AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್​ಗೆ ರಾಜಕೀಯ ತಿರುವು: ಖರ್ಗೆ ವಿರುದ್ಧ ಮುಗಿಬಿದ್ದ ವಿಪಕ್ಷಗಳು

ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಚಿನ್ ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಆಪ್ತನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿದ್ದು, ಈ ಘಟನೆಯನ್ನು ತನಿಖೆಗೆ ಒತ್ತಾಯಿಸಿದ್ದಾರೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್​ಗೆ ರಾಜಕೀಯ ತಿರುವು: ಖರ್ಗೆ ವಿರುದ್ಧ ಮುಗಿಬಿದ್ದ ವಿಪಕ್ಷಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್​ಗೆ ರಾಜಕೀಯ ತಿರುವು, ಖರ್ಗೆ ವಿರುದ್ಧ ಮುಗಿಬಿದ್ದ ವಿಪಕ್ಷಗಳು
ಕಿರಣ್​ ಹನಿಯಡ್ಕ
| Edited By: |

Updated on:Dec 26, 2024 | 9:08 PM

Share

ಬೆಂಗಳೂರು, ಡಿಸೆಂಬರ್​ 26: ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಆಪ್ತನಿಂದ ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಬೀದರ್​ನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಘಟನೆ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರವಾಗಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ನಾಯಕರು ಪ್ರಿಯಾಂಕ್​ ಖರ್ಗೆ ವಿರುದ್ಧ ವಾಗ್ದಾಳಿ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹಿಸಿದ್ದಾರೆ.

ನೈತಿಕತೆ ಬಗ್ಗೆ ಮಾತಾಡುವ ಪ್ರಿಯಾಂಕ್ ರಾಜೀನಾಮೆ ಕೊಡಲಿ: ಅಶ್ವತ್ಥ್​ ನಾರಾಯಣ

ಈ ಬಗ್ಗೆ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ್​ ನಾರಾಯಣ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಆತ್ಮಹತ್ಯೆ, ಗುತ್ತಿಗೆದಾರರ ಆತ್ಮಹತ್ಯೆ ಎಲ್ಲವೂ ನಡೆಯುತ್ತೆ. ಇಂದು ಸಚಿನ್ ಎಂಬ ಭಾಲ್ಕಿಯ ಗುತ್ತಿಗೆದಾರ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಗುತ್ತಿಗೆದಾರ ಆತ್ಮಹತ್ಯೆ!

ಸಾವಿಗೆ ಯಾರು ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಆಪ್ತನೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ. ಸಚಿನ್ ಸಾವಿನ ತನಿಖೆ ನಡೆಯಬೇಕು. ಸಿಎಂ ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ. ಇಲ್ಲದಿದ್ದರೆ ಬಿಜೆಪಿ ಹೋರಾಟ ಮಾಡುತ್ತದೆ ಎಂದು ವಾರ್ನ್ ಮಾಡಿದ್ದು, ನೈತಿಕತೆ ಬಗ್ಗೆ ಮಾತಾಡುವ ಪ್ರಿಯಾಂಕ್ ರಾಜೀನಾಮೆ ಕೊಡಲಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್​ ಸರ್ಕಾರ ಗುತ್ತಿಗೆದಾರರ ಹೆಸರಿನಲ್ಲಿ ಚೆಲ್ಲಾಟವಾಡುತ್ತಿದೆ: ಹೆಚ್​ಡಿ.ಕುಮಾರಸ್ವಾಮಿ

ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಕಾಂಗ್ರೆಸ್​ ಸರ್ಕಾರ ಗುತ್ತಿಗೆದಾರರ ಹೆಸರಿನಲ್ಲಿ ಚೆಲ್ಲಾಟ ಆಡುತ್ತಿದೆ. ರಾಜ್ಯದಲ್ಲಿ ಹಲವು ಸಮಸ್ಯೆಗಳು ಇದ್ದರೂ ನಿರ್ವಹಣೆ ಮಾಡುತ್ತಿಲ್ಲ. ಜವಾಬ್ದಾರಿ ನಿರ್ವಹಣೆ ಮಾಡದೇ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ. ಪ್ರಿಯಾಂಕ್​ ಖರ್ಗೆ ರಾಜ್ಯದಲ್ಲಿ ನನ್ನನ್ನು ಬಿಟ್ಟರೆ ಸಚ್ಚಾರಿತ್ರ್ಯ ವ್ಯಕ್ತಿ ಇಲ್ಲ ಅಂತಾರೆ. ಇದೀಗ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಹೆಸರೇ ಬಂದಿದೆ ಎಂದಿದ್ದಾರೆ.

ಎನ್.ರವಿಕುಮಾರ್ ವಾಗ್ದಾಳಿ 

ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್​ ಪ್ರತಿಕ್ರಿಯಿಸಿದ್ದು, ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಬೀದರ್​ನ ಸಚಿನ್ ಎಂಬ ಕಾಂಟ್ರಾಕ್ಟರ್ ಬಳಿ ಒಂದು ಕೋಟಿ ರೂ ಡಿಮ್ಯಾಂಡ್ ಇಟ್ಟಿದ್ದಾರೆ. ನಾನೇ ಈಗೀನ ಸತ್ಯಹರಿಶ್ಚಂದ್ರ ಎಂದು ಬೀಗುತ್ತಿರುವ ಪ್ರಿಯಾಂಕ್​ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

ಸತ್ಯ, ಅಹಿಂಸೆಯ ವಿಚಾರ ಇಟ್ಟು ಅಧಿವೇಶನ ಮಾಡಲು ಹೊರಟವರು ಮೊದಲು ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ. ಆಗ ಮಹಾತ್ಮಗಾಂಧಿಯ ಹೆಸರನ್ನು ಹೇಳಿ. ಇಲ್ಲದಿದ್ದರೆ ನಿಮಗೆ ಮಹಾತ್ಮಗಾಂಧಿಯ ಹೆಸರು ಹೇಳುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ

ಇನ್ನು ಈ ಬಗ್ಗೆ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್​ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಮಂತ್ರಿಗಳು ತಮ್ಮ ಬಲಗೈ ಬಂಟರು ಹಾಗೂ ಆಪ್ತ ಸಹಾಯಕರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೀಡಿದಂತಿದೆ. ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತಸಹಾಯಕನ ಕಿರುಕುಳಕ್ಕೆ ತಹಸೀಲ್ದಾರ್ ಕಚೇರಿಯ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ, ಇದರ ಬೆನ್ನಲ್ಲೇ ವಿಧಾನ ಮಂಡಲದ ಸುವರ್ಣ ಸೌಧಕ್ಕೆ ನುಗ್ಗಿ ಶಾಸಕರಾದ ಸಿಟಿ ರವಿ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದ ಸುದ್ದಿ ಹಸಿಯಾಗಿರುವಾಗಲೇ ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರನ ಕಿರುಕುಳ ಹಾಗೂ ಬೆದರಿಕೆಯಿಂದ ತತ್ತರಿಸಿದ್ದ ಬೀದರ್​ನ ಗುತ್ತಿಗೆದಾರ ಸಚಿನ್ ಸುದೀರ್ಘ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್​ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನೂ ಕರುಣಿಸಿ ನತದೃಷ್ಟ ಕುಟುಂಬಗಳನ್ನು ಅನಾಥವಾಗಿಸಲು ಹೊರಟಿದೆ. ಪ್ರತಿಯೊಂದು ವಿಷಯದಲ್ಲೂ ಅನಗತ್ಯ ಮೂಗು ತೂರಿಸಿ ತಮ್ಮ ನಡೆ, ನುಡಿಗಳಲ್ಲಿ ದಾಷ್ಟ್ಯತನ ಪ್ರದರ್ಶಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂಬುದು ಆತ್ಮಹತ್ಯೆಗೊಳಗಾದ ದುರ್ದೈವಿ ಗುತ್ತಿಗೆದಾರ ಸಚಿನ್ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಲಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಲಬುರಗಿ ಬಿಜೆಪಿ ಮುಖಂಡ ವಿಡಿಯೋ ರಿಲೀಸ್ ಮಾಡಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಬೆಂಬಲಿಗ ಅರೆಸ್ಟ್!

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ವಿಪರೀತ ಆರ್ಥಿಕ ಒತ್ತಡ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ. ಸಚಿವರ ಕೈ ಕೆಳಗಿನ ಅಧಿಕಾರಿಗಳು ಹಾಗೂ ಆಪ್ತರ ಒತ್ತಡಗಳು ಗುತ್ತಿಗೆದಾರರನ್ನು ಉಸಿರುಗಟ್ಟಿಸುತ್ತಿವೆ. ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ ಹಾಗೂ ಕಾಂಗ್ರೆಸ್ ಮುಖಂಡ ರಾಜುವಿನ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿಟ್ಟಿರುವ ಪತ್ರ ಇದಕ್ಕೆ ಸಾಕ್ಷಿ ಒದಗಿಸಿದೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಪಕ್ಷಪಾತಿಗಳಂತೆ ವರ್ತಿಸುವುದನ್ನು ಬಿಟ್ಟು ಪಾರದರ್ಶಕ ತನಿಖೆ ನಡೆಸದಿದ್ದರೆ ಈ ವಿಷಯವನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಿದೆ ಎಂದಿದ್ದಾರೆ.

ಸಾವಿಗೀಡಾದ ನತದೃಷ್ಟ ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಸರ್ಕಾರ ಈ ಕೂಡಲೇ ಆ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಿ, ಮೃತ ಗುತ್ತಿಗೆದಾರ ಸಚಿನ್ ಪಡೆದಿದ್ದ ಗುತ್ತಿಗೆ ಕೆಲಸಗಳ ಬಾಕಿ ಉಳಿದಿರುವ ಹಣವನ್ನು ಪಾವತಿಸಿ ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮೂಲಕ ನ್ಯಾಯ ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:17 pm, Thu, 26 December 24