AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನ: ಖರ್ಗೆ ಮೇಲಿನ ಆರೋಪಗಳೇನು? ಇಲ್ಲಿದೆ ಸಮಗ್ರ ವಿವರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಪ್ರಿಯಾಂಕ್ ಆಪ್ತ ರಾಜು ಕಪನೂರ್ ಮತ್ತು ಗ್ಯಾಂಗ್ ಹಣಕ್ಕಾಗಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೀಗ ಕರ್ನಾಟಕ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನೂ ಗುರಿಯಾಗಿಸಿ ಬಿಜೆಪಿ ವಾಗ್ದಾಳಿ ನಡೆಸಿದೆ. ಪ್ರಕರಣ ಸಂಬಂಧ ಸಮಗ್ರ ವಿವರ ಇಲ್ಲಿದೆ.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನ: ಖರ್ಗೆ ಮೇಲಿನ ಆರೋಪಗಳೇನು? ಇಲ್ಲಿದೆ ಸಮಗ್ರ ವಿವರ
ರಾಜು ಕಪನೂರ್ ಹಾಗೂ ಪ್ರಿಯಾಂಕ್ ಖರ್ಗೆ
Ganapathi Sharma
|

Updated on:Dec 30, 2024 | 11:46 AM

Share

ಬೆಂಗಳೂರು, ಡಿಸೆಂಬರ್ 30: ‘ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಎಂಬುವವರು 15 ಲಕ್ಷ ರೂಪಾಯಿಗೂ ಹೆಚ್ಚು ಹಣ ತೆಗೆದುಕೊಂಡು ಟೆಂಡರ್‌ ನೀಡದೆ ವಂಚನೆ ಮಾಡಿದ್ದಾರೆ. ಮಾತ್ರವಲ್ಲದೆ ಇನ್ನೂ 1 ಕೋಟಿ ರೂ. ಹಣ ನೀಡುವಂತೆ ಒತ್ತಡ ಹೇರಿದ್ದರು’ ಎಂದು ಡೆತ್​​ ನೋಟ್ ಬರೆದಿಟ್ಟು ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿರುವ ಪ್ರಕರಣ ಇದೀಗ ಕರ್ನಾಟಕ ರಾಜಕೀಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿರುವುದು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ.

ಮತ್ತೊಂದೆಡೆ ಬಿಜೆಪಿ ನಾಯಕರ ಹತ್ಯೆಗೂ ರಾಜು ಕಪನೂರ್ ಸುಪಾರಿ ನೀಡಿದ್ದ ಆರೋಪವೂ ಕೇಳಿಬಂದಿದೆ. ಈ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಇದೀಗ ಹೋರಾಟವನ್ನು ತೀವ್ರಗೊಳಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು ಎಂದು ಆಗ್ರಹಿಸಿದೆ. ಜೊತೆಗೆ, ಮೃತ ಸಚಿನ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಗುರಿಯಾಗಿಸಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಯುವ ಗುತ್ತಿಗೆದಾರ ಸಚಿನ್ (26) ಎಂಬವರು ಡಿಸೆಂಬರ್ 26ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್ ಮೃತದೇಹ​ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಟ್ರಾಟ್​​ನಲ್ಲಿ ಪತ್ತೆಯಾಗಿತ್ತು.

ಡೆತ್​​ನೋಟ್​​ನಲ್ಲೇನಿತ್ತು?

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ ರಾಜು ಕಪನೂರು ವಿರುದ್ಧ ಡೆತ್​ ನೋಟ್​ನಲ್ಲಿ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. 15 ಲಕ್ಷ ರೂ.ಗೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಜೊತೆಗೆ 1 ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರಾಜು ಕಪನೂರು ವಿರುದ್ಧ ಆರೋಪಿಸಲಾಗಿತ್ತು. ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್, ಆಂದೋಲಾ ಸ್ವಾಮೀಜಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಂದು ಪಾಟೀಲ್, ಮಣಿಕಂಠ ಸೇರಿ ನಾಲ್ಕು ಜನರ ಹತ್ಯೆಗೆ ರಾಜು ಕಪನೂರ್ ಹಾಗೂ ಗ್ಯಾಂಗ್ ಸುಪಾರಿ ನೀಡಿದೆ ಎಂದೂ ಉಲ್ಲೇಖಿಸಲಾಗಿತ್ತು.

ದೂರು ದಾಖಲಿಸಲು ಹಿಂದೇಟು ಹಾಕಿದ್ದೇಕೆ ಪೊಲೀಸರು?

ಡೆತ್ ನೋಟ್ ಆಧಾರವಾಗಿಟ್ಟುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ಗ್ಯಾಂಗ್ ವಿರುದ್ದ ಎಫ್​ಐಆರ್ ದಾಖಲು ಮಾಡುವಂತೆ ಬಿಜೆಪಿ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆ ಇನ್ಸ್​​​ಪೆಕ್ಟರ್ ಬಳಿ ಪಟ್ಟು ಹಿಡಿದಿದ್ದರು. ಆದರೆ, ಪ್ರಕರಣ ದಾಖಲಿಸಿಕೊಳ್ಳಲು ಅವರು ಹಿಂದೇಟು ಹಾಕಿದ್ದರು. ಪ್ರಿಯಾಂಕ್ ಖರ್ಗೆ ಅಣತಿಯಂತೆ ಪೊಲೀಸರು ದೂರು ದಾಖಲು ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

ಅಂತಿಮವಾಗಿ ಬಿಜೆಪಿ ಹೋರಾಟಕ್ಕೆ ಮಣಿದಿದ್ದ ಪೊಲೀಸರು ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಮತ್ತು ಗ್ಯಾಂಗ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು.

ರಾಜಕೀಯ ಜಿದ್ದಾಜಿದ್ದಿ ಮಧ್ಯೆ ‘ಹಣ ವರ್ಗಾವಣೆ’ ಟ್ವಿಸ್ಟ್‌!

ನಂತರ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ರಾಜು ಕಪನೂರು, ಸಚಿನ್ ಗುತ್ತಿಗೆದಾರನಾಗಿರಲಿಲ್ಲ. ಕಾಂಟ್ರಾಕ್ಟರ್ ಲೈಸೆನ್ಸ್ ಇದೆ ಅಂದುಕೊಂಡು ನಮ್ಮಿಂದಲೇ 65 ಲಕ್ಷ ರೂಪಾಯಿ ತೆಗೆದುಕೊಂಡಿದ್ದ ಎಂದು ಆರೋಪಿ ರಾಜು ಕಪನೂರ್ ಪ್ರತ್ಯಾರೋಪ ಮಾಡಿದ್ದರು. ಆದರೆ, ಕಾಂಟ್ರಾಕ್ಟರ್ ಲೈಸೆನ್ಸ್ ಇಲ್ಲದ ವ್ಯಕ್ತಿಗೆ ಸಚಿವರ ಆಪ್ತರು ಅಷ್ಟೊಂದು ಮೊತ್ತದ ಹಣ ನೀಡಿದ್ದು ಹೇಗೆ? ತಮ್ಮದೇ ಕ್ಷೇತ್ರದ ಗುತ್ತಿಗೆದಾರರ ಬಗ್ಗೆ ಸಚಿವರ ಆಪ್ತರಿಗೆ ಅಷ್ಟೂ ಮಾಹಿತಿ ಇರುವುದಿಲ್ಲವೇ? ಅಥವಾ ಇಲ್ಲದೆಯೇ ಅಷ್ಟೊಂದು ಮೊತ್ತದ ಹಣ ನೀಡುತ್ತಾರೆಯೇ ಎಂಬ ಪ್ರಶ್ನೆ ಕೂಡ ಈಗ ಉದ್ಭವಿಸಿದೆ. ಇಷ್ಟೇ ಅಲ್ಲದೆ, ಗುತ್ತಿಗೆದಾರರ ಬ್ಯಾಂಕ್ ಖಾತೆಗಳನ್ನು ಪ್ರಿಯಾಂಕ್ ಖರ್ಗೆ ಆಪ್ತರು ಹಣವನ್ನು ಬೇರೆಡೆಗೆ ವರ್ಗಾಯಿಸಲು ಬಳಸಿದ್ದರೇ ಎಂಬ ಅನುಮಾನಕ್ಕೂ ಕಾರಣವಾಗಿದೆ.

ಮಲ್ಲಿಕಾರ್ಜುನ ಖರ್ಗೆ ಬುಡಕ್ಕೆ ಬಂದ ವಿವಾದ

ಇದೀಗ ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಗುರಿಯಾಗಿಸಿ ನೇರ ಆರೋಪ ಮಾಡಲಾರಂಭಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದರೆ, ‘ರಿಪಬ್ಲಿಕ್ ಆಫ್ ಕಲಬುರಗಿ’ಯಲ್ಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಏನು ಮಾಡುತ್ತಿದ್ದಾರೆಂಬುದು ಅವರಿಗೇ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಆರೋಪಗಳೇನು?

ತಮ್ಮ ಬಳಿ ಹಣ ಕೇಳಲು ರಾಜು ಕಪನೂರು ಮತ್ತು ಗ್ಯಾಂಗ್​ಗೆ ಸಚಿವರ ಬೆಂಬಲ ಸಂಪೂರ್ಣವಾಗಿ ಇದೆ ಎಂದು ಸಚಿನ್ ಡೆತ್ ನೋಟ್​​ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಚಿನ್ ಅವರದ್ದು ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆ. ಮೃತರ ಸಹೋದರಿಯರು ದೂರು ಕೊಡಲು ಹೋದಾಗ 12 ತಾಸು ಪೊಲೀಸರು ಏನೂ ತಲೆಕೆಡಿಸಿಕೊಂಡಿಲ್ಲ. ಹೆಣ್ಣುಮಕ್ಕಳಿಗೆ ಹೀಯಾಳಿಸಿ ಅಪಮಾನ ಮಾಡಿ ಪೊಲೀಸರು ನಿಂದಿಸಿರುವುದು ಅಕ್ಷಮ್ಯ. ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ವಿಜಯೇಂದ್ರ ಗುಡುಗಿದ್ದಾರೆ.

ರಾಜೀನಾಮೆ ನೀಡುವುದಿಲ್ಲ: ಪ್ರಿಯಾಂಕ್ ಖರ್ಗೆ

ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಪ್ರತಿಕ್ರಯಿಸಿದ ಖರ್ಗೆ, ಎಷ್ಟೇ ಚೀರಾಡಲಿ, ಬಟ್ಟೆ ಹರಿದುಕೊಳ್ಳಲಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಯಾವುದಾದರೂ ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ರಾಜೀನಾಮೆ ಕೇಳಲು ವಿಜಯೇಂದ್ರ ಏನು ಸುಪ್ರೀಂಕೋರ್ಟಾ ಎಂದು ಪ್ರಶ್ನಸಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಪಾಂಚಾಳ್​ರದ್ದು ಸರ್ಕಾರಿ ಯೋಜಿತ ಆತ್ಮಹತ್ಯೆ: ಬಿವೈ ವಿಜಯೇಂದ್ರ ಆರೋಪ

ರಾಜು ಕಪನೂರ್ ನನ್ನ ಆಪ್ತ ಅಲ್ಲ ಎಂದು ನಾನು ಹೇಳಿಯೇ ಇಲ್ಲ. ರಾಜು ಕಪನೂರು ಕಾಂಗ್ರೆಸ್ ಸೇರುವ​ ಮೊದಲು ಬಿಜೆಪಿಯಲ್ಲಿದ್ದರು. ರಾಜು ಕಪನೂರ್ ಬಿಜೆಪಿ ಎಸ್​ಸಿ ಮೋರ್ಚಾ ಅಧ್ಯಕ್ಷರಾಗಿದ್ದರು ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 30 December 24