AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರ ಸಚಿನ್ ಪಾಂಚಾಳ್​ರದ್ದು ಸರ್ಕಾರಿ ಯೋಜಿತ ಆತ್ಮಹತ್ಯೆ: ಬಿವೈ ವಿಜಯೇಂದ್ರ ಆರೋಪ

ಬೀದರ್​ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒತ್ತಾಯಿಸಿದ್ದಾರೆ. ಗುತ್ತಿಗೆದಾರ ಸಚಿನ್​ ಕುಟುಂಬಸ್ಥರನ್ನು ನಾವು ಭೇಟಿ ಮಾಡಿದ್ದೇವೆ, ಸೋದರನ ಪ್ರಾಣ ಉಳಿಸುವಂತೆ ಪಿಎಸ್​​ಐ ಬಳಿ ಮನವಿ ಮಾಡಿರುವುದಾಗಿ ಹೇಳಿದ್ದರು ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಪೊಲೀಸರು ದೂರು ಸ್ವೀಕರಿಸದೇ ಠಾಣೆಗಳಿಗೆ ಅಲೆದಾಡಿಸಿದ್ದಾರೆ ಇದು ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕಿರಣ್​ ಹನಿಯಡ್ಕ
| Updated By: ನಯನಾ ರಾಜೀವ್|

Updated on:Dec 30, 2024 | 1:03 PM

Share

ಬೆಂಗಳೂರು, ಡಿಸೆಂಬರ್ 30:  ಬೀದರ್​ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರಿ ಯೋಜಿತ ಆತ್ಮಹತ್ಯೆ ಎಂದು ಕರೆದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬೀದರ್‌ನ 26 ವರ್ಷದ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾಂಗ್ರೆಸ್​ ಬಂದಾಗಿನಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚು

ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ, ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಹಿಂದೆಂದೂ ನೋಡಿರಲಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಸಹೋದರಿಯರು ದೂರು ಕೊಡಲು ಹೋದಾಗ 12 ಗಂಟೆಗಳ ಕಾಲ ಪೊಲೀಸರು ಏನೂ ತಲೆಕೆಡಿಸಿಕೊಂಡಿಲ್ಲ, ಹೆಣ್ಣುಮಕ್ಕಳಿಗೆ ಹೀಯಾಳಿಸಿ ಅಪಮಾನ ಮಾಡಿ ಪೊಲೀಸರು ನಿಂದಿಸಿರುವುದು ಅಪರಾಧ ಎಂದರು.

ಪೊಲೀಸ್​ ಠಾಣೆಗಳು ಕಾಂಗ್ರೆಸ್​ ಕಚೇರಿಗಳಾಗಿವೆ

ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳು ಕಾಂಗ್ರೆಸ್​ ಕಚೇರಿಗಳಾಗಿವೆ, ಕಲಬುರಗಿ ಜಿಲ್ಲೆ ಯಾರ ಕಪಿಮುಷ್ಠಿಯಲ್ಲಿದೆ ಎಂದು ಬಸ್​ ನಿಲ್ದಾಣದಲ್ಲಿ ನಿಂತು ಕೇಳಿದರೂ ಹೇಳುತ್ತಾರೆ ಎಂದರು. ಕಾಂಗ್ರೆಸ್​ನವರು ಬೆಳಗಿನ ಜಾವ 2-3 ಗಂಟೆಗೆ ಸಚಿನ್ ಕುಟುಂಬದವರನ್ನು ಭೇಟಿ ಮಾಡುತ್ತಾರೆ, ಕಾಂಗ್ರೆಸ್​ನವರು ಹಗಲು ಕಾರ್ಯಾಚರಣೆ ಮಾಡುವುದಿಲ್ಲ. ಕುಟುಂಬಕ್ಕೆ ಸಮಾಧಾನ ಮಾಡಿ ಆಗದಿದ್ದರೆ ಬೆದರಿಕೆ ಹಾಕುತ್ತಾರೆ, ಇಡಿ ಕಲಬುರಗಿ ಜಿಲ್ಲೆಯ ಪೊಲೀಸ್​ ಖರ್ಗೆ ಕುಟುಂಬದ ಹಿಡಿತದಲ್ಲಿದೆ ಎಂದರು.

ಮತ್ತಷ್ಟು ಓದಿ: ಮೃತ ಗುತ್ತಿಗೆದಾರ ಸಚಿನ್ ಮನೆಗೆ ವಿಜಯೇಂದ್ರ ಸೇರಿ ಬಿಜೆಪಿ ನಿಯೋಗ ಭೇಟಿ: ಸಿಬಿಐ ತನಿಖೆಗೆ ಕುಟುಂಬ ಆಗ್ರಹ

ಸಿಬಿಐ ತನಿಖೆಯಾಗಬೇಕು

ಸಚಿನ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಬೇಕು, ಇದು ಸಚಿನ್ ಕುಟುಂಬದ ಒತ್ತಾಯ ಕೂಡ, ಪ್ರಿಯಾಂಕ್​ ಖರ್ಗೆ ಎಷ್ಟು ಮೇಧಾವಿಯೋ ಅಷ್ಟೇ ಮರೆವು ಜಾಸ್ತಿ. ಹಿಂದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆಎಸ್​ ಈಶ್ವರಪ್ಪ, ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಜೆ ಜಾರ್ಜ್​ ರಾಜೀನಾಮೆ ನೀಡಿದ್ದರು.

ಸರ್ಕಾರಿ ನೌಕರಿ ಕೊಡಬೇಕು

ಕ್ಲೀನ್ ಚಿಟ್ ಸಿಕ್ಕಿದ ಮೇಲೆ ಜಾರ್ಜ್​ ಮತ್ತೆ ಸಚಿವರಾದರು, ವಾಲ್ಮೀಕಿ ನಿಗಮದಲ್ಲಿ ನಾಗೇಂದ್ರ ರಾಜೀನಾಮೆ ನೀಡಿದರು, ಇದನ್ನು ಪ್ರಿಯಾಂಕ್ ಖರ್ಗೆ ಮರೆಯಬಾರದು, ಸಿಎಂ ಕೂಡಲೇ ಪ್ರಿಯಾಂಕ್ ಖರ್ಗೆಯಿಂದ ರಾಜೀನಾಮೆ ಪಡೆಯಬೇಕು, ಸಚಿನ್ ಕುಟುಂಬಕ್ಕೆ ಸರ್ಕಾರ ಭದ್ರತೆ ನೀಡಬೇಕು, ಹಾಗೂ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡರ ಹತ್ಯೆಗೆ ಸುಪಾರಿ

ಸಚಿನ್ ಪಾಂಚಾಳ್ ಡೆತ್​ ನೋಟ್​ನಲ್ಲಿ ಆಂದೋಲಾ ಸ್ವಾಮೀಜಿ ಸೇರಿದಂತೆ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲು ಸೊಲ್ಲಾಪುರದ ಸುಪಾರಿ ಕಿಲ್ಲರ್​ಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬ ಅಂಶವೂ ಉಲ್ಲೇಖವಾಗಿದೆ. ಇದು ಬಹಳ ಗಂಭೀರ ವಿಷಯ, ಜನವರಿ 3ರವರೆಗೆ ಬಿಜೆಪಿ ಕಾಯುತ್ತದೆ, ಭಗವಂತ ಬುದ್ಧಿಕೊಟ್ಟು ಸಿಎಂ ಸಿಬಿಐ ತನಿಖೆಗೆ ಆದೇಶ ಮಾಡಿದರೆ ಒಳ್ಳೆಯದು ಜನವರಿ 4 ರಂದು ಕಲಬುರಗಿಯಲ್ಲಿ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಖರ್ಗೆಯವರ ಮನೆಗೆ ಕೂಡ ಬಿಜೆಪಿ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಿಯಾಂಕ್ ಖರ್ಗೆ ಮುಟ್ಟಲು ಭಯ ಪಡಬೇಡಿ

ಸಿದ್ದರಾಮಯ್ಯನವರೇ ನೀವು ಪ್ರಿಯಾಂಕ್ ಖರ್ಗೆಯನ್ನು ಮುಟ್ಟಿದರೆ ದೆಹಲಿಯಿಂದ ಕರೆ ಬಂದು ನಿಮ್ಮ ಸ್ಥಾನಕ್ಕೆ ಕುತ್ತು ಬರುತ್ತದೋ ಎಂದು ಭಯ ಪಡಬೇಡಿ, ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಿ ಆಗ ನೀವು ಬಲಿಷ್ಠ ಮುಖ್ಯಮಂತ್ರಿ, ಅಹಿಂದ ನಾಯಕ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು ಹಾಕಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:20 am, Mon, 30 December 24