ಕಳೆದೊಂದು ದಶಕದಿಂದ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ ಕೇಂದ್ರ ಬ್ಯಾಂಕ್ ಅಂದರೆ ಡಿಸಿಸಿ ಬ್ಯಾಂಕ್ ಈಗ ಮತ್ತೆ ಸದ್ದು ಮಾಡುತ್ತಿದೆ. ಇಷ್ಟು ದಿನ ಹಲವು ಮಹಿಳಾ ಹಾಗೂ ರೈತರ ಪರವಾದ ಕಾರ್ಯಗಳಿಂದಲೇ ಸದ್ದು ಮಾಡಿದ್ದ ಬ್ಯಾಂಕ್, ಈಗ ಹಲವು ಹಗರಣಗಳು-ಗುಂಪುಗಾರಿಕೆ ಗೊಂದಲಗಳಿಂದ ಸದ್ದು ಮಾಡುತ್ತಿದೆ. ಹೌದು ಡಿಸಿಸಿ ಬ್ಯಾಂಕ್ನ ನಿರ್ದೇಶಕರುಗಳ ಚುನಾವಣೆ ನಿಗದಿತ ಸಮಯಕ್ಕೆ ನಡೆಯದ ಹಿನ್ನೆಲೆ ಆಡಳಿತ ಮಂಡಳಿ ಅಧಿಕಾರವಾದಿ ನವೆಂಬರ್-17-2023ಕ್ಕೆ ಪೂರ್ಣಗೊಂಡಿದ್ದು,ಈ ಹಿನ್ನೆಲೆ ಈಗಾಗಲೇ ಸರ್ಕಾರ ಬ್ಯಾಂಕ್ ಕಾರ್ಯಕ್ಕೆ ಅಡ್ಡಿಯಾಗದಂತೆ ಆಡಳಿತಾಧಿಕಾರಿ ನೇಮಕ ಮಾಡಿದೆ.
ಇನ್ನು ಆಡಳಿತಾಧಿಕಾರಿ ನೇಮಕವಾಗಿ ಒಂಬತ್ತು ತಿಂಗಳು ಕಳೆದರೂ ಇನ್ನು ಚುನಾವಣೆ ನಡೆಸಲು ಹಲವು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಆಡಳಿತ ಮಂಡಳಿ ಅಧಿಕಾರವಧಿ 195 ದಿನ ಬಾಕಿ ಇರುವಾಗಲೇ ಚುನಾವಣೆ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಬ್ಯಾಂಕ್ನಲ್ಲಿ ರಾಜಕೀಯ ಪ್ರೇರಿತ ಕೆಲವು ಗುಂಪುಗಾರಿಕೆ ಹಿನ್ನೆಲೆ ಚುನಾವಣೆ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಡಿಸಿಸಿ ಬ್ಯಾಂಕ್ನ ಚುನಾವಣೆಯಲ್ಲಿ ಅನರ್ಹರಾದ ಮತದಾರರಿಗೆ ನೋಟೀಸ್ ಜಾರಿ ಮಾಡದೆ ಅನರ್ಹತೆ ಪಟ್ಟಿ ಹೊರಡಿಸಿದ ಹಿನ್ನೆಲೆಯಲ್ಲಿ ಅನರ್ಹರಾದ ಕೆಲವು ಷೇರುದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕೋರ್ಟ್ ಆದೇಶ ದಿಕ್ಕರಿಸಿ ಕೋಚಿಮುಲ್ ಆಡಳಿತ ಮಂಡಳಿ ಸಭೆ; ರೈತ ಸಂಘದಿಂದ ಪ್ರತಿಭಟನೆ
ಆ ಪ್ರಕರಣವನ್ನು ವಿಚಾರಣೆ ನಡೆಸಿರುವ ನ್ಯಾಯಾಲಯ ನಿಯಮ13ಡಿ ಪ್ರಕಾರ ಅನರ್ಹರಾದವರಿಗೆ ನೋಟೀಸ್ ನೀಡಿ ನಂತರ ಚುನಾವಣಾ ಪ್ರಕ್ರಿಯೆ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜುಲೈ-10 ರಂದು ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ಆದೇಶ ಹೊರಡಿಸಿದರಾದರೂ, ನ್ಯಾಯಾಲಯದ ಸೂಚನೆಯಂತೆ 13ಡಿ ನಿಯಮ ಪಾಲನೆ ಮಾಡಬೇಕಾದ ಹಿನ್ನೆಲೆ ಅಂದೇ ತಮ್ಮ ಆದೇಶವನ್ನು ರದ್ದು ಮಾಡಿದ್ದಾರೆ. ಸದ್ಯ ಅನರ್ಹ ಮತದಾರರಿಗೆ ನೀಡಿರುವ ನೋಟಿಸ್ ಗೆ 90 ದಿನ ಗಡುವು ನೀಡಿದ್ದು ಅದರ ಗಡುವು ಮುಗಿದ ನಂತರ ಚುನಾವಣಾ ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
2013ಕ್ಕೂ ಮೊದಲು ನಷ್ಟದ ಸುಳಿಗೆ ಸಿಲುಕಿದ್ದ ಡಿಸಿಸಿ ಬ್ಯಾಂಕಿಗೆ 2103 ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ವಿಶೇಷ ಅನುಧಾನ ನೀಡಿ ಕೋಲಾರ ಡಿಸಿಸಿ ಬ್ಯಾಂಕ್ಗೆ ಪುನರ್ ಜೀವನ ಕೊಟ್ಟಿತ್ತು. ಅದಾದ ನಂತರ ಕಳೆದೊಂದು ದಶಕದಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಇಡೀ ರಾಜ್ಯದಲ್ಲಿ ಹಾಗೂ ರಾಷ್ಟ ಮಟ್ಟದಲ್ಲಿ ವಿವಿದ ಹಾಗೂ ವಿನೂತನ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿತ್ತು.
ಎರಡೂ ಜಿಲ್ಲೆಯಲ್ಲಿ ಸಾವಿರಾರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ ಜೀವನಾಡಿಯಾಗಿ ಮಾರ್ಪಾಡಾಗಿತ್ತು, ಆದರೆ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾಂಗ್ರೇಸ್ನಲ್ಲಿ ಉಂಟಾದ ಬಣ ರಾಜಕೀಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಹಾಲಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಗುಂಪಿನ ನಡುವಿನ ಗುಂಪುಗಾರಿಕೆಯಿಂದ ಬ್ಯಾಂಕ್ ಮಂಕಾಯ್ತು.
ಇದನ್ನೂ ಓದಿ: ಕೋಲಾರಕ್ಕೆ ಬರಲಿದೆ ಬುಲೆಟ್ ರೈಲು; ಮತ್ತೊಂದು ಹೈಸ್ಪೀಡ್ ಟ್ರೈನ್ ಯೋಜನೆ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
ಇನ್ನು ಡಿಸಿಸಿ ಬ್ಯಾಂಕ್ನಲ್ಲಿ ಹಲವು ವರ್ಷಗಳಿಂದ ಬಡ್ಡಿ ಕ್ಲೈಮ್ನಲ್ಲಿ ಹಗರಣ, ಹಣ ದುರುಪಯೋಗ, ಸರ್ಕಾರದಿಂದ ಸಾಲ ಮನ್ನಾ ಸ್ಕೀಂನಲ್ಲಿ ಹಣ ದುರುಪಯೋಗ, ಸೇರಿದಂತೆ ಹಲವು ಹಣಕಾಸಿನ ಅವ್ಯವಹಾರ ಹಗರಣಗಳು ಸದ್ದು ಮಾಡುತ್ತಿವೆ. ಹಾಗಾಗಿ ಬ್ಯಾಂಕ್ ನಲ್ಲಿ ಸರ್ಕಾರದ ಆಡಳಿತಾಧಿಕಾರಿ ಇರುವ ಹಂತದಲ್ಲೇ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆ ನಡೆಸಬೇಕು. ಆಗ ಹಗರಣ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಆ ನಂತರದಲ್ಲಿ ಚುನಾವಣೆ ನಡೆಸಬೇಕು.
ಜೊತೆಗೆ ಬ್ಯಾಂಕಿನ ಕೆಲವು ಉಪನಿಯಮಗಳಲ್ಲಿ ತಿದ್ದುಪಡಿ ತರಬೇಕು ಜೊತೆಗೆ ಕಳೆದ ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆ ನಡೆಸುವಲ್ಲಿ ವಿಫಲವಾದ ಹಿನ್ನೆಲೆ ಆಡಳಿತ ಮಂಡಳಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದ್ದು ಈ ಎಲ್ಲಾ ಕಾರ್ಯಗಳು ಮುಗಿದ ನಂತರ ಚುನಾವಣೆ ನಡೆಸಬೇಕು ಅನ್ನೋದು ಡಿಸಿಸಿ ಬ್ಯಾಂಕ್ ಹಗರಣಗಳ ವಿರುದ್ದ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಕೋಲಾರದ ಡಿ.ಮುನೇಶ್ ಅವರ ಮನವಿಯಾಗಿದೆ.
ಒಟ್ಟಾರೆ ನಷ್ಟದ ಸುಳಿಯಿಂದ ಹೊರ ಬಂದು ಒಂದ ದಶಕಗಳ ತನ್ನ ವಿಭಿನ್ನ ಕಾರ್ಯಚಟುವಟಿಕೆಯಿಂದಲೇ ಸದ್ದು ಮಾಡಿದ್ದ ಡಿಸಿಸಿ ಬ್ಯಾಂಕ್ ಈಗ ಕಾಂಗ್ರೇಸ್ ನಾಯಕರ ನಡುವೆ ನಡೆಯುತ್ತಿರುವ ಗುಂಪುಗಾರಿಕೆ ಹಾಗೂ ಹಲವು ಹಣಕಾಸಿನ ದುರುಪಯೋಗ ಹಗರಣಗಳಿಂದಾಗಿ ಮತ್ತೆ ನಷ್ಟದ ಸುಳಿಗೆ ಸಿಲುಕಿ ನಸುಕಿಗೆ ಸರಿಯುತ್ತಾ ಅನ್ನೋ ಆತಂಕ ಸಹಕಾರಿ ಮುಖಂಡರದ್ದು.