ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳ ನೇಮಕ; ಶಿವರಾಜ್ ಸಿಂಗ್ ಚೌಹಾಣ್ ಹೆಗಲಿಗೆ ಕರ್ನಾಟಕದ ಹೊಣೆ
ಕರ್ನಾಟಕದ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ಕೆಲವು ದಿನಗಳಿಂದ ತೀವ್ರ ಚರ್ಚೆಗಳು ಶುರುವಾಗಿವೆ. ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ಕೆಳಗಿಳಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಹೊಸ ವರ್ಷದಂದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಬಿ.ವೈ. ವಿಜಯೇಂದ್ರ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದ್ದರು. ಇದೀಗ ಎಲ್ಲ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗಾಗಿ ಬಿಜೆಪಿ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿದೆ.
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ಕುರ್ಚಿ ಅಲುಗಾಡುತ್ತಿದೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ. ಕರ್ನಾಟಕಕ್ಕೆ ಚುನಾವಣಾಧಿಕಾರಿಯಾಗಿ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ, ಕರ್ನಾಟಕದಲ್ಲಿ ಹೊಸ ಅಧ್ಯಕ್ಷರ ನೇಮಕವಾಗುವ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ.
ಕರ್ನಾಟಕಕ್ಕೆ ಮಾತ್ರವಲ್ಲದೆ ಆಂಧ್ರಪ್ರದೇಶಕ್ಕೆ ಚುನಾವಣಾ ಅಧಿಕಾರಿಯಾಗಿ ಪಿ.ಸಿ. ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ತೆಲಂಗಾಣಕ್ಕೆ ಚುನಾವಣಾ ಅಧಿಕಾರಿಯಾಗಿ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದೆ. ಭಾರತದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಬಿ.ವೈ. ವಿಜಯೇಂದ್ರ; ಕರ್ನಾಟಕದ ರಾಜಕೀಯದ ಬಗ್ಗೆ ಚರ್ಚೆ
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ವಿಚಾರದಲ್ಲಿ ಕೆಲವು ದಿನಗಳಿಂದ ಹಲವು ಸುದ್ದಿಗಳು ಹರಿದಾಡುತ್ತಿವೆ. ಬಿ.ವೈ. ವಿಜಯೇಂದ್ರ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಅವರ ಹೆಸರು ಕೂಡ ಇದೆ.
ಇದರ ನಡುವೆ, ಹೊಸ ವರ್ಷದಂದು ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿದ್ದರು. ಈ ಭೇಟಿಯ ವೇಳೆ ಕರ್ನಾಟಕದ ಭಿನ್ನಮತಕ್ಕೆ ಬ್ರೇಕ್ ಹಾಕುವಂತೆ ಅಮಿತ್ ಶಾ ಅವರಿಗೆ ವಿಜಯೇಂದ್ರ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಿಜಯೇಂದ್ರಗೆ ಜನಬೆಂಬಲವಿದೆ, ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಪಕ್ಷದ ವರಿಷ್ಠರು, ನಾನಲ್ಲ: ಯಡಿಯೂರಪ್ಪ
ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರುಗಳ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲ ವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನವನ್ನು ಕೋರಲಾಯಿತು. ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಮಾನ್ಯ ಅಮಿತ್ ಶಾ ಬಿಜೆಪಿ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ ಕಾಳಜಿ ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದ ಛಲ ತುಂಬಲು ಕಾರಣವಾಗಿದೆ. ಅವರ ಸಂಘಟನಾ ಸಾಮರ್ಥ್ಯದ ಚತುರತೆ ಪಕ್ಷ ಕಟ್ಟುವ ಕಾಯಕದಲ್ಲಿ ಸದಾ ನನಗೆ ಪ್ರೇರಣೆಯ ಶಕ್ತಿಯಾಗಿದೆ. ಇಂದಿನ ಅವರ ಭೇಟಿಯ ಕ್ಷಣಗಳು ಎಂದಿನಂತೆ ಇನ್ನಷ್ಟು ಉತ್ಸಾಹತುಂಬಿ ಸಂಘಟನೆಯನ್ನು ನಿರೀಕ್ಷೆಯ ಗುರಿ ತಲುಪಿಸಲು ಆತ್ಮವಿಶ್ವಾಸ ತುಂಬಿತು ಎಂದು ವಿಜಯೇಂದ್ರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ