ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣ: ಆರೋಪಿಗಳಿಗೆ ಷರತ್ತುಬದ್ಧ ಜಾಮೀನು
ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲಿನ ಮೊಟ್ಟೆ ದಾಳಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇನ್ನು ಮುನಿರತ್ನ ಅವರು 150 ಜನರ ವಿರುದ್ಧ ದೂರು ದಾಖಲಿಸಿದ್ದು, ಇದಕ್ಕೆ ಪ್ರತಿಯಾಗಿ ಸಹ ಆರೋಪಿಗಳು ದೂರು ನೀಡಿದ್ದಾರೆ.
ಬೆಂಗಳೂರು, (ಡಿಸೆಂಬರ್ 26): ಬೆಂಗಳೂರು, (ಡಿಸೆಂಬರ್ 26): ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲಿನ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದು, ಇದೀಗ ಆ ಮೂವರು ಆರೋಪಿಗೆ ಜಾಮೀನು ಸಿಕ್ಕಿದೆ. ಬಂಧನಕ್ಕೊಳಗಾಗಿದ್ದ ಚಂದ್ರು, ವಿಶ್ವನಾಥ್, ಕೃಷ್ಣಮೂರ್ತಿಗೆ ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಕಂಠೀರವ ಸ್ಟುಡಿಯೋ ಬಳಿ ಬುಧವಾರ(ಡಿಸೆಂಬರ್ 25) ಶಾಸಕ ಮುನಿರತ್ನ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು. ಅದೇ ಸಂದರ್ಭದಲ್ಲಿ ಮುನಿರತ್ನ ಅವರ ತಲೆಗೆ ಮೊಟ್ಟೆ ಎಸೆದಿದ್ದರು. ಇದರ ಬೆನ್ನಲ್ಲೇ ನಂದಿನ ಲೇಔಟ್ ಠಾಣೆ ಪೊಲೀಸರು ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎನ್ನುವರುನ್ನು ಬಂಧಿಸಿದ್ದರು.
ಇದನ್ನೂ ಓದಿ: ರಾಜೀನಾಮೆ ಕೊಟ್ಟರೆ ಜೀವ ಉಳಿಯುತ್ತೆ: ಮುನಿರತ್ನ ದೂರಿನಲ್ಲಿ ದಾಖಲಾದ ಸ್ಫೋಟಕ ಸಂಗತಿಗಳ ವಿವರ ಇಲ್ಲಿದೆ
ದೂರು ದಾಖಲಿಸಿದ ಮುನಿರತ್ನ
ತಮ್ಮ ಮೇಲಿನ ಮೊಟ್ಟೆ ದಾಳಿಗೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರು ದೂರು ನೀಡಿದ್ದು, ಈ ದೂರಿನ ಮೇರೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಒಳಸಂಚು ರೂಪಿಸಿ, ಹಲ್ಲೆ ಮತ್ತು ಕೊಲೆ ಮಾಡುವ ಉದ್ದೇಶದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಮುನಿರತ್ನ ದೂರಿನಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮುನಿರತ್ನ ನೀಡಿದ ದೂರಿನಲ್ಲಿ ಸ್ಫೋಟಕ ಸಂಗತಿಗಳು ದಾಖಲಾಗಿವೆ. ಮುನಿರತ್ನ ನೀಡಿರುವ ದೂರಿನಲ್ಲಿ ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಸೇರಿದಂತೆ ನೂರರಿಂದ 150 ಜನರ ಹೆಸರಿದೆ.
ಮುನಿತ್ನ ವಿರುದ್ಧ ಪ್ರತಿದೂರು
ತಮ್ಮನ್ನು ಹತ್ಯೆ ಮಾಡುವ ಸಂಚಿನ ಮುಂದುವರೆದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಶಾಸಕ ಮುನಿರತ್ನ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೊಟ್ಟೆ ಎಸೆದವ ಎಂದು ಆರೋಪ ಎದುರಿಸುತ್ತಿರುವವರೂ ಸಹ ಪ್ರತಿದೂರು ನೀಡಿದ್ದಾರೆ. ಮುನಿರತ್ನ ಅವರ ಬೆಂಬಲಿಗರೇ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Thu, 26 December 24