450 ಕೋಟಿ ಹಗರಣ: ಶುಭ್ಮನ್ ಗಿಲ್ ಸೇರಿದಂತೆ ಭಾರತದ ನಾಲ್ವರು ಸ್ಟಾರ್ ಕ್ರಿಕೆಟಿಗರಿಗೆ ಸಮನ್ಸ್
450 Crore Scam: ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ಮೂವರು ಆಟಗಾರರಿಗೆ 450 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಗುಜರಾತ್ನ ಸಿಐಡಿ ಸಮನ್ಸ್ ನೀಡಿದೆ. BZ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪನಿ ಹೆಚ್ಚಿನ ಬಡ್ಡಿ ನೀಡುವುದಾಗಿ ಹೂಡಿಕೆದಾರರಿಗೆ ನಂಬಿಸಿ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಕಂಪನಿಯಲ್ಲಿ ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಕಡಿಮೆ ಮೊತ್ತ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದೆ.
ಪ್ರಸ್ತುತ ಟೀಂ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ತಂಡದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೆ ಭಾರತದಲ್ಲಿ ಸಂಕಷ್ಟ ಎದುರಾಗಿದೆ. ಬರೋಬ್ಬರಿ 450 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಶುಭ್ಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಶುಭ್ಮನ್ ಗಿಲ್ ಅಲ್ಲದೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಅವರಿಗೂ ಗುಜರಾತ್ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿಯಿಂದ ಸಮನ್ಸ್ ಕಳುಹಿಸಲಾಗಿದೆ.
ಹೆಚ್ಚಿನ ಬಡ್ಡಿ ನೀಡುವ ಭರವಸೆ
ವಾಸ್ತವವಾಗಿ ಭೂಪೇಂದ್ರಸಿನ್ಹ್ ಝಾಲಾ ನೇತೃತ್ವದ BZ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪನಿ, ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದೆ. ಆದರೆ ಕೊಟ್ಟ ಮಾತಿನಂತೆ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರ ನೀಡುವಲ್ಲಿ ಕಂಪನಿ ವಿಫಲವಾದ ಕಾರಣ ಇದೀಗ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಹಮದಾಬಾದ್ ಮಿರರ್ ವರದಿ ಪ್ರಕಾರ, ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯುವ ಆಟಗಾರರಾದ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಪೊಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಇದೀಗ ಈ ನಾಲ್ವರು ಕ್ರಿಕೆಟಿಗರನ್ನು ವಿಚಾರಣೆ ನಡೆಸಲಿದೆ. ವರದಿಯ ಪ್ರಕಾರ, ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಗಿಲ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವುದರಿಂದ, ಅವರು ದೇಶಕ್ಕೆ ಹಿಂದಿರುಗಿದ ನಂತರ ಸಿಐಡಿ ಅವರನ್ನು ಪ್ರಶ್ನಿಸಬಹುದು.
ಹಗರಣದಲ್ಲಿ ಒರ್ವನ ಬಂಧನ
ವರದಿಗಳ ಪ್ರಕಾರ, ಗುಜರಾತ್ ಸಿಐಡಿ ಈ ಪ್ರಕರಣದ ತನಿಖೆ ಆರಂಭಿಸಿದ್ದು, ಈಗಾಗಲೇ ಕಳೆದ ತಿಂಗಳು BZ ಗ್ರೂಪ್ ಹಗರಣಕ್ಕೆ ಸಂಬಂಧಿಸಿದ ಭೂಪೇಂದರ್ ಸಿಂಗ್ ಝಾಲಾ ಅವರನ್ನು ಬಂಧಿಸಿ ತನಿಖೆಗೊಳಪಡಿಸಿದೆ. ತನಿಖೆಯಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ, ಇದುವರೆಗೂ ಗುಜರಾತ್ ಟೈಟಾನ್ಸ್ ಆಟಗಾರರಿಗೂ ಸಹ ಯಾವುದೇ ಹೆಚ್ಚಿನ ಬಡ್ಡಿ ನೀಡಿಲ್ಲ ಎಂದು ಭೂಪೇಂದರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಶುಭ್ಮನ್ ಗಿಲ್ ಪ್ರದರ್ಶನ
ಇನ್ನು ಹಗರಣವನ್ನು ಹೊರತುಪಡಿಸಿ ಶುಭ್ಮನ್ ಗಿಲ್ ಅವರ ಆಟದ ಬಗ್ಗೆ ಹೇಳುವುದಾದರೆ.. ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ಗಿಲ್, ಗಾಯದ ಕಾರಣದಿಂದ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದಿದ್ದ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್ ಕಲೆಹಾಕಿದ್ದರು. ಆ ಬಳಿಕ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ನಿರಸ ಪ್ರದರ್ಶನ ನೀಡಿದ್ದ ಅವರನ್ನು ನಾಲ್ಕನೇ ಟೆಸ್ಟ್‌ನಿಂದ ಕೈಬಿಡಲಾಗಿತ್ತು. ಇದೀಗ ನಾಳೆಯಿಂದ ಆರಂಭವಾಗಿರುವ 5ನೇ ಟೆಸ್ಟ್‌ನಲ್ಲಿ ಅವರು ಆಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Thu, 2 January 25