ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದ ಪೋಷಕರು
ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಸರಿಪಡಿಸದ ಹಿನ್ನೆಲೆಯಲ್ಲಿ ಪೊಷಕರೊಬ್ಬರು ತನ್ನ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಸುಸರ್ಜಿತವಾದ ಖಾಸಗಿ ಶಾಲೆಗೆ ಸೇರಿಸಲು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಅಪರೂಪದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ: ಸರ್ಕಾರಿ ಶಾಲೆ ಸರಿ ಇಲ್ಲಾ ಸರ್ಕಾರಿ ಶಾಲೆಯಲ್ಲಿ ಹಲವು ಸಮಸ್ಯೆಗಳು, ಸರ್ಕಾರಿ ಶಾಲೆಯಲ್ಲಿ ಇಂದಿನ ಕಾಲಕ್ಕೆ ಬೇಕಾದ ಗುಣಮಟ್ಟದ ಶಿಕ್ಷಣ ಸಿಗೋದಿಲ್ಲ ಅನ್ನೋ ಹಲವು ಮಾತುಗಳು ಕೇಳಿ ಬಂದರು ಈಗಲೂ ಎಷ್ಟೋ ಜನ ಸರ್ಕಾರಿ ಶಾಲೆಯ ಮೇಲಿರುವ ತಮ್ಮ ಅಭಿಮಾನದಿಂದ ಇಂದಿಗೂ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿಸುತ್ತಲೇ ಇದ್ದಾರೆ, ಆದರೆ ಸರ್ಕಾರಿ ಶಾಲೆಯ (Govt School Gandhinagar, Kolar) ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಸರಿಪಡಿಸದ ಹಿನ್ನೆಲೆಯಲ್ಲಿ ಪೊಷಕರೊಬ್ಬರು ತನ್ನ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಸುಸರ್ಜಿತವಾದ ಖಾಸಗಿ ಶಾಲೆಗೆ ಸೇರಿಸಲು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ (Karnataka Education Department) ಪತ್ರ ಬರೆದಿರುವ ಅಪರೂಪದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ನಗರದಲ್ಲಿರುವ ಗಾಂಧಿನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೂರು ವರ್ಷಗಳ ಇತಿಹಾಸ ಇದೆ. ಅಂದರೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡವಾಗಿದ್ದು, ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಇಂದಿಗೂ ಶಿಕ್ಷಣ ಪಡೆಯುತ್ತಲೇ ಇದ್ದಾರೆ. ಆದರೂ ಮಕ್ಕಳ ಬರುವಿಕೆ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಕಾರಣ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅನ್ನೋ ನಂಬಿಕೆ ಜೊತೆಗೆ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಪೊಷಕರಿಗೆ ಸರ್ಕಾರಿ ಶಾಲೆಯ ಮೇಲಿರುವ ಅಭಿಮಾನ. ಆದರೆ ಇತ್ತೀಚೆಗೆ ಈ ಶಾಲಾ ಕಟ್ಟಡ ಶಿಥಿಲಗೊಂಡು ಕಟ್ಟಡದ ಮೇಲ್ಚಾವಣಿ ಕುಸಿದು ಬೀಳುತ್ತಿದೆ. ಈ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಮಾಡಲಾಗುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನಿರಂತರ ಮಳೆ ಬಂದಾಗ ಕಟ್ಟಡದ ಮೇಲ್ಚಾವಣಿ ಪ್ಲಾಸ್ಟಿಂಗ್ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ, ಆದರೆ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ಕಟ್ಟಡ ಸರಿಪಡಿಸುವುದಾಗಿ ಹೇಳಿ ಇವತ್ತಿಗೂ ಕೂಡಾ ಸರ್ಕಾರಿ ಶಾಲಾ ಕಟ್ಟಡವನ್ನು ಸರಿ ಮಾಡಿಲ್ಲ.
ಇದನ್ನೂ ಓದಿ: ಕೋಲಾರ: ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ
ಶಿಕ್ಷಣ ಇಲಾಖೆ ಹಣ ಕೊಟ್ಟರು ರಿಪೇರಿಯಾಗದ ಕಟ್ಟಡ!
ಗಾಂಧಿನಗರದ ಶಾಲಾ ಕಟ್ಟಡ ಶಿಥಿಲವಾಗಿರುವ ಹಿನ್ನಲೆ ಮೇಲ್ಚಾವಣಿ ಕುಸಿದು ಬಿದ್ದಾಗ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಎರಡು ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿ ಶಾಲಾ ಕಟ್ಟಡ ರಿಪೇರಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರು. ಆದರೆ ಘಟನೆ ನಡೆದು ಆರು ತಿಂಗಳು ಕಳೆದರೂ ಇನ್ನು ಶಾಲಾ ಕಟ್ಟಡ ರಿಪೇರಿ ಮಾಡದ ಹಿನ್ನಲೆಯಲ್ಲಿ ಪೊಷಕರೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸಿ ಸುಸರ್ಜಿತ ಕಟ್ಟಡ ಇರುವ ಖಾಸಗಿ ಶಾಲೆಗೆ ಸೇರಿಸುತ್ತಿರುವುದಾಗಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ನಾನು ನನ್ನ ಮಕ್ಕಳನ್ನು ಸರ್ಕಾರಿ ಶಾಲೆ ಬಿಡಿಸುವಂತೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ಶಿಥಿಲವಾದ ಕಟ್ಟಡ; ಮಕ್ಕಳ ಪ್ರಾಣಕ್ಕೆ ಆತಂಕ
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿ.ಪ್ರಕಾಶ್ ಎಂಬುವರು ತನ್ನ ಮಕ್ಕಳಾದ ಕೇಸರ್ ಹಾಗೂ ರಾಣಾ ಎಂಬುವರನ್ನು ಯಾರೂ ಏನೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಸರ್ಕಾರಿ ಶಾಲೆಯಲ್ಲೇ ಓದಿಸುತ್ತಿದ್ದಾರೆ. ಇವತ್ತಿನ ಕಾಲದಲ್ಲಿ ಕೂಲಿ ಮಾಡುವವರು ಕೂಡಾ ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಆದರೆ ಪ್ರಕಾಶ್ ಅವರು ನಿತ್ಯ 4000 ಸಾವಿರ ರೂಪಾಯಿ ಸಂಪಾದನೆ ಮಾಡಿದರೂ ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕೆಂಬ ಹಂಬಲದಿಂದಲೇ ಗಾಂಧಿನಗರ ಸರ್ಕಾರಿ ಶಾಲೆಯಲ್ಲೇ ಓದಿಸುತ್ತಿದ್ದೇನೆ. ಆದರೆ ಈಗ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಶಿಥಿಲವಾಗಿದ್ದು, ನನ್ನ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಕ್ಕಳಿಗೆ ಪ್ರಾಣ ಭಯವಿರುವ ಕಾರಣದಿಂದ ನಾನು ಸುಸರ್ಜಿತ ವಾಗಿರುವ ಖಾಸಗಿ ಶಾಲೆಗೆ ನನ್ನ ಮಕ್ಕಳನ್ನು ಸೇರಿಸಲು ನಿರ್ಧಾರ ಮಾಡಿದ್ದು, ಮಕ್ಕಳ ವರ್ಗಾವಣೆ ಪತ್ರೆ ಪಡೆಯಲು ಸಿದ್ದನಿದ್ದೇನೆ. ನನ್ನಂತ ಪೊಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಂತೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪ್ರಕಾಶ್ ಡಿಡಿಪಿಐ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಟಿವಿ9 ಸುದ್ದಿ ಮಾಧ್ಯಮಕ್ಕೂ ಕೂಡಾ ಪತ್ರ ಬರೆದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ವರದಿ : ರಾಜೇಂದ್ರಸಿಂಹ, ಟಿವಿ9 ಕೋಲಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Tue, 7 March 23