ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಡುವೆ ಮಾತಿನ ಸಮರ; ಭ್ರಷ್ಟಾಚಾರದ ಆರೋಪ- ಪ್ರತ್ಯಾರೋಪ
ಶನಿವಾರ ಬಂಗಾರಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಕಾರ್ಯಕಾರಣಿಯಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಸಮ್ಮುಖದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಭ್ರಷ್ಟ ಶಾಸಕನ ಕಡತಗಳು ಟೇಬಲ್ ತುಂಬಿವೆ ಎಂದು ಶಾಸಕ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕೋಲಾರ: ಕಳೆದ 2 ದಿನಗಳಿಂದ ಸಂಸದ ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮಧ್ಯೆ ಎರಡನೇ ಸುತ್ತಿನ ಮಾತಿನ ಸಮರ ಶುರುವಾಗಿದೆ. ಮುನಿಸ್ವಾಮಣ್ಣ, ನಾರಾಯಣಸ್ವಾಮಣ್ಣ ಹೀಗೆ ಒಬ್ಬರಿಗೊಬ್ಬರು ಅಣ್ಣಾ ಅಣ್ಣಾ ಎನ್ನುತ್ತಾ ಕುಚ್ಚುಕು ದೋಸ್ತಿಗಳಾಗಿದ್ದ ಶಾಸಕ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ಮಧ್ಯೆ ಏಕ ವಚನದ ಪ್ರಯೋಗ ಶುರುವಾಗಿದೆ. ತಮ್ಮಿಬ್ಬರ ಮುಸುಕಿನ ಗುದ್ದಾಟಕ್ಕೆ ಕೆಲ ದಿನಗಳ ಕಾಲ ಬ್ರೇಕ್ ನೀಡಿದ್ದ ಇಬ್ಬರು, ಮತ್ತೆ ಒಬ್ಬರ ಮೇಲೊಬ್ಬರು ಸರ್ಕಾರಿ ಭೂಮಿ ಕಬಳಿಕೆ ಹಾಗೂ ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.
ಇದರಿಂದ ಯಾರೂ ಉತ್ತಮರು, ಯಾರೂ ಜನ ಸೇವಕರು ತಿಳಿಯದ ಜನರಿಗೆ ಪುಕ್ಕಟೆ ಮನರಂಜನೆಯಾಗಿದೆ. ಶನಿವಾರ ಬಂಗಾರಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಕಾರ್ಯಕಾರಣಿಯಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಸಮ್ಮುಖದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಭ್ರಷ್ಟ ಶಾಸಕನ ಕಡತಗಳು ಟೇಬಲ್ ತುಂಬಿವೆ ಎಂದು ಶಾಸಕ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ನಿನ್ನೆ (ಆಗಸ್ಟ್ 8) ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿಯಲ್ಲಿ ಟಾಂಗ್ ನೀಡಿರುವ ಶಾಸಕ ನಾರಾಯಣಸ್ವಾಮಿ ಸಂಸದ ಎಸ್.ಮುನಿಸ್ವಾಮಿ ಮೇಲೆ ಏಕವಚನ ಪ್ರಯೋಗ ಮಾಡುತ್ತಾ ಸರ್ಕಾರಿ ಭೂಮಿಯಲ್ಲಿ ಗುಡಿಸಲು ಹಾಕಿ ಕೋಟ್ಯಾಂತರ ರೂ. ಆಸ್ತಿ ಕಬಳಿಕೆ ಮಾಡಿದ್ದು ನಾನಲ್ಲ, ಇಂದಿಗೂ ರೌಡಿಶೀಟರ್ ಆದ ನೀನು. ರೌಡಿಸಂ ಮಾಡಿ ಜನರನ್ನು ಬೆದರಿಸಿ ಅಧಿಕಾರಿಗಳ ಬಳಿ ಮಾಮೂಲಿ ಫಿಕ್ಸ್ ಮಾಡಿ ವಸೂಲಿ ಮಾಡುತ್ತಿರುವ ನೀನು ನನ್ನ ಬಗ್ಗೆ ಮಾತನಾಡುತ್ತಿಯಾ. ತನ್ನ ಭ್ರಷ್ಟಾಚಾರ ಸಾಬೀತು ಮಾಡಿದರೆ ಸಂಸದರ ಮನೆಯ ಕೂಲಿಯಾಳಾಗಿರುವೆ ಎಂದು ನಿನ್ನೆ ಶಾಸಕ ನಾರಾಯಣಸ್ವಾಮಿ ಸವಾಲೆಸೆದಿದ್ದಾರೆ. ನಿಮಗೆ ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆಗೆ ಮತ್ತೆ ನಿಂತು ಗೆಲ್ಲುವಂತೆ ಶಾಸಕ ನಾರಾಯಣಸ್ವಾಮಿ ಸವಾಲಾಕಿದ್ದಾರೆ.
ಅಣ್ಣ ತಮ್ಮಂದಿರಂತೆ ಇದ್ದ ಇಬ್ಬರ ಸಂಬಂಧ 3 ತಿಂಗಳ ಹಿಂದೆಯಷ್ಟೆ ಬಿರುಕು ಬಿಟ್ಟಿತ್ತು. ಸಂಸದ ಮುನಿಸ್ವಾಮಿ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕರನ್ನ ಸೇರಿಸಿ ಔತಣ ಕೂಟ ಮಾಡಿದ್ದ ನಾರಾಯಣಸ್ವಾಮಿಯನ್ನ ಸಂಸದ ಮುನಿಸ್ವಾಮಿ ಟಾಂಗ್ ನೀಡುತ್ತಲೆ ಇದ್ದಾರೆ. ಕಳೆದ 2 ದಿನಗಳಿಂದ ನಿರಂತರವಾಗಿ ಶಾಸಕ ನಾರಾಯಣಸ್ವಾಮಿ ವಿರುದ್ಧ ಸವಾಲೆಸೆಯುತ್ತಿರುವ ಮುನಿಸ್ವಾಮಿ, ನಿನ್ನೆಯೂ ಸಹ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯಲ್ಲಿ ಶಾಸಕರ ಮಾತಿಗೆ ಟಾಂಗ್ ನೀಡಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ನಡೆದಿರುವ ಸರ್ಕಾರಿ ಭೂಮಿ ಕಬಳಿಕೆ ಸಾಬೀತು ಮಾಡುವುದಾಗಿ ಸವಾಲು ಹಾಕಿದ್ದಾರೆ. ಎಸ್.ಎನ್.ಸಿಟಿ ಬಡಾವಣೆಯಲ್ಲಿ ಸರ್ಕಾರಿ ಕೆರೆ ಹಾಗೂ ಗೋಮಾಳ ಕಬಳಿಕೆ ಮಾಡಿದ್ದಾರೆ.
ಶಾಸಕ ನಾರಾಯಣಸ್ವಾಮಿ ತಾಲೂಕಿನಲ್ಲಿ ಏಕ ಚಕ್ರಾದಿಪತ್ಯದ ಆಡಳಿತ ನಡೆಸುತ್ತಿದ್ದಾರೆ. ಗಾಲ್ಫ್ ಕೋರ್ಟ್ ನಿರ್ಮಾಣ ವೇಳೆ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ. ಸ್ಟಾಂಪ್ ವೆಂಡರ್ ಕೆಲಸ ಮಾಡಲು ಸೈಕಲ್ನಲ್ಲಿ ಬರುತ್ತಿದ್ದವರು ಸರ್ಕಾರಿ ದಾಖಲೆ ಕದ್ದು ಆಸ್ತಿ ಮಾಡಿದ್ದಾರೆಂದು ಶಾಸಕರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ
(MP Muniswamy and MLA SN Narayana swamy talk war rises on corruption allegation)