ಕೋಲಾರದಲ್ಲಿ ಬೆಳಿಗ್ಗೆ ಟೀ, ಕಾಫಿಗೂ ಮೊದಲೇ ಸಿಗುತ್ತೆ ಎಣ್ಣೆ: ಕೆಡಿಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ
ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ನಡೆದ ಎರಡನೇ ಪ್ರಗತಿ ಪರಿಶೀಲನಾ ಸಭೆ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಸರಣಿ ಕೊಲೆಗಳು ಮತ್ತು ಅಕ್ರಮ ಮದ್ಯ ಹಾಗೂ ಡ್ರಗ್ಸ್ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಕೋಲಾರ ನ.17: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 40 ಕೊಲೆಗಳಾಗಿದ್ದು, ಚಿನ್ನದ ನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ. ಈ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ (Byrathi Suresh) ಅಧ್ಯಕ್ಷತೆಯಲ್ಲಿ ಗುರುವಾರ (ನ.17) ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ (KDP) ಸಾಕಷ್ಟು ಚರ್ಚೆಯಾಯಿತು. ಎರಡನೇ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ ಸಚಿವರು ಹಾಗೂ ಶಾಸಕರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಸರಣಿ ಕೊಲೆಗಳು ಮತ್ತು ಅಕ್ರಮ ಮದ್ಯ ಹಾಗೂ ಡ್ರಗ್ಸ್ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕೊಲೆಗಳಷ್ಟೇ ಅಲ್ಲದೆ, ಕೋಲಾರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ಮಾರಾಟ, ಅಕ್ರಮ ಜೂಜು ಅಡ್ಡೆಗಳು, ಮೆಡಿಕಲ್ ಶಾಪ್ಗಳಲ್ಲಿ ಅಕ್ರಮ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಈ ಕುರಿತು ಸಭೆಯಲ್ಲಿ ಅಧಿಕಾರಿ ವಿರುದ್ಧ ಸಚಿವ ಬೈರತಿ ಸುರೇಶ್ ಹಾಗೂ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಕೆಂಡಾಮಂಡಲರಾದರು. ಡ್ರಗ್ ಕಂಟ್ರೋಲರ್ ಶ್ಯಾಮಲಾ ಅವರನ್ನು ಅಮಾನತು ಮಾಡುವಂತೆಯೇ ಅಧಿಕಾರಿಗಳಿಗೆ ಸೂಚನೆ ನೀಡದರು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಎಎಸ್ಐ ಅಮಾನತು
ಅಬಕಾರಿ ಇಲಾಖೆ ಅಧಿಕಾರಿಗಳನ್ನು ಕೂಡಾ ತರಾಟೆಗೆ ತೆಗೆದುಕೊಂಡ ಸಚಿವ ಸುರೇಶ್ ಮತ್ತು ಕೋಲಾರ ಶಾಸಕ ಕೊತ್ತೂರು ಮಂಜುನಾಥ್, “ಎಲ್ಲಂದರಲ್ಲಿ ಮದ್ಯ ಸಿಗುತ್ತಿದೆ, ಗಾಂಜಾ ಮಾರಾಟದ ಬಗ್ಗೆ ನೀವು ದಾಳಿ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಇನ್ನು ಪೊಲೀಸ್ ಇಲಾಖೆಯಲ್ಲಿ ಕೋಲಾರ ನಗರ ಸೇರಿದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಇನ್ಸ್ಪೆಕ್ಟರ್ ಮತ್ತು ಸಬ್ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿ ಸಂಬಂಧಿಸಿದಂತೆ ಸಭೆಯಲ್ಲೇ ಗೃಹಸಚಿವ ಜಿ.ಪರಮೇಶ್ವರ್ ಅವರಿಗೆ ಪೋನ್ ಕರೆ ಮಾಡಿ ಮಾತನಾಡಿದರು.
ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ 40 ಕೊಲೆ
ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ಬರೊಬ್ಬರಿ 40 ಕೊಲೆಗಳಾಗಿವೆ. ಅದರಲ್ಲೂ ನಾಲ್ಕು ಅತಿ ಪ್ರಮುಖ ಹಾಗೂ ಇಡೀ ಕೋಲಾರ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವ ಕೊಲೆಗಳಾಗಿವೆ. ಮಾಲೂರು ಗ್ರಾಮ ಪಂಚಾಯ್ತಿ ಸದಸ್ಯ ಅನಿಲ್ ಕುಮಾರ್ ಕೊಲೆ, ಶ್ರೀನಿವಾಸಪುರದ ಕಾಂಗ್ರೇಸ್ ಮುಖಂಡ ಗೃಹಸಚಿವರ ಆಪ್ತ ಶ್ರೀನಿವಾಸ್ ಕೊಲೆ ಪ್ರಕರಣ ಮತ್ತು ಕೋಲಾರ ನಗರದಲ್ಲಿ ಒಬ್ಬ ಅಪ್ರಾಪ್ತ ಬಾಲಕ ಕಾರ್ತಿಕ್ ಸಿಂಗ್ ಕೊಲೆಗಳು ಇಡೀ ಜಿಲ್ಲೆಯನ್ನೇ ಆತಂಕಕ್ಕೀಡು ಮಾಡಿತ್ತು. ಈ ಪ್ರಕರಣಗಳು ಪೊಲೀಸ್ ಇಲಾಖೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾಗಿದ್ದವು. ಈ ಕಾರಣದಿಂದಲೇ ಸಚಿವರ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ ಎಲ್ಲಾ ಪ್ರಕರಣಗಳ ಬಗ್ಗೆ ಸಚಿವರು ಮಾಹಿತಿ ಪಡೆದರಲ್ಲದೇ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲೆಯನ್ನು ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ತಾಕೀತು ಮಾಡಿದರು.
ಹೀಗೆ ಕಳೆದ ಮೂರು ತಿಂಗಳಲ್ಲಿ ಕೋಲಾರ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಇಡೀ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಧ್ವನಿ ಎತ್ತಿದರು. ಒಟ್ಟಾರೆಯಾಗಿ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಕೇವಲ ಜನರನ್ನಷ್ಟೇ ಅಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿದ್ದೆಗೆಡಿಸಿದ್ದು ಕೂಡಲೇ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು ಇನ್ಮುಂದೆಯಾದರೂ ಸರಣಿ ಕೊಲೆಗಳಿಗೆ ಕಡಿವಾಣ ಬೀಳುತ್ತಾ ಕಾದು ನೋಡಬೇಕಿದೆ..
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ