ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆ; ಸಂಪುಟ ಸಭೆಯಲ್ಲಿ ನಿರ್ಧಾರ
ಧಾರವಾಡದ ಜನರಿಗೆ ಸಂತಸದ ಸುದ್ದಿಯೊಂದನ್ನು ಇಂದಿನ ಸಚಿವ ಸಂಪುಟ ಸಭೆ ನೀಡಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ಬಗ್ಗೆ ಈ ಮೊದಲೂ ಆಗ್ರಹ ಕೇಳಿಬಂದಿತ್ತು. ಅದಕ್ಕೆ ಅಸ್ತು ಅಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಜನರಲ್ಲಿ ಸಂತೋಷ ಮನೆ ಮಾಡಿದೆ.
ಧಾರವಾಡ: ಹುಬ್ಬಳ್ಳಿ- ಧಾರವಾಡವನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಸಂಪುಟ ನಿರ್ಧಾರ ಮಾಡಿದೆ. ಕೂಡಲೇ ಹುಬ್ಬಳ್ಳಿಯಿಂದ ಧಾರವಾಡವನ್ನು ಪ್ರತ್ಯೇಕ ಮಾಡಿ ಮಹಾನಗರ ಪಾಲಿಕೆ ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದ ಹಿನ್ನೆಲೆಯಲ್ಲಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಸಂಭ್ರಮಾಚರಣೆ ನಡೆದಿದೆ. ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ.
2014ರಲ್ಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಧಾರವಾಡದ ಜನಸಂಖ್ಯೆ 6.5 ಲಕ್ಷ ದಾಟಿರುವುದರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಧಾರವಾಡದ ಜನರು ಆಗ್ರಹಿಸಿದ್ದರು. ಪಾಲಿಕೆಯ ರಚನೆಗೆ 3.5 ಲಕ್ಷ ಜನಸಂಖ್ಯೆಯ ಮೇಲಿರಬೇಕು. ಹೀಗಾಗಿ, ಇದೀಗ ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಘೋಷಿಸಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: https://tv9kannada.com/karnataka
ಇದರ ಜೊತೆಗೆ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಸ್ ದರ ಏರಿಕೆಯ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೇ, ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಕುರಿತು ಚರ್ಚೆ ನಡೆಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ವರದಿ ಮಂಡನೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ವಿಚಾರವಾಗಿ ಮುಂದಿನ ಕ್ರಮದ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಪುಟದಲ್ಲಿ ವರದಿ ಮಂಡಿಸಿ ಸಂಪುಟ ಉಪಸಮಿತಿ ರಚನೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 pm, Thu, 2 January 25