ಬೆಳಗಾವಿಯಲ್ಲಿ ನಡೆದ CWC ಸಭೆಯಲ್ಲಿ 2 ಪ್ರಮುಖ ನಿರ್ಣಯ ಕೈಗೊಂಡ ಕಾಂಗ್ರೆಸ್…!
ಇಂದಿಗೆ 100 ವರ್ಷ.. 1924 ಡಿಸೆಂಬರ್ 26, ಮಧ್ಯಾಹ್ನ 3 ಗಂಟೆ. ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಭಾರತದ ಹೊಸ ದಾರಿಗೆ ನಾಂದಿಯಾಗಿತ್ತು. ಆ ಅಧಿವೇಶನ ಸ್ವಾತಂತ್ರ ಹೋರಾಟಕ್ಕೆ ಸ್ಪಷ್ಟ ದಿಕ್ಕಾಗಿತ್ತು. ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಬಳಸಿದ ಚರಕಾಸ್ತ್ರಕ್ಕೆ ಶಕ್ತಿ ತುಂಬಿತ್ತು. ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತ ಚಾಲನೆ ಸಿಕ್ಕಿತ್ತು. ಸ್ವಾತಂತ್ರ ಹೋರಾಟದ ವಿಸ್ತಾರಕ್ಕೆ ಹಾದಿಯಾಗಿತ್ತು. ಇದೀಗ ಆ ಕಾಂಗ್ರೆಸ್ ಆಧಿವೇಶಕ್ಕೆ 100 ವರ್ಷ ತುಂಬಿದ್ದು, ಇದರ ಸ್ಮರಣಾರ್ಥವಾಗಿ ಬೆಳಗಾವಿಯಲ್ಲಿ ಇಂದಿನಿಂದ 2 ದಿನ ಶತಮಾನೋತ್ಸವ ನಡೆಯುತ್ತಿದ್ದು, ಮೊದಲ ದಿನವಾದ ಇಂದು(ಡಿಸೆಂಬರ್ 26) ಸಿಡಬ್ಲ್ಯುಸಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ.
ಬೆಳಗಾವಿ, (ಡಿಸೆಂಬರ್ 26): ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ (ಸಿಡಬ್ಲ್ಯುಸಿ) ಸಭೆ ನಡೆದಿದ್ದು, ಸಭೆಯಲ್ಲಿ ಮಹತ್ವದ ಚರ್ಚೆಗಳು ಆಗಿವೆ. ಅಲ್ಲದೇ ಈ ಸಭೆಯಲ್ಲಿ ಕಾಂಗ್ರೆಸ್ ಎರಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಮೊದಲನೆಯದ್ದು ಮಹಾತ್ಮ ಗಾಂಧಿ, ಎರಡನೇಯದ್ದು ರಾಜಕೀಯ. ಹೌದು.. 2025ರಲ್ಲಿ ಸಂಘಟನೆಗೆ ಪರಿವರ್ತನೆ ತರಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ 2025 ಜನವರಿ ತನಕ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮ ಬಗ್ಗೆ ನಿರ್ಣಯ ಕೈಗೊಂಡಿದೆ.
ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಇತಿಹಾಸದಲ್ಲಿ ಇಂದು ಐತಿಹಾಸಿಕ ಸಭೆ ಆಗಿದೆ. ಎಂದೆಂದಿಗೂ ನೆನಪಿಡಬೇಕಾದ ಸಭೆ ನಡೆದಿದೆ. ದೇಶದ ಕಾಂಗ್ರೆಸ್ಸಿಗರು ಹೆಮ್ಮೆ ಪಡುವಂಥ ದಿನ ಇಂದು. ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ ಸಮ್ಮೇಳನ ನಡೆಸಿದ ಸ್ಥಳ ಇದು. 100 ವರ್ಷದ ಬಳಿಕ ಮತ್ತೆ ಇದೇ ಸ್ಥಳದಲ್ಲಿ ಸಭೆ ನಡೆದಿದೆ. ಅದೇ ಪರಂಪರೆ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಸಭೆಯಲ್ಲಿ 2 ಮಹತ್ವದ ನಿರ್ಣಯ ತೆಗೆದುಕೊಂಡಿದ್ದೇವೆ. 2025ರಲ್ಲಿ ಸಂಘಟನೆಗೆ ಪರಿವರ್ತನೆ ತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೂತ್ಮಟ್ಟದಿಂದ ಮೇಲಿನವರೆಗೂ ಬದಲಾವಣೆ ತರುತ್ತೇವೆ. ಸಂಘಟನೆ ದೃಷ್ಟಿಯಿಂದ ಮಹತ್ವದ ಬದಲಾವಣೆ ಮಾಡುತ್ತೇವೆ. ನಾಯಕತ್ವ ಯಾರಿಗೆ ಇದೆ ಅವರಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಗೈರು: ಪತ್ರದ ಮೂಲಕ ಸೋನಿಯಾ ಮಹತ್ವದ ಕರೆ
2025 ಜನವರಿ ತನಕ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮ ನಡೆಯಲಿದೆ. 13 ತಿಂಗಳ ಕಾಲ ನಿರಂತರ ಸಮಾವೇಶ ರ್ಯಾಲಿ ಪಾದಯಾತ್ರೆ, ಸೆಮಿನಾರ್ ಮಾಡುತ್ತೇವೆ. ಬೃಹತ್ ಸಮಾವೇಶಗಳಲ್ಲಿ ಸಂವಿಧಾನದ ಮೇಲಿನ ದಾಳಿ ಖಂಡಿಸುತ್ತೇವೆ. ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ನಿರಂತರ ಕ್ಯಾಂಪೇನ್ ನಡುವೆಯೂ ಸಂಘಟನಾತ್ಮಕ ಬದಲಾವಣೆ ಇರುತ್ತದೆ. ಏಪ್ರಿಲ್ ನಲ್ಲಿ ಗುಜರಾತ್ ನಲ್ಲಿ ಎಐಸಿಸಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಚುನಾವಣಾ ಆಯೋಗದ ವಿರುದ್ಧಬೇಸರ ವ್ಯಕ್ತಪಡಿಸಿದ ವೇಣುಗೋಪಾಲ್ , ಚುನಾವಣಾ ಆಯೋಗದ ಕೆಲಸ ಹಿಂದೆ ಬೀಳುತ್ತಿದೆ. ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಉಳಿದಿಲ್ಲ. ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ವ್ಯತ್ಯಾಸ ಆಗಿದೆ. ಇವೆರಡು 2 ರಾಜ್ಯಗಳ ಚುನಾವಣೆಯಲ್ಲಿ ಲೋಪದೋಷಗಳಾಗಿವೆ. ಹೀಗಾಗಿ ಚುನಾವಣಾ ಆಯೋಗದ ವಿರುದ್ದ ಸಮರ ಸಾರಲು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತು
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಡಾ.ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಪ್ರಸ್ತಾಪಿಸಿದರು. ಈ ಹೇಳಿಕೆಯು ಸಂವಿಧಾನದ ನಿರ್ಮಾಪಕನಿಗೆ ಅತ್ಯಂತ ಅವಮಾನ. ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ, ಪ್ರತಿಭಟನೆ ಕೂಡ ಮಾಡಿದ್ದೇವೆ. ಈಗ ದೇಶಾದ್ಯಂತ ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ. ಪ್ರಧಾನಿ ಮತ್ತು ಸರ್ಕಾರ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ರಾಜೀನಾಮೆ ಕೇಳುವ ಬದಲು ಮೋದಿ ಅಮಿತ್ ಶಾಗೆ ಬೆಂಬಲಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ರಕ್ಷಣೆಗೆ ಪ್ರಧಾನಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದರು.
ಬಿಜೆಪಿಯವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜನರ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿರುವುದು ಕಳವಳಕಾರಿ. ಕೆಲ ದಿನಗಳ ಹಿಂದೆ ಅವರು ಕೋರ್ಟ್ ಆದೇಶದ ಮಾಹಿತಿಯನ್ನು ಹಂಚಿಕೊಳ್ಳಲು ಚುನಾವಣಾ ನಿಯಮಗಳನ್ನು ಬದಲಾಯಿಸಿದರು. ಕೆಲವೊಮ್ಮೆ ಮತದಾರರ ಹೆಸರು ಪಟ್ಟಿಯಿಂದ ಅಳಿಸಿ ಹೋಗುವುದು. ಕೆಲವೊಮ್ಮೆ ಮತದಾನ ಮಾಡದಂತೆ ತಡೆಯುವುದು, ಕೆಲವೊಮ್ಮೆ ಪಟ್ಟಿಯಲ್ಲಿ ಮತದಾರರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ. ಕೊನೆಯ ಕ್ಷಣದಲ್ಲಿ ಅನಿರೀಕ್ಷಿತವಾಗಿ ಮತದಾನದ ಪ್ರಮಾಣ ಹೆಚ್ಚಾಗುವುದು, ಈ ಕೆಲ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಇವುಗಳಿಗೆ ಯಾವುದೇ ತೃಪ್ತಿಕರ ಉತ್ತರ ಕಂಡುಬಂದಿಲ್ಲ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Thu, 26 December 24