ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ಗೆ ಮತ್ತೆ ಭೂಸಂಕಷ್ಟ? ಜ. 15 ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ

| Updated By: Ganapathi Sharma

Updated on: Jan 02, 2025 | 7:07 AM

ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧದ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಸೂಚನೆ ನಿಡಿದೆ. ಜಂಟಿ ಸರ್ವೆಯನ್ನು ಜನವರಿ 15 ರೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಅವರನ್ನು ರಕ್ಷಿಸುವ ಸರ್ಕಾರದ ತೆರೆಮರೆ ಪ್ರಯತ್ನಗಳಿಗೆ ಹೈಕೋರ್ಟ್ ಚಾಟಿ ಬೀಸಿದ್ದು, ಮೇಲ್ಮನವಿಗೂ ಅವಕಾಶವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ಗೆ ಮತ್ತೆ ಭೂಸಂಕಷ್ಟ? ಜ. 15 ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ
ಮಾಜಿ ಸ್ಪೀಕರ್ ರಮೇಶ್ ಕುಮಾರ್ & ಹೈಕೋರ್ಟ್​
Follow us on

ಕೋಲಾರ, ಜನವರಿ 2: ಅರಣ್ಯ ಭೂಮಿ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ರಕ್ಷಣೆಗೆ ತೆರೆಮರೆ ಪ್ರಯತ್ನ ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಈ ಹಿಂದಿನ ಹೈಕೋರ್ಟ್​ ಆದೇಶದಂತೆ ಜಂಟಿ ಸರ್ವೆ ಮಾಡಿ ಮುಗಿಸಲು ಡೆಡ್‌ಲೈನ್ ನೀಡಿದೆ.

ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಕಾಂಗ್ರೆಸ್​ನ ಪ್ರಭಾವಿ ಮುಖಂಡ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಅತ್ಯಾಪ್ತರು. ಹೀಗೆ ಸಾಕಷ್ಟು ಪ್ರಭಾವ ಹೊಂದಿರುವ ರಮೇಶ್​ ಕುಮಾರ್ ಅವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪವಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಜಿನಕಲಕುಂಟೆ ಅರಣ್ಯ ಪ್ರದೇಶದಲ್ಲಿನ ಹೊಸಹುಡ್ಯ ಗ್ರಾಮದ ಸರ್ವೆ ನಂ-1 ಮತ್ತು 2 ರಲ್ಲಿ 61.39 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಅನ್ನೋ ಆರೋಪವಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

ಕಳೆದ ಎರಡು ದಶಕಗಳಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ವಾದ, ಪ್ರತಿವಾದಗಳು ನಡೆಯುತ್ತಲೇ ಇವೆ. ಅರಣ್ಯ ಹಾಗೂ ಕಂದಾಯ ಇಲಾಖೆಗೆ ಜಂಟಿ ಸರ್ವೆ ಮಾಡಿ ಒತ್ತುವರಿಯಾಗಿದ್ದಲ್ಲಿ ತೆರವು ಮಾಡಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ಕಾರಣ ನೀಡಿ ಮೂರು ಬಾರಿ ಜಂಟಿ ಸರ್ವೆ ಕಾರ್ಯ ಮುಂದೂಡಿತ್ತು. ಆದ್ರೀಗ ಹೈಕೋರ್ಟ್ ಜನವರಿ 15ರೊಳಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ವೆ ಕಾರ್ಯ ಮುಗಿಸಿ ಜನವರಿ 30 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮೇಲ್ಮನವಿಗೆ ಇಲ್ಲ ಅವಕಾಶ: ಹೈಕೋರ್ಟ್

ಮೇಲ್ಮನವಿ ಸಲ್ಲಿಸಲು ರಮೇಶ್​ ಕುಮಾರ್‌ಗೆ ಅವಕಾಶ ಇಲ್ಲ ಎಂದು ಹೈಕೋರ್ಟ್​ ಖಡಕ್​ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ ಸರ್ಕಾರ, ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಿಂದ ಮಾಡಿದ್ದ ಎಲ್ಲಾ ಆದೇಶಗಳನ್ನು ವಜಾ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಸರ್ಕಾರ ಡಿಎಫ್​ಓ ಏಡುಕುಂಡಲು ಅವರಿಗೆ ಮುಂಬಡ್ತಿ ನೀಡಿ ಕೋಲಾರದಿಂದ ಹಾಸನಕ್ಕೆ ವರ್ಗಾವಣೆ ಮಾಡಿದೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬಗ್ಗೆ ಗುತ್ತಿಗೆದಾರನ ಡೆತ್ ನೋಟ್​ನಲ್ಲೇನಿತ್ತು? ಅಸಲಿ ವಿಚಾರ ಇಲ್ಲಿದೆ ನೋಡಿ!

ಒಟ್ಟಾರೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರ ರಕ್ಷಣೆಗೆ ತೆರೆಮರೆಯ ಪ್ರಯತ್ನ ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಜಂಟಿ ಸರ್ವೆ ವೇಳೆ ಅರಣ್ಯ ಒತ್ತುವರಿ ಸಾಬೀತಾದರೆ ರಮೇಶ್‌ಕುಮಾರ್​ಗೆ ಸಂಕಷ್ಟ ಎದುರಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 am, Thu, 2 January 25