ಕೋಲಾರ: ಸುಮಾರು ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ, ಬಡವರ ಪರವಾದ ಶಾಲೆ ಎಂಬ ಹೆಸರು ಪಡೆದಿತ್ತು, ಆದರೆ ಈಗ ಅದೇ ಶಿಕ್ಷಣ ಸಂಸ್ಥೆ ಸರ್ಕಾರಿ ಆಸ್ತಿ ಕಬಳಿಸಲು ತಾನು ಮಾಡಿದ ವಂಚನೆ ಪ್ರಕರಣದಿಂದ ಸದ್ದು ಮಾಡುತ್ತಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಗರಸಭೆಯ ಆಸ್ತಿಯನ್ನು ಬಾಡಿಗೆಗೆ ಪಡೆದು ಶಿಕ್ಷಣ ಸಂಸ್ಥೆ ನಡೆಸುತ್ತಿತ್ತು. ಇವಾಗ ಇದೇ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಶಾಲೆಯ ಆಡಳಿತ ಮಂಡಳಿ ಆಸ್ತಿಯನ್ನು ನಕಲಿ ದಾಖಲೆಗಳನ್ನಾಗಿ ಸೃಷ್ಟಿಸಿ ಸರ್ಕಾರಿ ಆಸ್ತಿಯನ್ನು ಲಪಟಾಯಿಸಲು ಮಾಡಿದ ಪ್ಲಾನ್ ಮಾಡಿತ್ತು.
ಸದ್ಯ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಲಪಟಾಯಿಸಲು ಪ್ಲಾನ್ ಮಾಡಿದ ಆರೋಪದಡಿಯಲ್ಲಿ ಸದ್ಯ ಮಹಿಳಾ ಸಮಾಜ ಸಂಸ್ಥೆಯ ಶಾಲೆಯ ಅಧ್ಯಕ್ಷೆ ನವೀನ ಹಾಗೂ ಕಾರ್ಯದರ್ಶಿ ನಂದನರೆಡ್ಡಿ ಮತ್ತು ಇವರಿಗೆ ಸಹಾಯ ಮಾಡಿದ ಕೋಲಾರದ ಸಬ್ರಿಜಿಸ್ಟಾರ್ ಅಧಿಕಾರಿ ಪ್ರಸಾದ್ ಅವರ ಮೇಲೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು ಮಾಡಿದೆ. ಸದ್ಯ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು ಎಲ್ಲರಿಗೂ ಬಂಧನದ ಭೀತಿ ಎದುರಾಗಿದೆ.
ಅಷ್ಟಕ್ಕೂ ಈ ಪ್ರಕರಣದ ಹಿನ್ನೆಲೆ ಏನು ಎಂದು ನೋಡುವುದಾದರೆ, 1960 ರಲ್ಲಿ ಕೋಲಾರ ನಗರಸಭೆ ಮಹಿಳಾ ಸಮಾಜ ಶಾಲೆಗೆಂದು ನಗರದ ಹೃದಯ ಭಾಗದಲ್ಲಿ 60/80 ಅಡಿ ವಿಸ್ತೀರ್ಣದ ನಿವೇಶನವನ್ನು ಐವತ್ತು ವರ್ಷಗಳ ಅವಧಿಗೆ ಬಾಡಿಗೆ ನೀಡಲಾಗಿತ್ತು. ಬಾಡಿಗೆ ಅವಧಿ 2010 ರಲ್ಲಿ ಮುಕ್ತಾಯಗೊಂಡ ನಂತರ 2015 ರಲ್ಲಿ ಮತ್ತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಿದ ತೀರ್ಮಾನದಂತೆ ಮತ್ತೆ 12 ವರ್ಷದ ಅವಧಿಗೆ ಗುತ್ತಿಗೆ ನವೀಕರಿಸಿ 100 ರೂಪಾಯಿ ಛಾಪಾ ಕಾಗದದಲ್ಲಿ ಬರೆದು ಕೊಡಲಾಗಿತ್ತು, ಆದರೆ ಸಾಮಾನ್ಯ ಸಭೆಯಲ್ಲಿ ಮಾಡಿದ ತೀರ್ಮಾನಕ್ಕೆ ಸರ್ಕಾರದಿಂದಾಗಲಿ, ಜಿಲ್ಲಾಧಿಕಾರಿಯಿಂದಾಗಲಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಇದು ಅಕ್ರಮ ಎಂದು ಪ್ರಶ್ನಿಸಿ ನಗರಸಭೆ ಸದಸ್ಯ ಮುರಳಿಗೌಡ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಜಿಲ್ಲಾಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನದ ಆದೇಶ ರದ್ದು ಪಡಿಸಿದ್ದರು, ಆದರೆ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಮಹಿಳಾ ಸಮಾಜ ಸಂಸ್ಥೆ ಹೈಕೋರ್ಟ್ ಮೊರೆ ಹೋದರು, ಆದರೆ ಹೈಕೋರ್ಟ್ನಲ್ಲಿ 8 ವಾರಗಳ ಗಡುವು ನೀಡಲಾಗಿತ್ತು, ಆ ನಂತರದಲ್ಲಿ ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಆ ಪ್ರಕರಣ ನೆನೆಗುದಿಗೆ ಬಿದ್ದಿತ್ತು, ಇತ್ತೀಚೆಗೆ ನಗರಸಭೆ ಸದಸ್ಯ ಪ್ರವೀಣ್ಗೌಡ ಇದೇ ಪ್ರಕರಣವನ್ನು ಕೋರ್ಟ್ನಲ್ಲಿ ಮತ್ತೆ ಪ್ರಶ್ನಿಸಿ ಹೊರಟಾಗ ಮಹಿಳಾ ಸಮಾಜ ಸಂಸ್ಥೆಯವರು ಏಕಾಏಕಿ ಹೈಕೋರ್ಟ್ಗೆ 1962 ರಲ್ಲಿ ನಗರಸಭೆಯಿಂದ ಮಹಿಳಾ ಸಮಾಜ ಸಂಸ್ಥೆಗೆ ವರ್ಗಾವಣೆ ಮಾಡಿಕೊಟ್ಟಿರುವ ದಾಖಲೆ ಸಲ್ಲಿಸಿರುತ್ತಾರೆ, ಆ ದಾಖಲೆಯು ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಿದಾಗ ಅದು ಮೇಲ್ನೋಟಕ್ಕೆ ನಕಲಿ ದಾಖಲೆ ಎನ್ನುವುದು ತಿಳಿದು ಬಂದಿದೆ.
ಈ ಹಿನ್ನೆಲೆ ನಗರಸಭೆ ಸದಸ್ಯ ಪ್ರವೀಣ್ ಗೌಡ ಅವರು ಪೊಲೀಸರಿಗೆ ಹಾಗೂ ಸೆಷನ್ ಕೋರ್ಟ್ನಲ್ಲಿ ದೂರು ಸಲ್ಲಿಸಿದ ಪರಿಣಾಮ ಕೋರ್ಟ್ ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಈ ಸಂಬಂಧ ಮಹಿಳಾ ಸಮಾಜ ಸಂಸ್ಥೆಯ ಅಧ್ಯಕ್ಷೆ ನವೀನ, ಕಾರ್ಯದರ್ಶಿ ನಂದನರೆಡ್ಡಿ ಮತ್ತು ಸಬ್ರಿಜಿಸ್ಟಾರ್ ಅಧಿಕಾರಿ ಪ್ರಸಾದ್ ಕುಮಾರ್ ಅವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಸದ್ಯ ದೂರುದಾರರು ಕೋಟ್ಯಾಂತರ ರೂಪಾಯಿ ಸರ್ಕಾರಿ ಆಸ್ತಿಯನ್ನು ಸಾರ್ವಜನಿಕರಿಗೆ ಉಳಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಶಿಕ್ಷಣ ಸಂಸ್ಥೆ ಹೆಸರಲ್ಲಿ ಹಣ ಮಾಡಲು ಹೊರಟಿರುವ ಶಿಕ್ಷಣ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ಸರ್ಕಾರಿ ಆಸ್ತಿಪಾಸ್ತಿ ಕಬಳಿಸಲು ಈಗ ತಮ್ಮ ನೈತಿಕತೆಯನ್ನೇ ಅಡಕ್ಕಿಟ್ಟಿದ್ದು, ಈ ಸಂಸ್ಥೆಗಳಲ್ಲಿ ಶಿಕ್ಷಣ ಕಲಿಯುವ ಮಕ್ಕಳ ಪರಿಸ್ಥಿತಿ ಏನು ಎನ್ನುವುದು ಸದ್ಯ ಪೋಷಕರು ಮತ್ತು ಸಾರ್ವಜನಿಕರ ಪ್ರಶ್ನೆಯಾಗಿದೆ..
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ