ಮುಡಾದ ಪ್ರತಿ ಸಭೆಯಲ್ಲೂ ಶಾಸಕರ ಫೈಲ್ಗಳೇ ಇರುತ್ತಿದ್ದವು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ MLA
ಮುಡಾ ಹಗರಣದ ಕೇಂದ್ರ ಬಿಂದುವಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರಿಗೆ ಸೇರಿದ್ದು ಎನ್ನಲಾದ ಜಾಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಜಮೀನನ್ನ ವಶಪಡಿಸಿಕೊಂಡು ಮುಡಾದವರು ಸೈಟ್ ಮಾಡಿದ್ರು. ಹೀಗಾಗಿ ಪರಿಹಾರವಾಗಿ ವಿಜಯನಗರದಲ್ಲಿ ಸೈಟ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ, ಸಿಎಂ ಪತ್ನಿ ಪಾರ್ವತಿ ಅವ್ರಿಗೆ ಸೇರಿದ್ದ ಕೆಸರೆ ಗ್ರಾಮದ ಜಮೀನನ್ನ ನಕಲಿ ದಾಖಲೆ ಸೃಷ್ಟಿಸಿ, ಅವರ ಸಹೋದರ ಖರೀದಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯ ಈ ಬಗ್ಗೆ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಸ್ಫೋಟಲ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ.
ಮೈಸೂರು, (ಜುಲೈ 07): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ಹಗರಣ ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಸಂಬಂಧ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇನ್ನು ಮುಡಾದಲ್ಲಿ ನಿವೇಶನ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ಸಿ ಮಹಾದೇವಪ್ಪ ಹೇಳಿದ್ದಾರೆ. ಇನ್ನು ಈ ಮುಡಾ ಹಗರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್, ಮುಡಾದ ಪ್ರತಿ ಮೀಟಿಂಗ್ ನಲ್ಲಿ ಶಾಸಕರ ಫೈಲ್ ಗಳೇ ಇರುತ್ತಿದ್ದವು ಎಂದು ಸ್ಫೊಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಟಿ ಸೋಮಶೇಖರ್, ಮುಡಾದ ಪ್ರತಿ ಮೀಟಿಂಗ್ ನಲ್ಲಿ ಶಾಸಕರ ಫೈಲ್ ಗಳೇ ಇರುತ್ತಿದ್ದವು. ಆದ್ರೆ, ಶಾಸಕರ ಹೆಸರಿನ ಫೈಲ್ ಗಳು ಚರ್ಚೆಯಾಗದೆ ಪಾಸ್ ಆಗುತ್ತಿದ್ದವು. ಮುಡಾ ಸಭೆಯ ಬಹುತೇಕ ಸಬ್ಜೆಕ್ಟ್ ಗಳು ಶಾಸಕರಿಗಳಿಗೆ ಸೇರಿದ್ದವು. ಇಲ್ಲಿ ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನ ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರಗಳು ಲಾಭಿ ಮಾಡುತ್ತಾರೆ. ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ ಆದರೆ ಇಲ್ಲಿ ಆಗುತ್ತಿರುವುದು ಏನು ? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುಡಾ ಅಕ್ರಮ: ಬದಲಿ ಭೂಮಿ ಪಡೆದವರ ಪಟ್ಟಿ ಜಾಹಿರಾತು ಮೂಲಕ ಬಿಡುಗಡೆ; ಮಹದೇವಪ್ಪ
ನಾನು ಉಸ್ತುವಾರಿ ಸಚಿವರಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೆ ಸೈಟ್ ಗಳನ್ನ ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಗೆ ಚರ್ಚೆಗೆ ತಂದು ಕೊಡಬೇಕು. ಇದ್ಯಾವಾ ರೂಲ್ಸ್ ಗಳನ್ನು ಅಂದಿನ ಆಯುಕ್ತರು ಫಾಲೋ ಮಾಡಲಿಲ್ಲ. ಹೀಗಾಗಿ ಅಂದಿನ ಆಯುಕ್ತರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಹೇಳಿದ್ದೆ. ಆದರೆ ಜಾತಿಯ ಪ್ರಭಾವದಿಂದ ಅವರ ಉಳಿಯುವ ರೀತಿ ಆಯಿತು. ಅವತ್ತೇ ಸರಿಯಾದ ಕ್ರಮ ಆಗಿದ್ದರೇ ಇವತ್ತು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿವೇನೋ. ಈಗಲಾದರೂ ಈ ಬಗ್ಗೆ ತನಿಖೆಯಾಗಿ ವ್ಯವಸ್ಥೆ ಬದಲಾಗಲಿ ಎಂದು ಹೇಳಿದರು.
ಎಸ್ಟಿ ಸೋಮಶೇಖರ್ ರಾಜೀನಾಮೆ ರಾಜೀನಾಮೆ ಸವಾಲ್
ಇನ್ನು ಇದೇ ವೇಳೆ ತಮ್ಮ ಹೆಸರಿನ ಮೇಲೆ ಮುಡಾದಲ್ಲಿ ಒಂದೇ ಒಂದು ಸೈಟ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮಶೇಖರ್ ಸವಾಲು ಹಾಕಿದ್ದಾರೆ. ನನ್ನ ಹೆಸರಿನಲ್ಲಿ ಅಥವಾ ನನ್ನ ಬೇನಾಮಿ ಹೆಸರಿನಲ್ಲಿ ಮುಡಾ ಒಂದೇ ಒಂದು ನಿವೇಶನ ಇದ್ದರೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಸ್ಪಷ್ಟಪಡಿಸಿದರು.
ಇನ್ನು ಎಸ್ಟಿ ಸೋಮಶೇಖರ್ ಅವರ ಈ ಮಾತುಗಳನ್ನು ಗಮನಿಸಿದರೆ ಈ ಮುಡಾ ಹಗರಣ ಈ ಹಿಂದಿನ ಬಿಜೆಪಿ ಸರ್ಕಾರದಲ್ಲೂ ಆಗಿತ್ತಾ ಎನ್ನುವ ಅನುಮಾನ ಮೂಡಿಸುತ್ತಿದೆ. ಅಲ್ಲದೇ ಈ ಮುಡಾದಲ್ಲಿ ಹಲವರು ರಾಜಕೀಯ ನಾಯಕರು ಅಕ್ರಮವಾಗಿ ಸೈಟ್ ಪಡೆದುಕೊಂಡಂತಿದ್ದು, ಇದು ಮುಂದೆ ಯಾವ ರೀತಿ ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Sun, 7 July 24