಲ್ ರೈ ಮೇಲೆ ಬಿದಿರಿನ ಕೋಲುಗಳು ಮತ್ತು ಕಬ್ಬಿಣದ ರಾಡಿನಿಂದ ಕ್ರೂರವಾಗಿ ಹಲ್ಲೆ ನಡೆಸಿದರು.
ಗಂಭೀರವಾಗಿ ಗಾಯವಾಗಿದ್ದ ಪರಿಯಾರ್ನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ತಲೆಗೆ ಗಂಭೀರವಾಗಿ ಗಾಯವಾಗಿ, ಮೂಳೆ ಮುರಿತ ಉಂಟಾಗಿ ಆತ ಮೃತಪಟ್ಟಿದ್ದಾನೆ. ಆರಂಭದಲ್ಲಿ ಕೊಲೆ ಯತ್ನದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ನಂತರ ಅದನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಯಿತು. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ