ಮೃತ ಗುತ್ತಿಗೆದಾರ ಸಚಿನ್ ಮನೆಗೆ ವಿಜಯೇಂದ್ರ ಸೇರಿ ಬಿಜೆಪಿ ನಿಯೋಗ ಭೇಟಿ: ಸಿಬಿಐ ತನಿಖೆಗೆ ಕುಟುಂಬ ಆಗ್ರಹ
ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಹೀಗಿರುವಾಗ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಆರೋಪ– ಪ್ರತ್ಯಾರೋಪ ಮಾಡಲಾಗುತ್ತಿದೆ. ಈ ಮಧ್ಯೆ ಇಂದು ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೀದರ್, ಡಿಸೆಂಬರ್ 29: ಗುತ್ತಿಗೆದಾರ (contractor) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದ ಮೃತ ಸಚಿನ್ ಪಾಂಚಾಳ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪರಿಷತ್ ವಿಪಕ್ಷನಾಯಕ ಛಲವಾದಿ, ಬಿಜೆಪಿಯ ಹಲವು ಶಾಸಕರು, ಮುಖಂಡರು ಸಚಿನ್ ನಿವಾಸಕ್ಕೆ ಭೇಟಿ ನೀಡಿ ನಾಯಕರು ಸಾಂತ್ವನ ಹೇಳಿದರು. ವಿಜಯೇಂದ್ರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಿಬಿಐ ತನಿಖೆಗೆ ಸಚಿನ್ ಕುಟುಂಬ ಆಗ್ರಹ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ, ಪೊಲೀಸರ ನಿರ್ಲಕ್ಷ್ಯದಿಂದ ಗುತ್ತಿಗೆದಾರ ಸಚಿನ್ ಮೃತಪಟ್ಟಿದ್ದಾರೆ. ಸಚಿನ್ ನಾಪತ್ತೆಯಾಗಿದ್ದಾನೆಂದು ಸಹೋದರಿ ಠಾಣೆಗೆ ಹೋಗಿದ್ದರು. ಸಚಿನ್ ಉಳಿಸಿಕೊಡಿ ಎಂದು ಮನವಿ ಮಾಡಿದ್ದರೂ ನಿರ್ಲಕ್ಷಿಸಿದ್ದರು. ಸಚಿನ್ ಕುಟುಂಬಸ್ಥರ ಮನವಿಗೆ ಪೊಲೀಸರು ಸ್ಪಂದಿಸಿದ್ದರೆ ಉಳಿಸಬಹುದಿತ್ತು. ತನ್ನ ಸಹೋದರಿಯರ ಮಾನಕ್ಕಾಗಿ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸರಿಯಾಗಿ ತನಿಖೆ ಮಾಡಲಿ. ಸಚಿನ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕುಟುಂಬ ಆಗ್ರಹಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ಗ್ಯಾಂಗ್ ವಿರುದ್ಧ ಕಬುರಗಿಯಲ್ಲಿ ಕೊನೆಗೂ ಎಫ್ಐಆರ್ ದಾಖಲು
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಅಮಾಯಕ ಗುತ್ತಿಗೆದಾರ ಸಚಿನ್ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. ಅಕ್ಷರಶಃ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ ಎಂದಿದ್ದಾರೆ.
ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಹೋರಾಟ
ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಹಾಗೂ ಬಂಧುಗಳ ಆಕ್ರಂದನದ ಶಾಪ ಕಾಂಗ್ರೆಸ್ ಸರ್ಕಾರವನ್ನು ತಟ್ಟದೇ ಬಿಡದು, ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ರಾಜ್ಯ ಬಿಜೆಪಿ ಹೋರಾಟ ಕೊನೆಯಾಗದು, ನೊಂದ ಸಚಿನ್ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.
“ಹೇಳೋದು ಸಿದ್ದಾಂತ ಮಾಡೋದು ದುರಾಚಾರ”ಊರಿಗೆಲ್ಲ ಉಪದೇಶ, ಸಿದ್ಧಾಂತ ಹೇಳುತ್ತಾ ತಾವು ಮಾತ್ರ ನೊಂದವರ ಧ್ವನಿಯಾಗಬಲ್ಲೆವು ಎಂಬ ರೀತಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ನೈಜ ಮುಖವಾಡ ಈ ಘಟನೆಯಿಂದ ಕಳಚಿ ಬಿದ್ದಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ: ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬಿಜೆಪಿ ನಾಯಕರು, ಪೊಲೀಸ್ ಮಧ್ಯೆ ಹೈಡ್ರಾಮಾ
ವಿರೋಧ ಪಕ್ಷದಲ್ಲಿದಾಗ ಇಂಥದ್ದೇ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದವರ ರಾಜೀನಾಮೆಗೆ ಆರ್ಭಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದೇ ಸರ್ಕಾರದ ಅವಧಿಯಲ್ಲಿ ನಡೆದಿರುವ ಘಟನೆಯ ಹಿನ್ನಲೆಯಲ್ಲಿ ಈ ಕೂಡಲೇ ದುಷ್ಟರು, ಪುಂಡರು, ಕಮಿಷನ್ ವಸೂಲಿಗಾರರನ್ನು ಜೊತೆಗಿಟ್ಟುಕೊಂಡು ಒಬ್ಬ ಅಮಾಯಕ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾಗಿರುವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಂಡು ತನಿಖೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:25 pm, Sun, 29 December 24