ಸಿಎಂ ಆಪ್ತರ ಒಳ ಜಗಳದಿಂದಲೇ ಬಯಲಾಯ್ತಾ ಮುಡಾ ಹಗರಣ? ಮುಡಾ ಅಧ್ಯಕ್ಷರ ಹೇಳಿಕೆಗಳು ಹುಟ್ಟುಹಾಕಿದ ಪ್ರಶ್ನೆಗಳಿವು
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎಂದಲಾದ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತಷ್ಟು ಅನುಮಾನಗಳು ಸೃಷ್ಟಿಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಿಂದಾಗಿಯೇ ಈ ಹಗರಣ ಬೆಳಕಿಗೆ ಬಂತೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವೂ ಇದೆ. ಏನು ಆ ಕಾರಣ? ಅನುಮಾನಗಳೇನು ಎಂಬುದನ್ನು ತಿಳಿಯಲು ಮುಂದೆ ಓದಿ.
ಮೈಸೂರು, ಜುಲೈ 9: ಸಿಎಂ ಆಪ್ತರ ಒಳ ಜಗಳದಿಂದಲೇ ಮುಡಾ ಹಗರಣ ಬಯಲಿಗೆ ಬಂತಾ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಮುಡಾ ಅಧ್ಯಕ್ಷ ಮರಿಗೌಡರ ಸುದ್ದಿಗೋಷ್ಠಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸಿಎಂ ಕುಟುಂಬದ ವಿರುದ್ಧ ಆರೋಪ ಹೊರತುಪಡಿಸಿ ಇತರ ಯಾವುದೇ ಪ್ರಶ್ನೆಗಳಿಗೂ ಮುಡಾ ಅಧ್ಯಕ್ಷ ಉತ್ತರ ನೀಡಿಲ್ಲ. ಎಲ್ಲಾ ಪ್ರಶ್ನೆಗಳಿಗೂ ತನಿಖೆ ನಡೆಯುತ್ತಿದೆ ಎಂದಷ್ಟೇ ಉತ್ತರ ನೀಡಿದ್ದಾರೆ.
ಆದರೆ, ಸಿಎಂ ಮತ್ತೊಬ್ಬ ಆಪ್ತ ಹಿನಕಲ್ ಪಾಪಣ್ಣ ವಿಚಾರ ಕೇಳುತ್ತಿದ್ದಂತೆಯೇ, ‘ಆ ಸೈಟ್ ತಡೆ ಹಿಡಿದಿದ್ದೇವೆ’ ಎಂದು ಉತ್ತರಿಸಿದ್ದಾರೆ. ತನಿಖೆ ಹಂತದಲ್ಲಿ ಇರುವ ವೇಳೆ ಹಂಚಿಕೆಯಾಗಿರುವ ಸೈಟನ್ನು ಮುಡಾ ಅಧ್ಯಕ್ಷರು ತಡೆ ಹಿಡಿಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಅಲ್ಲದೆ, ಹಲವು ಅನುಮಾನಗಳಿಗೂ ಕಾರಣವಾಗಿದೆ.
ಪಾಪಣ್ಣ ಸುಮಾರು 20 ಸೈಟ್ಗಳನ್ನು ಬದಲಿಯಾಗಿ ಪಡೆದಿದ್ದರು. ಕೋರ್ಟ್ ಆದೇಶದ ಮೂಲಕ ನಿವೇಶನ ಪಡಿದಿದ್ದರು ಎನ್ನಲಾಗಿತ್ತು. ಪಾಪಣ್ಣ ಹಾಗೂ ಅವರ ಪುತ್ರ ರಾಕೇಶ್ ಸಿಎಂರ ಪರಮಾಪ್ತರಾಗಿದ್ದಾರೆ. ಇದೀಗ ಅವರ ಬದಲಿ ನಿವೇಶನ ವಿಚಾರದ ಪ್ರಶ್ನೆಗೆ ತಡೆ ಎಂಬ ಉತ್ತರ ಬಂದಿರುವುದು ಅನುಮಾನ ಹೆಚ್ಚಿಸಿದೆ. ಅವರ ಸೈಟ್ ವಿಚಾರವನ್ನು ಹೊರ ತೆಗೆಯಲು ಹೋಗಿ ಇಡೀ ಮುಡಾ ಹಗರಣ ಹೊರಬಂತಾ ಎಂಬ ಪ್ರಶ್ನೆ ಮೂಡಿದೆ. ಸಿಎಂ ಅವರ ಆಪ್ತರ ಜಗಳದಿಂದಲೇ ಎಲ್ಲವು ಬಯಲು ಎನ್ನಲಾಗುತ್ತಿದೆ.
ಏನು ಹೇಳಿದ್ದರು ಮುಡಾ ಅಧ್ಯಕ್ಷ ಮರಿಗೌಡ?
ಮೈಸೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದ ಮುಡಾ ಅಧ್ಯಕ್ಷ ಮರಿಗೌಡ, ಸಿಎಂ ಕುಟುಂಬದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಮಾತ್ರ ಉತ್ತರ ನೀಡಿದ್ದರು. ಅಲ್ಲದೆ, ಈ ವಿಚಾರದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ಗೆ ತಿರುಗೇಟು ನೀಡಿದ್ದರು.
ಇದನ್ನೂ ಓದಿ: 75 ಸಾವಿರ ಬದಲಿಗೆ 38 ಸಾವಿರ ಚ. ಅಡಿ ಜಾಗಕ್ಕೆ ಒಪ್ಪಿಕೊಂಡಿದ್ದಾರೆ: ಸಿಎಂ ಪರ ಮುಡಾ ಅಧ್ಯಕ್ಷ ಬ್ಯಾಟಿಂಗ್
ನಂತರ, ರಾಕೇಶ್, ಪಾಪಣ್ಣಗೆ ನೀಡಲಾಗಿದ್ದ ನಿವೇಶನ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ. ಈ ಮೊದಲು ಕೋರ್ಟ್ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ, ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿದೆ, ಈಗ ತಡೆ ಹಿಡಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ