ಪ್ರಿಯಾಂಕ್ ಖರ್ಗೆ ಬಗ್ಗೆ ಗುತ್ತಿಗೆದಾರನ ಡೆತ್ ನೋಟ್ನಲ್ಲೇನಿತ್ತು? ಅಸಲಿ ವಿಚಾರ ಇಲ್ಲಿದೆ ನೋಡಿ!
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಕರ್ನಾಟಕದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದ್ದರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಮಧ್ಯೆ, ಡೆತ್ನೋಟ್ನಲ್ಲಿ ಖರ್ಗೆ ಬಗ್ಗೆ ಉಲ್ಲೇಖವಾಗಿರುವ ಅಸಲಿ ಅಂಶ ಬಯಲಾಗಿದೆ. ಅದೇನೆಂಬುದನ್ನು ತಿಳಿಯಲು ಮುಂದೆ ಓದಿ.
ಬೆಂಗಳೂರು, ಡಿಸೆಂಬರ್ 31: ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಖಡಾಖಂಡಿತವಾಗಿ ಸೋಮವಾರ ಹೇಳಿದ್ದರು. ಅಷ್ಟೇ ಅಲ್ಲದೆ, ರಾಜು ಕಪನೂರ್ (ಗುತ್ತಿಗೆದಾರನಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿ) ಜೊತೆಗೆ ಈ ಹಿಂದೆ ಬಿಜೆಪಿಯವರಿಗೂ ನಂಟಿತ್ತು ಎಂದಿದ್ದರು. ಆದರೆ, ಗುತ್ತಿಗೆದಾರ ಸಚಿನ್ ಪಂಚಾಳ್ ಡೆತ್ ನೋಟ್ನಲ್ಲಿ ಬರೆದಿಟ್ಟಿದ್ದ ವಿಷಯ ಮಾತ್ರ, ಟೆಂಡ್ ವಿಚಾರದಲ್ಲಿ ಖರ್ಗೆ ಅವರಿಗೂ ಲಿಂಕ್ ಇದೆ ಎಂಬುದನ್ನು ಬಹಿರಂಗಪಡಿಸಿದೆ.
ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ರಾಜು ಕಪನೂರ್ ಹಾಗೂ ಗ್ಯಾಂಗ್ ಹೆಸರುಗಳನ್ನು ಉಲ್ಲೇಖಿಸಿದ್ದ ಸಚಿನ್ ಪಾಂಚಾಳ್, ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ರಾಜು ಕಪನೂರ್ ಜತೆ ಮಾತುಕತೆ ನಡೆಸಿದ್ದಾಗಿಯೂ ಉಲ್ಲೇಖಿಸಿದ್ದಾರೆ. ಜತೆಗೆ, ಪ್ರಿಯಾಂಕ್ ಖರ್ಗೆ ದೂರವಾಣಿ ಮೂಲಕ ಕರೆ ಮಾಡಿ ಬೇರೊಬ್ಬ ಗುತ್ತಿಗೆದಾರನಿಗೆ ಟೆಂಡ್ ನೀಡುವಂತೆ ಸೂಚನೆ ನೀಡಿದ್ದನ್ನೂ ಉಲ್ಲೇಖಿಸಿದ್ದಾರೆ.
ಡೆತ್ನೋಟ್ನಲ್ಲಿರುವ ಅಸಲಿ ವಿಚಾರವೇನು?
ತಮ್ಮ ಸಾವಿಗೆ ರಾಜು ಕಪನೂರ್ ಮತ್ತು ಗ್ಯಾಂಗ್ ಕಾರಣ ಎಂದು ಉಲ್ಲೇಖಿಸಿರುವ ಸಚಿನ್ ಪಂಚಾಳ್, ಮುಂದುವರಿದು ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ತಾವು ಸುಮಾರು ಎರಡು ವರ್ಷಗಳಿಂದ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಂಪನಿಯ ಎಂಡಿ ಮೂಲಕ ರಾಜು ಕಪನೂರ್ ಪರಿಚಯವಾಗಿತ್ತು ಎಂದು ಸಚಿನ್ ಉಲ್ಲೇಖಿಸಿದ್ದಾರೆ.
ಸುಮಾರು 12 ಕೋಟಿ ರೂಪಾಯಿಯ ಒಂದು ಟೆಂಡರ್ ಕರೆಯಲಾಗುತ್ತಿದ್ದು, ಅದನ್ನು ನಿಮಗೆ ಮಾಡಿಸಿ ಕೊಡುತ್ತೇನೆ ಎಂದು ರಾಜು ಕಪನೂರ್ ಭರವಸೆ ನೀಡಿದ್ದ. ಈ ಟೆಂಡರ್ ಮಾಡಿಕೊಡಬೇಕಿದ್ದರೆ ಶೇಕಡ 5ರಷ್ಟು ಕಮಿಷನ್ ನೀಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತನ್ನು ದಾಟುವುದಿಲ್ಲ ಎಂದು ಹೇಳಿದ್ದ. ಸುಮಾರು ಐದಾರು ಬಾರಿ ನಾವಿಬ್ಬರೂ ಜೊತೆಯಾಗಿ ಬೆಂಗಳೂರಿಗೆ ಹೋಗಿ ಮಾನ್ಯ ಸಚಿವರನ್ನು ಭೇಟಿಯಾಗಿ ಬಂದಿರುತ್ತೇವೆ. ಆದರೂ ಸಚಿವರು ಮೊಬೈಲ್ ಫೋನ್ ಮೂಲಕ ಕರೆ ಮಾಡಿ, ಸಿಇ ಇಜಾಜ್ ಹುಸೇನ್ ಅವರಿಗೆ ಮಾಡಿಕೊಡು ಎಂದು ಹೇಳಿರುತ್ತಾರೆ. ಆದರೂ ಈ ಟೆಂಡರ್ ಗೆ 5% ಕಮಿಷನ್ ಎಂದರೆ, 60 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಕಪನೂರ್ ಬೇಡಿಕೆ ಇಟ್ಟಿದ್ದ.10 ಲಕ್ಷ ರೂಪಾಯಿ ಮುಂಗಡ ಹಣವನ್ನು ಆತನಿಗೆ ನೀಡಿದ್ದೆವು. ಬಳಿಕ ಆತ 15 ಕೋಟಿ ರೂಪಾಯಿ ಮೊತ್ತದ ಬೇರೆ ಟೆಂಡರ್ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಸಚಿನ್ ಪಂಚಾಳ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನ: ಖರ್ಗೆ ಮೇಲಿನ ಆರೋಪಗಳೇನು? ಇಲ್ಲಿದೆ ಸಮಗ್ರ ವಿವರ
ಈ ವಿಚಾರ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿನ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಾಗಲೇ ಆ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಈ ವಿಚಾರವಾಗಿ ಸ್ವತಂತ್ರ ತನಿಖೆ ಆಗಲಿ, ಸಿಐಡಿಗೆ ಒಪ್ಪಿಸಲಿ ಎಂದು ಹೇಳಿದ್ದರು. ಇದೀಗ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
ಏತನ್ಮಧ್ಯೆ, ಪ್ರಕರಣದ ಸಿಬಿಐ ತನಿಖೆಗೆ ಪ್ರತಿಪಕ್ಷ ಬಿಜೆಪಿ ಪಟ್ಟುಹಿಡಿದಿದ್ದು, ಗಡುವನ್ನೂ ನೀಡಿದೆ. ಡೆತ್ನೋಟ್ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರೂ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿರುವುದರಿಂದ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Tue, 31 December 24