ಕೋಲಾರ: ಮಹಿಳಾ ದಿನಾಚರಣೆಯಂದೇ (Women’s Day) ಸಂಸದ ಎಸ್ ಮುನಿಸ್ವಾಮಿ (S Muniswamy) ಮಹಿಳೆಯೊಬ್ಬರ ಮೇಲೆ ಕೂಗಾಡಿದ ಘಟನೆ ನಡೆದಿದೆ. ಕೋಲಾರ ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಈ ವಿದ್ಯಮಾನ ನಡೆದಿದ್ದು, ಮಹಿಳಾ ದಿನಾಚರಣೆ ಕಾರ್ಯಕ್ರಮದ ವೇಳೆ ಸಂಸದರು ಮಹಿಳೆ ವಿರುದ್ಧ ಸಿಟ್ಟಾಗಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆ ನಿವಾಸಿ ಸುಜಾತಾ ಎಂಬವರು ಮಾರಾಟ ಮಳಿಗೆ ತೆರೆದಿದ್ದರು.
ಅವರು ಹಣೆಗೆ ಕುಂಕುಮ ಧರಿಸಿಲ್ಲವೆಂದು ಅವರ ವಿರುದ್ಧ ಕೂಗಾಡಿದ ಸಂಸದರು, ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಎಂದು ಏಕಾಏಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕ ಶ್ರೀನಿವಾಸಗೌಡ ತಡೆದರೂ ಸುಮ್ಮನಿರದ ಮುನಿಸ್ವಾಮಿ ತಮ್ಮ ಕೂಗಾಟ ರೇಗಾಟ ಮುಂದಿವರಿಸಿದ್ದಾರೆ. ಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಿಸಲು ಯತ್ನಿಸಿದ್ದಾರೆ. ಆದರೆ, ಯಾರ ಮಾತಿನಿಂದಲೂ ಮುನಿಸ್ವಾಮಿ ಸಿಟ್ಟು ತಣ್ಣಗಾಗಿಲ್ಲ.
ಮುಂದುವರಿದು… ಯಾರೊ ಕಾಸು ಕೊಡುತ್ತಾರೆ ಅಂತ ಸುಜಾತಾ ಅಂತ ಹೆಸರು ಇಟ್ಟುಕೊಂಡಿದ್ದೀಯಾ? ಗಂಡ ಬದುಕಿದ್ದಾನೆ ತಾನೇ? ನಿನಗೆ ಕಾಮನ್ ಸೆನ್ಸ್ ಇಲ್ಲ. ತಂದೆ ಹೆಸರು ಬದಲಾಯಿಸುತ್ತೀಯಾ ನೀನು? ಅದನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲ ನಿನಗೆ ಎಂದು ಏಕವಚನದಲ್ಲೇ ಸಂಸದರು ಹರಿಹಾಯ್ದಿದ್ದಾರೆ. ಈ ವೇಳೆ, ಸಂಸದರಿಗೆ ಉತ್ತರಿಸಲಾಗದೆ ಮಹಿಳೆ ತಡಬಡಾಯಿಸಿದ್ದಾರೆ.
ಸಂಸದರು ಮಹಿಳೆಯನ್ನು ತರಾಟೆಗೆ ತೆಗದುಕೊಳ್ಳುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಸದರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೋಲಾರ ಜಿಲ್ಲಾ ಬಿಜೆಪಿ ಘಟಕದಲ್ಲಿ ಬಂಡಾಯ ಹಾಗೂ ಗುಂಪುಗಾರಿಕೆ ಬಿಸಿ ತಟ್ಟಲಾರಂಭವಾಗಿದೆ. ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕೋಲಾರ, ಮಾಲೂರು, ಕೆಜಿಎಫ್ ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ, ಮೂಲ ಹಾಗೂ ವಲಸಿಗರ ಗುಂಪುಗಳ ನಡುವೆ ಹೊಗೆಯಾಡುತ್ತಿದೆ. ಟಿಕೆಟ್ಗಾಗಿ ಸ್ವಪಕ್ಷೀಯರಲ್ಲೇ ಭಿನ್ನಮತ ಉಂಟಾಗಿದ್ದು, ಅದೆಲ್ಲದಕ್ಕಿಂತ ಹೆಚ್ಚಾಗಿ ಮೂಲ ಹಾಗೂ ವಲಸಿಗರ ನಡುವೆ ಗುಂಪುಗಾರಿಕೆ ಶುರುವಾಗಿದೆ.
ಇದನ್ನೂ ಓದಿ: Video ಸಂಸದ ಮುನಿಸ್ವಾಮಿಗೆ ಕಿಸ್ ಕೊಟ್ಟ ಮಾಜಿ ಸಚಿವ ವರ್ತೂರ್ ಪ್ರಕಾಶ್: ಕಾರಣವೂ ಇದೆ…
ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆಯಿಲ್ಲ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಒಂದಷ್ಟು ಸಂಘಟನೆ ಇದೆಯಾದರೂ ಅಲ್ಲಿರುವ ಮೂಲ ಹಾಗೂ ವಲಸಿಗರ ನಡುವಿನ ಗುಂಪುಗಾರಿಕೆ ಹಾಗೂ ಸಂಸದ ಎಸ್.ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವರ ಬೆಂಬಲಿಗರ ನಡುವಿನ ಹೊಂದಾಣಿಕೆ ಕೊರತೆಯಿಂದ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಬಿಜೆಪಿ ಈಬಾರಿ ನಿರೀಕ್ಷೆಗೂ ಮೀರಿದ ಹಿನ್ನಡೆ ಅನುಭವಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈನಡುವೆ ಕ್ಷೇತ್ರದಲ್ಲಿರುವ ಗುಂಪುಗಾರಿಕೆಯನ್ನು ಶಮನ ಮಾಡುವ ಚುನಾವಣೆಗೆ ವೇದಿಕೆ ಸಿದ್ದಮಾಡುವ ಕೆಲಸವೂ ನಡೆಯುತ್ತಿಲ್ಲ ಎಂದು ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Wed, 8 March 23