AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ ಬಯಲಿಗೆಳೆದ RTI ಕಾರ್ಯಕರ್ತರ ವಿರುದ್ಧ ದೂರು, ಸಿಎಂ ರಕ್ಷಣೆಗೆ ಎಂದ ಕುಮಾರಣ್ಣ

ವಾಲ್ಮೀಕಿ ಹಗರಣ ಬಯಲಾಗುತ್ತಿದ್ದಂತೆಯೇ ಅತ್ತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದೀಗ ಮುಡಾ ಹಗರಣ ಬಯಲಿಗೆಳೆದ ಆರ್​ಟಿಐ ಕಾರ್ಯಕರ್ತನ ವಿರುದ್ಧವೇ ದೂರು ನೀಡಲಾಗಿದ್ದು, ಇದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಮುಡಾ ಹಗರಣ ಬಯಲಿಗೆಳೆದ RTI ಕಾರ್ಯಕರ್ತರ ವಿರುದ್ಧ ದೂರು, ಸಿಎಂ ರಕ್ಷಣೆಗೆ ಎಂದ ಕುಮಾರಣ್ಣ
ಮುಡಾ ಹಗರಣ
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on: Jul 19, 2024 | 8:33 PM

Share

ಮೈಸೂರು, (ಜುಲೈ 19): ಮುಡಾ ಹಗರಣ ಬಯಲಿಗೆಳೆದ ಆರ್​​ಟಿಐ ಕಾರ್ಯಕರ್ತರ ವಿರುದ್ಧವೇ ಇದೀಗ ದೂರು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತರಾದ ಗಂಗರಾಜು ಮತ್ತು ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರು ಕಾಂಗ್ರೆಸ್ ಘಟಕ ದೂರು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ವ್ಯಕ್ತಿತ್ವ ಕೆಡಿಸಲು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್‌ಗೆ ದೂರು ನೀಡಲಾಗಿದೆ.

ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಮೈಸೂರು ನಗರಾಧ್ಯಕ್ಷ ಆರ್.ಮೂರ್ತಿ ಅವರು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್‌ಗೆ ದೂರು ನೀಡಿದ್ದು, ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡಿರುವ RTI ಕಾರ್ಯಕರ್ತರಾದ ಗಂಗರಾಜು, ಸ್ನೇಹಮಯಿ ಕೃಷ್ಣ ವಿರುದ್ಧ ಕಾನೂನು ಕ್ರಮಜರುಗಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಆಪ್ತರ ಒಳ ಜಗಳದಿಂದಲೇ ಬಯಲಾಯ್ತಾ ಮುಡಾ ಹಗರಣ? ಮುಡಾ ಅಧ್ಯಕ್ಷರ ಹೇಳಿಕೆಗಳು ಹುಟ್ಟುಹಾಕಿದ ಪ್ರಶ್ನೆಗಳಿವು

ಕುಮಾರಸ್ವಾಮಿ ಗಂಭೀರ ಆರೋಪ

ಇನ್ನು ಮುಡಾ ಹಗರಣ ಬಯಲಿಗೆಳೆದ ಆರ್​ಟಿಐ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್​ ದೂರು ನೀಡಿರುವುದಕ್ಕೆ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನ ಮೂಡದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ RTI ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಹಗರಣಗಳನ್ನು ಪ್ರಶ್ನಿಸಿದ ಪ್ರತಿಪಕ್ಷಗಳನ್ನು ವಿಧಾನಮಂಡಲದಲ್ಲಿ ಹತ್ತಿಕ್ಕಲಾಯಿತು! ಸತ್ಯಶೋಧನೆಯಲ್ಲಿ ನಿರತರಾದ RTI ಕಾರ್ಯಕರ್ತರನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ದಮನ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಕುಟುಂಬ ಮೈಸೂರಿನ ಮೂಡಾದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ RTI ಕಾರ್ಯಕರ್ತರನ್ನು ಕಾಂಗ್ರೆಸ್ ಗುರಿ ಮಾಡಿಕೊಂಡಿದೆ. ಆರೋಪಿತ ಸ್ಥಾನದಲ್ಲಿರುವ ಸಿಎಂ ಪರಿವಾರವನ್ನು ರಕ್ಷಿಸುವ ಏಕೈಕ ದುರುದ್ದೇಶದಿಂದ ಕಾಂಗ್ರೆಸ್ಸಿಗರು RTI ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಿದೆ ಈ ನಾಟಕ ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಮುಖ್ಯಮಂತ್ರಿ ಪತ್ನಿಯ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿ ಜಮೀನು ತನ್ನದು ಎಂದಿದ್ದಾರೆ: ಆರ್​ಟಿಐ ಕಾರ್ಯಕರ್ತ

ಪೊಲೀಸ್ ಬಲ ಬಳಸಿ ಸತ್ಯದ ಕತ್ತು ಹಿಚುಕಲು ಸಾಧ್ಯವೇ ಇಲ್ಲ. ಹಾದಿಬೀದಿಯಲ್ಲಿ ಜನರ ಕೈಗೆ ಸಿಕ್ಕಿರುವ ದಾಖಲೆಗಳೇ ಮೂಡಾ ಹಗರಣದ ‘ಅಸಲಿ ಕೈ’ ಯಾವುದು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದ ಮೇಲೆ ಸತ್ಯವನ್ನು ಹೆಕ್ಕಿ ತೆಗೆದ RTI ಕಾರ್ಯಕರ್ತರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ ರಾಜ್ಯ ಕಾಂಗ್ರೆಸ್ ಪಕ್ಷ ಎಂದು ಎಂದು ಅವರು ದೂರಿದ್ದಾರೆ.

ದೂರು ನೀಡಿರುವ ಪ್ರಸಂಗ ಹೇಗಿದೆ ಎಂದರೆ; ಬದಲಿ ನಿವೇಶನ ಫಲಾನುಭವಿಗಳು ಪರೋಕ್ಷವಾಗಿ ಸತ್ಯ ಒಪ್ಪಿಕೊಂಡಂತೆ ಆಗಿದೆ. ಅಷ್ಟೇ ಅಲ್ಲ; RTI ಕಾರ್ಯಕರ್ತರ ಟಾರ್ಗೆಟ್ ಮಾಡಿದಷ್ಟು ಮೂಡಾದ ಮೂಲೆಮೂಲೆಗಳಲ್ಲಿ ಮುಗ್ಗುತ್ತಿರುವ ಸತ್ಯಗಳು ಮತ್ತಷ್ಟು ವ್ಯಘ್ರವಾಗಿ ಹೂಂಕರಿಸುತ್ತವೆ. ಇಂಥ ವ್ಯರ್ಥ ಕೆಲಸ ಬಿಟ್ಟು ಮರ್ಯಾದೆಯಿಂದ ಸತ್ಯವನ್ನು ಎದುರಿಸುವುದು ಸಿಎಂ ಆದವರಿಗೆ ಶೋಭೆ ತರುತ್ತದೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.