ಬೆಂಗಳೂರಿಗೆ ಬಂದ ಜೆಪಿ ನಡ್ಡಾ: ಏರ್ಪೋರ್ಟ್ನಲ್ಲೇ ಬಿಜೆಪಿ ನಾಯಕರ ಜತೆ ಸಭೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಳೂರಿಗೆ ಆಗಮಿಸಿದ್ದು, ಕರ್ನಾಟಕದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮತ್ತು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಇಂದೂ ಸಹ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಸ್ ದರ ಏರಿಕೆ ಮತ್ತು ರಾಜ್ಯದ ಇತರ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ. ಏರ್ಪೋರ್ಟ್ನಿಂದ ಅವರು ವಿಜಯೇಂದ್ರರನ್ನೂ ಕಾರಿನಲ್ಲಿ ಜತೆಗೆ ಕರೆದೊಯ್ದರು.
ಬೆಂಗಳೂರು, ಜನವರಿ 3: ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮತ್ತು ರಾಜ್ಯ ರಾಜಕೀಯದಲ್ಲಿನ ವಿವಿಧ ಬೆಳವಣಿಗೆಗಳ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆಪಿ ನಡ್ಡಾ ಬೆಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯುವ ಮೋರ್ಚಾ ಅಧ್ಯಕ್ಷ ಧೀರಜ್ ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ನಡ್ಡಾ ಕೆಕೆ ಗೆಸ್ಟ್ ಹೌಸ್ನತ್ತ ಪ್ರಯಾಣ ಬೆಳೆಸಿದರು. ಇಂದು ಕುಮಾರ ಕೃಪಾ ಗೆಸ್ಟ್ ಹೌಸ್ನಲ್ಲಿ ತಂಗಲಿರುವ ಅವರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.
ವಿಮಾನ ನಿಲ್ದಾಣದಲ್ಲೇ ತುರ್ತು ಸಮಾಲೋಚನೆ
ವಿಮಾನ ನಿಲ್ದಾಣದ ವಿಐಪಿ ಲಾಂಜ್ನಲ್ಲಿ ರಾಜ್ಯ ಬಿಜೆಪಿ ನಾಯಕನ ಜೊತೆ ನಡ್ಡಾ ಮಾತುಕತೆ ನಡೆಸಿದರು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಹೇಗೆ ನಡೆಯುತ್ತಿವೆ ಎಂದು ವಿವರ ಕೇಳಿದರು. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಯೋಜನೆ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕ ಸ್ಥಿತಿಗತಿ ಬಗ್ಗೆ ಮಾಹಿತಿ ತಿಳಿದುಕೊಂಡರು.
ಇದೇ ವೇಳೆ ಪ್ರತಿಕ್ರಿಸಿದ ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರಕ್ಕೆ ಯೋಜನೆಗಳನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ. ಇದಲ್ಲದೆ ಬಸ್ ದರ ಹೆಚ್ಚಳದ ಬಗ್ಗೆಯೂ ಮಾಹಿತಿ ನೀಡಿದರು.
ನಡ್ಡಾ ಕಾರಿನಲ್ಲೇ ವಿಜಯೇಂದ್ರ ಪ್ರಯಾಣ!
ಏರ್ಪೋರ್ಟ್ನಿಂದ ತೆರಳುವ ವೇಳೆ ವಿಜಯೇಂದ್ರ ಅವರನ್ನು ನಡ್ಡಾ ತಮ್ಮ ಜತೆ ಕಾರಿನಲ್ಲಿ ಕರೆದೊಯ್ದರು. ಇತರ ನಾಯಕರ ಬಳಿ ಶುಕ್ರವಾರ ಮಾತುಕತೆ ನಡೆಸುವುದಾಗಿ ತಿಳಿಸಿದರು. ಇದು ಕುತೂಹಲಕ್ಕೆ ಕಾರಣವಾಗಿದೆ.
ಬಸ್ ದಳದರ ಹೆಚ್ಚಳಕ್ಕೆ ಅಶೋಕ್ ಆಕ್ರೋಶ
ಬಸ್ ಟಿಕೆಟ್ ದರ ಏರಿಕೆಯನ್ನು ಪ್ರತಿಪಕ್ಷ ನಾಯಕ ಅಶೋಕ್ ಖಂಡಿಸಿದ್ದು, ಸಿಎಂ ಸಿದ್ದರಾಮಯ್ಯ ಬರುತ್ತಾ ಬರುತ್ತಾ ಟ್ಯೂಬ್ ಲೈಟ್ ಆಗುತ್ತಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರದಂತೆ ನಮ್ಮ ಸರ್ಕಾರ ಪಾಪರ್ ಆಗ್ತಿದೆ. ಇಂತಹ ಕೆಟ್ಟ ಸರ್ಕಾರ, ಲೂಟಿಕೋರರ ಸರ್ಕಾರವನ್ನು ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ನೋಡಿಲ್ಲ. ಸಿದ್ದರಾಮಯ್ಯ ಇಸ್ ಔಟ್ ಗೋಯಿಂಗ್ ಸಿಎಂ ಎಂದು ಹೇಳಿದರು.
ಇಂದು ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ನಿಮ್ಹಾನ್ಸ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಆರೋಗ್ಯ ಸಚಿವರಾಗಿರುವ ನಡ್ಡಾ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: 2000 ರೂ. ಬದಲು ಬಾಣಂತಿಯರ ಸಾವು ನಿಲ್ಲಿಸಿ, ಅವರಿಗೆ ಬದುಕುವ ಗ್ಯಾರಂಟಿ ಕೊಡಿ: ಆರ್ ಅಶೋಕ್ ವಾಗ್ದಾಳಿ
ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ನಿಮ್ಹಾನ್ಸ್ ಸುತ್ತಮುತ್ತ ನೋ ಫ್ಲೈಯಿಂಗ್ ಜೋನ್ ಎಂದು ಘೋಷಣೆ ಮಾಡಲಾಗಿದೆ. 1 ಕಿ.ಮೀ ವ್ಯಾಪ್ತಿಯಲ್ಲಿ ಏರ್ಕ್ರಾಫ್ಟ್ ಹಾರಾಟ ನಿಷೇಧಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಹಾರಾಟ ನಿರ್ಬಂಧ ಇರಲಿದ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ