75 ಸಾವಿರ ಬದಲಿಗೆ 38 ಸಾವಿರ ಚ. ಅಡಿ ಜಾಗಕ್ಕೆ ಒಪ್ಪಿಕೊಂಡಿದ್ದಾರೆ: ಸಿಎಂ ಪರ ಮುಡಾ ಅಧ್ಯಕ್ಷ ಬ್ಯಾಟಿಂಗ್
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬಗೆದಷ್ಟು ಅಕ್ರಮ ಹೊರ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಮಾತ್ರವಲ್ಲ ಬೇರೆ-ಬೇರೆ ರಾಜಕೀಯ ನಾಯಕರಿಗೂ ಸಹ ಮುಡಾ ಸೈಟ್ ಹಂಚಿಕೆಯಾಗಿದೆ ಎನ್ನುವುದು ತಿಳಿದುಬಂದಿದೆ. ಇನ್ನು ಈ ಹಗರಣ ಸಂಬಂಧ ಮುಡಾ ಅಧ್ಯಕ್ಷ ಮರಿಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಪತ್ನಿಗೆ ಸೈಟ್ ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪತ್ನಿ ಸಹ ಮುಡಾ ಸೈಟ್ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಬಿಚ್ಚಿಟ್ಟಿದ್ದಾರೆ .
ಮೈಸೂರು, (ಜುಲೈ 08): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇನ್ನು ಈ ಅಕ್ರಮದ ಸಂಬಂಧ ಮುಡಾ ಅಧ್ಯಕ್ಷ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣದಲ್ಲಿ ಸಿಎಂ ಮತ್ತು ಅವರ ಕುಟುಂಬ ಕಾನೂನಾತ್ಮಕವಾಗಿ ಇದೆ. ಸಿಎಂ ಕುಟುಂಬಕ್ಕೆ 75 ಸಾವಿರ ಚದರ ಅಡಿ ಜಾಗ ಕೊಡಬೇಕಿತ್ತು. ಆದ್ರೆ, 38 ಸಾವಿರ ಚದರ ಅಡಿ ಜಾಗಕ್ಕೆ ನಮ್ಮ ನಾಯಕರು ತೃಪ್ತಿ ಪಟ್ಟಿದ್ದಾರೆ. ಅಂತಹವರ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮರಿಗೌಡ, ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ಗೆ ತಿರುಗೇಟು ನೀಡಿದ್ದಾರೆ. ಆರೋಪ ಮಾಡುವ ವಿಶ್ವನಾಥ್ ಕೂಡ ಬದಲಿ ನಿವೇಶನ ಪಡೆದಿದ್ದಾರೆ. ಅವರ ಪತ್ನಿ ಶಾಂತಮ್ಮ ಹೆಸರಲ್ಲಿ ನಿವೇಶನ ಪಡೆದಿದ್ದಾರೆ. ನಿವೆಶನ ಸಂಖ್ಯೆ 2,525ರ ಬದಲಾಗಿ ಹೈವೆ ಬಳಿ ಬರುವ ನಿವೇಶನ ಸಂಖ್ಯೆ 307ಕ್ಕೆ ಬದಲಾಯಿಸಿಕೊಂಡಿದ್ದಾರೆ. ಅಂತಹವರು ಸಿಎಂ ಬಗ್ಗೆ ಮಾತನಾಡುವಾಗ ಸರಿಯಾಗಿ ಮಾತಾಡಬೇಕು ಎಂದು ವಿಶ್ವನಾಥ್ಗೆ ತಿರುಗೇಟು ನಿಡಿದರು.
ಇದನ್ನೂ ಓದಿ: ಮುಡಾದ ಪ್ರತಿ ಸಭೆಯಲ್ಲೂ ಶಾಸಕರ ಫೈಲ್ಗಳೇ ಇರುತ್ತಿದ್ದವು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ MLA
ಸಿಎಂ ಆಪ್ತನಿಗೆ ಹಂಚಿಕೆಯಾಗಿದ್ದ ಮುಡಾ ಸೈಟ್‌ಗೂ ತಡೆ
ಸಿಎಂ ಆಪ್ತ ರಾಕೇಶ್ ಪಾಪಣ್ಣಗೆ ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಮರಿಗೌಡ, ರಾಕೇಶ್ ಪಾಪಣ್ಣ ಅವರಿಗೆ ನೀಡಲಾಗಿದ್ದ ನಿವೇಶನ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ. ಈ ಮೊದಲು ಕೋರ್ಟ್ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದ್ರೆ, ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿದೆ, ಈಗ ತಡೆ ಹಿಡಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹಿನ್‌ಕಲ್ ಸರ್ವೆ ನಂ.211ರಲ್ಲಿ 3.05 ಗುಂಟೆ ಜಮೀನು ಸಂಬಂಧಿಸಿದ ಪ್ರಕರಣದಲ್ಲಿ 1981ರಲ್ಲಿ ಸ್ವಾದೀನ ಪಡೆದು, 1984ರಲ್ಲಿ ಕೈ ಬಿಡಲಾಗಿತ್ತು. ಅದಕ್ಕೆ 2024ರ ಜೂನ್ 12 ರಂದು ಪರಿಹಾರ ಕೊಡಲಾಗಿತ್ತು. 36,753 ಚದರ ಅಡಿ ಪರಿಹಾರ ಕೊಡಲಾಗಿತ್ತು. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ 20 ನಿವೇಶನ ಕೊಟ್ಟು ಆದೇಶ ಮಾಡಲಾಗಿತ್ತು. ಈಗ ಆ ದೇಶಕ್ಕೂ ತಡೆ ಬಿದ್ದಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ