ಪ್ರಿಯಾಂಕ್ ಖರ್ಗೆ ಬಂಧಿಸುವಂತೆ ಛಲವಾದಿ ಒತ್ತಾಯ: ಗುತ್ತಿಗೆದಾರ ಆತ್ಮಹತ್ಯೆ ಕೇಸ್ ಉನ್ನತ ಮಟ್ಟದ ತನಿಖೆಗೆ ಆಗ್ರಹ
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ ವಿಪಕ್ಷ ನಾಯಕರು ಕಿಡಿಕಾರುತ್ತಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಖರ್ಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಮತ್ತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 28: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ (Priyank Kharge) ಅಟ್ಟಹಾಸ ಬಹಳ ನಡೆಯುತ್ತಿದೆ. ಅವರನ್ನು ಸಚಿವ ಸ್ಥಾನದಿಂದ ಕೈ ಬೀಡಬೇಕು. ಅಲ್ಲದೆ ತಕ್ಷಣ ಬಂಧಿಸಬೇಕು. ಮತ್ತು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಎಲ್ಲದರಲ್ಲೂ ತಮಗೆ ಬೇಕಾದವರನ್ನು ಸಹಚರರನ್ನಾಗಿ ಜೋಡಿಸಿಕೊಂಡು ಎಲ್ಲಾ ರೀತಿಯ ದಂಧೆಗಳಲ್ಲಿ ತೊಡಗಿದ್ದಾರೆ. ಮರಳು ದಂಧೆ, ಟೈಲ್ಸ್, ಸಿಮೆಂಟ್ ಫ್ಯಾಕ್ಟರಿ ಹೀಗೆ ಎಲ್ಲಾ ರೀತಿಯ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ಗ್ಯಾಂಗ್ ವಿರುದ್ಧ ಕಬುರಗಿಯಲ್ಲಿ ಕೊನೆಗೂ ಎಫ್ಐಆರ್ ದಾಖಲು
ಗುತ್ತಿಗೆದಾರ ವಿಚಾರಕ್ಕೂ ಬೇಕಾದವರ ನೇಮಕ ಆಗಿದೆ. ಇದೇ ಕಾರಣಕ್ಕೂ ಸಚಿನ್ ಅವರ ಆತ್ಮಹತ್ಯೆ ಆಗಿದೆ. ಇದರ ಉನ್ನತ ತನಿಖೆ ಆಗಲೇಬೇಕು. ಪ್ರಿಯಾಂಕ ಖರ್ಗೆ ಅವರು ಸಂಪೂರ್ಣವಾಗಿ ತನಿಖೆಗೆ ಸಹಕರಿಸುವಂತೆ ಸರಕಾರ ಮಾಡಬೇಕು. ಇಲ್ಲವಾದರೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಅಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೃತ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಆಂದೋಲ ಸ್ವಾಮೀಜಿ, ಚಂದು ಪಾಟೀಲ್, ಬಸವರಾಜ ಮತ್ತಿಮೂಡ ಅವರನ್ನು ಸುಪಾರಿ ಕೊಟ್ಟು ಸಾಯಿಸುವ ವಿಚಾರವೂ ಪ್ರಸ್ತಾಪವಾಗಿದೆ ಎಂದರು.
ರಿಪಬ್ಲಿಕ್ ಆಫ್ ಕಲಬುರಗಿ ವ್ಯವಸ್ಥೆ
ಅದು ರಿಪಬ್ಲಿಕ್ ಆಫ್ ಕಲಬುರಗಿ ಆಗಿದೆ. ಕರ್ನಾಟಕದ ವ್ಯವಸ್ಥೆಯೇ ಬೇರೆ. ಕಲಬುರಗಿ ವ್ಯವಸ್ಥೆಯೇ ಬೇರೆಯಾಗಿದೆ. ಪೊಲೀಸರು ಕೂಡ ಅಲ್ಲಿ ಪ್ರಿಯಾಂಕ್ ಖರ್ಗೆಯವರು ಹೇಳಿದ್ದೇ ಆಡಳಿತ ಎಂಬಂತೆ ನಡೆದುಕೊಳ್ಳುತ್ತಾರೆ ಎಂದು ಕಿಡಕಾರಿದರು.
ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ: ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬಿಜೆಪಿ ನಾಯಕರು, ಪೊಲೀಸ್ ಮಧ್ಯೆ ಹೈಡ್ರಾಮಾ
ಅಲ್ಲಿ ಖರ್ಗೆ ಮನೆತನದ ದೊಡ್ಡ ಪಾರುಪತ್ಯ ನಡೆದಿದೆ. ಬೇರೆ ಯಾರಿಗೂ ಮಾತನಾಡಲು ಅವಕಾಶ ಇಲ್ಲ. ವಿಶೇಷವಾಗಿ ದಲಿತ ಸಮುದಾಯಗಳು ಅವರ ವಿರುದ್ಧ ಮಾತನಾಡಿದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ, ಪೊಲೀಸರು ಅಂಥವರ ಮನೆ ಮುಂದೆ ಇರುತ್ತಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.