ಕೋರ್ಟ್​ ಆದೇಶ ದಿಕ್ಕರಿಸಿ ಕೋಚಿಮುಲ್​ ಆಡಳಿತ ಮಂಡಳಿ ಸಭೆ; ರೈತ ಸಂಘದಿಂದ ಪ್ರತಿಭಟನೆ

ಅದು ಅಕ್ರಮ ನೇಮಕಾತಿ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಸಹಕಾರಿ ಸಂಸ್ಥೆ, ಅಲ್ಲದೆ ಅಲ್ಲಿನ ಅಕ್ರಮ ನೇಮಕಾತಿಯಿಂದ ಅಲ್ಲಿನ ಅಧ್ಯಕ್ಷರು ಹಾಗೂ ನಿರ್ದೇಶಕರುಗಳು ಇ.ಡಿ(ಜಾರಿ ನಿರ್ದೇಶನಾಲಯ) ದಾಳಿಯನ್ನು ಎದುರಿಸಿದ್ದರು. ಸದ್ಯ ಈಗ ಅದೇ ಸಂಸ್ಥೆ ಮತ್ತೊಂದು ಅಕ್ರಮದ ಮೂಲಕ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಏನದು ಅಕ್ರಮ? ಇಲ್ಲಿದೆ ಡೀಟೇಲ್ಸ್​.

ಕೋರ್ಟ್​ ಆದೇಶ ದಿಕ್ಕರಿಸಿ ಕೋಚಿಮುಲ್​ ಆಡಳಿತ ಮಂಡಳಿ ಸಭೆ; ರೈತ ಸಂಘದಿಂದ ಪ್ರತಿಭಟನೆ
ಕೋರ್ಟ್​ ಆದೇಶ ದಿಕ್ಕರಿಸಿ ಕೋಚಿಮುಲ್​ ಆಡಳಿತ ಮಂಡಳಿ ಸಭೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 19, 2024 | 8:54 PM

ಕೋಲಾರ, ಜು.19: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(Kolar-Chikkaballapur Milk Union)ದ ಹಾಲಿ ಆಡಳಿತ ಮಂಡಳಿಯ ಅವಧಿ ಮೇ-12ಕ್ಕೆ ಮುಕ್ತಾಯವಾಗಿದೆ. ಆದರೂ ಆಡಳಿತ ಮಂಡಳಿ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಈಗ ಏಕಪಕ್ಷೀಯವಾಗಿ ಸರ್ವಸದಸ್ಯರ ಸಭೆ ನಡೆಸಲು ಮುಂದಾಗಿದೆ. ಅಲ್ಲದೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಚುನಾವಣಾ ಪ್ರಕ್ರಿಯೆಗಳನ್ನು ಮಾಡಬೇಕಿದ್ದ ವೇಳೆ, ಈಗಿರುವ ಆಡಳಿತ ಮಂಡಳಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಇದೇ ಜುಲೈ-23 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸರ್ವ ಸದಸ್ಯರ ಸಭೆ ನಡೆಸಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಹಾಗಾಗಿ ಕೋಚಿಮುಲ್​ ಆಡಳಿತ ಮಂಡಳಿಯ ಈ ಕ್ರಮವನ್ನು ಖಂಡಿಸಿ ಇಂದು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೂಡಲೇ ಕೋಚಿಮುಲ್​ ಆಡಳಿತ ಮಂಡಳಿಗೆ ಆಡಳಿತಾಧಿಕಾರಿ ನೇಮಕ ಮಾಡಿ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದರು.
ಇನ್ನು ಈಗಾಗಲೇ ಸರ್ಕಾರ ಕೂಡ ಈ ಬಗ್ಗೆ ಕೋಚಿಮುಲ್​ ಆಡಳಿತ ಮಂಡಳಿಗೆ ಆಗತ್ಯ ನಿರ್ಧೇಶನ ನೀಡಬೇಕಿತ್ತು. ಆದರೆ, ಸರ್ಕಾರ ಕೋಚಿಮುಲ್​ ಅಧ್ಯಕ್ಷ ಹಾಗೂ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡರ ಹೇಳಿದಂತೆ ನಡೆಯುತ್ತಿದೆ. ಅದಕ್ಕಾಗಿ ಕೋರ್ಟ್​ ಅದೇಶವನ್ನು ದಿಕ್ಕರಿಸಿ, ಅಕ್ರಮವಾಗಿ ಸರ್ವಸದಸ್ಯರ ಸಭೆ ನಡೆಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟದ ವಿಭಜನೆ ಸೇರಿದಂತೆ ಕೆಲವೊಂದು ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ಲಾನ್​ ಮಾಡಿದೆ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಅವಧಿಯನ್ನು ಜೂನ್​-6ರ ವರೆಗೆ ಮಾತ್ರ ಮುಂದೂಡಲಾಗಿತ್ತು. ಆದರೆ, ಜೂನ್-6 ರ ನಂತರವೂ ಚುನಾವಣಾ ಪ್ರಕ್ರಿಯೆ ನಡೆಸದ ಹಿನ್ನೆಲೆಯಲ್ಲಿ ಹೈಕೋರ್ಟ್​ನಲ್ಲಿ ದಾವೆ ಹೂಡಲಾಗಿತ್ತು. ಹಾಗಾಗಿ ಹೈಕೋರ್ಟ್​ ಜೂನ್​-6ಕ್ಕೆ ಚುನಾವಣಾ ಯಾವ ಹಂತದಲ್ಲಿ ನಿಂತಿತ್ತೋ ಅಲ್ಲಿಂದ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆದೇಶಿಸಿದೆ. ಅದರಂತೆ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಅದನ್ನು ಸಂಬಂಧ ಪಟ್ಟ ಸಂಘಗಳಿಗೆ ಕಳಿಸಿ ನಂತರ ಚುನಾವಣಾ ಪ್ರಕ್ರಿಯೆಯನ್ನು ನಡೆಸುವಂತೆ ತಿಳಿಸಿತ್ತು.
ಇದರ ಜೊತೆಗೆ ಕೋರ್ಟ್​ ಹೊಸ ಆಡಳಿತ ಮಂಡಳಿ ಬರುವವರೆಗೆ ಹಾಲಿ ಆಡಳಿತ ಮಂಡಳಿ ಯಾವುದೇ ಆತಳಿತಾತ್ಮಕ ಹಾಗೂ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳದಂತೆಯೂ ತಿಳಿಸಿತ್ತು. ಆದರೆ, ಈಗ ಇರುವ ಹಾಲಿ ಆಡಳಿತ ಮಂಡಳಿ ಕಾನೂನು ಹಾಗೂ ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಸರ್ವ ಸದಸ್ಯರ ಸಭೆ ಕರೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರ ನೀಡುವ ನಿರ್ದೇಶನಕ್ಕೆ ತಕ್ಕಂತೆ ನಡೆಯುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಹಾಲು ಉತ್ಪಾದಕರಿಗೆ ಹಾಲಿನ ದರ ಇಳಿಸಿರುವುದು ಸೇರಿ ಹಲವು ಅಕ್ರಮಗಳಿಂದಲೇ ಸದ್ದು ಮಾಡುತ್ತಿರುವ ಕೋಚಿಮುಲ್​ ಸದ್ಯ ಈಗ ಮತ್ತೊಂದು ಅಕ್ರಮಕ್ಕೆ ಮುಂದಾಗುತ್ತಿದೆ. ಸದ್ಯ ಇದಕ್ಕೆ ಸರ್ಕಾರ ಹಾಗೂ ನ್ಯಾಯಾಲಯ ಏನು ಕ್ರಮ ಕೈಗೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ