ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ
ಕೋಲಾರದಲ್ಲಿ ಕಲಬೆರಕೆ ಹಾಲಿನ ಕುರಿತು ಜಿಲ್ಲಾಡಳಿತ ನಡೆಸಿದ ದಾಳಿಯಲ್ಲಿ ಆಘಾತಕಾರಿ ಸತ್ಯಾಂಶ ಬಯಲಾಗಿದೆ. ಪ್ರಯೋಗಾಲಯ ವರದಿಯಂತೆ, 48 ಮಾದರಿಗಳಲ್ಲಿ 18 ಹಾಲು ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ್ದಾಗಿವೆ. ಹಾಲಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿದೆ. FSSAI ಕಾಯ್ದೆ ಅಡಿಯಲ್ಲಿ ಖಾಸಗಿ ಡೈರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕೋಲಾರ, ಮಾರ್ಚ್ 27: ಕಲಬೆರಕೆ ಹಾಲಿನ (Fake Milk Production) ವಿರುದ್ಧ ಸಮರ ಸಾರಿದ್ದ ಜಿಲ್ಲಾಡಳಿತ ಹಲವು ಹಳ್ಳಿಗಳಲ್ಲಿ ದಾಳಿ ನಡೆಸಿ ಹಾಲು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, 18 ಕಡೆ ಸಂಗ್ರಹಿಸಿದ್ದ ಹಾಲು ಕಲಬೆರಕೆ ಎನ್ನುವ ಆಘಾತಕಾರಿ ವರದಿ ಬಹಿರಂಗವಾಗಿದೆ. ಸದ್ಯ ಈ ವಿಚಾರ ಕೋಲಾರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಕ್ಷೀರಕಾಂತ್ರಿ ಮೂಲಕ ಬಯಲು ಸೀಮೆಯಲ್ಲಿ ಹಾಲಿನ ಹೊಳೆ ಹರಿಸಿದ ಕೀರ್ತಿ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಲ್ಲುತ್ತದೆ. ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಹೈನೋದ್ಯಮವನ್ನಾಗಿ ಪರಿವರ್ತಿಸುವ ಮೂಲಕ ಜಿಲ್ಲೆಯಲ್ಲಿ ಹಾಲು ಉದ್ಯಮವನ್ನಾಗಿ ಮಾಡಿದ ಕೀರ್ತಿ ಸಹ ಕೋಲಾರ ಜಿಲ್ಲೆಯ ಗೋಪಾಲಕರಿಗೆ ಸಲ್ಲುತ್ತದೆ. ಇಂಥ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಹಾಲಿಗೆ ವಿಷ ಬೆರೆಸುವ ಕಲಬೆರಕೆ ಪ್ರಕರಣಗಳು ಕೇಳಿ ಬಂದ ಹಿನ್ನೆಲೆ ಫೆಬ್ರವರಿ 5 ರಂದು ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲಿನ ವಿರುದ್ದ ಸಮರ ಸಾರಿತ್ತು.
ಇದನ್ನೂ ಓದಿ: ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಜಿಲ್ಲೆಯಲ್ಲಿ ಕಲಬೆರಕೆ ಹಾಲು ತಯಾರು ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಸುಮಾರು 48 ಕಡೆಗಳಲ್ಲಿ ಕಲಬೆರಕೆ ಹಾಲಿನ ಮಾದರಿಯನ್ನು ಸಂಗ್ರಹಿಸಿದ್ದರು. ಹೀಗೆ ಸಂಗ್ರಹಿಸಿದ್ದ ಹಾಲಿನ ಮಾದರಿಗಳನ್ನು ಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮಕ್ಕಳು, ವೃದ್ದರು, ಮಹಿಳೆಯರು, ರೋಗಿಗಳು ಹೀಗೆ ಎಲ್ಲರೂ ಕುಡಿಯುವ ಹಾಲಿನಲ್ಲಿ ಕಲಬೆರಕೆ ವಿಷಕಾರಿ ಅಂಶ ಇರುವುದು ಖಚಿವಾಗಿದೆ. 48 ಹಾಲಿನ ಮಾದರಿಗಳ ಪೈಕಿ ಸುಮಾರು 18 ಮಾದರಿಗಳು ಕಳಪೆ ಹಾಗೂ ಕಲಬೆರಕೆ ಹಾಲು ಅನ್ನೋದು ತಿಳಿದು ಬಂದಿದೆ.
ಪ್ರಕರಣ ದಾಖಲು
ಸದ್ಯ ಈ ನಿಟ್ಟಿನಲ್ಲಿ ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲು ತಯಾರು ಮಾಡುತ್ತಿದ್ದ, ಹಾಲು ಸಂಗ್ರಹ ಕೇಂದ್ರಗಳ ಮೇಲೆ FSSAI act 51 ಅಡಿಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದೆ. ಅಲ್ಲದೆ ಅನುಮತಿ ಪಡೆಯದ ಖಾಸಗಿ ಹಾಲು ಸಂಗ್ರಹ ಕೇಂದ್ರಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ.
ಇನ್ನು ಕೋಲಾರ ಜಿಲ್ಲೆಯ ಗಡಿಗೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಹೊಂದಿಕೊಂಡಿವೆ. ಈ ಕಾರಣದಿಂದ ಆಂಧ್ರ ಮತ್ತು ತಮಿಳುನಾಡಿನ ಖಾಸಗಿ ಡೈರಿಗಳಾದ ಕಾಂತರಾಜ ಸರ್ಕಲ್ನಲ್ಲಿರುವ ತಿರುಮಲ ಡೈರಿ, ಲಿಂಗಾಪುರದ ಸಂತೃಷ್ಠಿ ಡೈರಿ, ತಲಗುಂದ ಕ್ರಾಸ್ನಲ್ಲಿನ ಹಟ್ ಸನ್ ಡೈರಿ, ಪೀಲವಾರ ಗ್ರಾಮದ ಬಳಿಯ ದೊಡ್ಲ ಡೈರಿ, ತಿಮ್ಮರಾವುತ್ತನಹಳ್ಳಿ ಗ್ರಾಮದ ಬಳಿಯ ಅಮುಲ್ ಡೈರಿ, ಕೊಂಡಿಹಳ್ಳಿ ಬಳಿಯ ಶ್ರೀಜ ಡೈರಿ, ಗುಮ್ಮಕಲ್ ಗ್ರಾಮದ ಪರಾಗ್ ಮಿಲ್ಕ್ ಡೈರಿಗಳಲ್ಲಿ ಸಂಗ್ರಹಿಸಿದ್ದ ಹಾಲಿನಲ್ಲಿ ಕಲಬೆರಕೆ ಹಾಗೂ ಕಳಪೆ ಗುಣಮಟ್ಟ ಇರುವುದು ಕಂಡು ಬಂದಿದೆ.
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಿಷ್ಟು
ಸದ್ಯ ಈ ಎಲ್ಲಾ ಖಾಸಗಿ ಡೈರಿಗಳ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ ಜಿಲ್ಲೆಯ ಸುಮಾರು 29 ಶುದ್ಧ ಕುಡಿಯುವ ನೀರಿನ ಘಟಕಗಳು ಕೂಡ ಅಕ್ರಮವಾಗಿದ್ದು, ಅವುಗಳನ್ನು ಅಮಾನತಿನಲ್ಲಿಡಲು ಜಿಲ್ಲಾಡಳಿತ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇನ್ನು ಈ ಸಂಬಂಧ ಕೋಲಾರ ಹಾಲು ಒಕ್ಕೂಟ ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸಿದ್ದು ಇನ್ನು ಮುಂದೆ ಕೋಲಾರ ಹಾಲು ಒಕ್ಕೂಟದಿಂದಲೂ ಪ್ರತ್ಯೇಕ ತಂಡ ಮಾಡಿ ಕಲಬೆರಕೆ ಹಾಲು ಪತ್ತೆ ಹಚ್ಚಲು ನಿರ್ಧಾರ ಮಾಡಲಾಗಿದೆ ಎನ್ನುವುದು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡರ ಮಾತು.
ಇದನ್ನೂ ಓದಿ: ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ
ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ನೀರು ಇಲ್ಲದಿದ್ದರೂ ಸಹ ಹಾಲಿನ ಹೊಳೆ ಹರಿಯುತ್ತಿತ್ತು. ಸದ್ಯ ಹಾಲಿನಲ್ಲೂ ಕಲಬೆರೆಕೆ ಮಾಡಿ ಜಿಲ್ಲೆಯ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಲು ಮುಂದಾಗಿದ್ದ ಕಲಬೆರೆಕೆ ಹಾಲು ತಯಾರಿಕಾ ಅಡ್ಡೆಗಳ ಹೆಡಮುರಿ ಕಟ್ಟಿದ್ದು ಮುಂದೆ ಅವುಗಳನ್ನು ಶಾಶ್ವತವಾಗಿ ಜಿಲ್ಲೆಯಿಂದ ಹೊರಹಾಕುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
