ಕಲಬುರಗಿ: ನಗರ ಪೊಲೀಸ್ ಕಮಿಷನರ್ ಪತ್ನಿ ವಿರುದ್ಧ ಹಣಕ್ಕೆ ಬೇಡಿಕೆ; ಬಿಜೆಪಿ ಮುಖಂಡನಿಂದ ಆರೋಪ
ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ.ವೈ.ಎಸ್ ರವಿಕುಮಾರ್ ಅವರ ಪತ್ನಿ ರೂಪಾಲಿ ಅವರಿಂದ ಮೂರು ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಆರೋಪ ಮಾಡಿದ್ದಾರೆ.
ಕಲಬುರಗಿ: ನಗರ ಪೊಲೀಸ್ ಕಮಿಷನರ್ ಡಾ.ವೈ.ಎಸ್ ರವಿಕುಮಾರ್ ಅವರ ಪತ್ನಿ ರೂಪಾಲಿ ಅವರು 3 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು. ಹಣ ಕೊಡದೇ ಇದ್ದಿದ್ದಕ್ಕಾಗಿ ನನ್ನನ್ನು ಗಡಿಪಾರು ಮಾಡಿದ್ದಾರೆ ಎಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಣಿಕಂಠ ರಾಠೋಡ್ ಆರೋಪ ಮಾಡಿದ್ದಾರೆ.
ಸೆಪ್ಟೆಂಬರ್ 30 ರಂದು ರೂಪಾಲಿ ಸೇರಿದಂತೆ ಅವರ ತಂಡದಿಂದ ದಾಂಡಿಯಾ ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಬೈ ಮೂಲದ ಇವೆಂಟ್ ಕಂಪನಿಗೆ ಮೂರು ಲಕ್ಷ ನೀಡಿದ್ದೆ. ಅದರ ಹಣವನ್ನು ಇನ್ನು ನೀಡಿಲ್ಲ. ಅನಂತರ ಮತ್ತೆ ಮೂರು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು, ತಾನು ಹಣ ಕೊಡದೇ ಇದ್ದಾಗ ಅವರ ಪತಿ ನಗರ ಪೊಲೀಸ್ ಕಮಿಷನರ್ ಡಾ.ವೈ ಎಸ್ ರವಿಕುಮಾರ್ ನನ್ನನ್ನು ಸುಳ್ಳು ಪ್ರಕರಣ ದಾಖಲಿಸಿ ಗಡಿಪಾರು ಆದೇಶ ಮಾಡಿದ್ದರು. ನನ್ನ ಹಣ ನನಗೆ ನೀಡಬೇಕು, ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎನ್ನುತ್ತಿದ್ದಾರೆ ಮಣಿಕಂಠ ರಾಠೋಡ್.
ಇನ್ನು ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ.ವೈ ಎಸ್ ರವಿಕುಮಾರ್ ಅವರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ. ರವಿಕುಮಾರ್ ನನ್ನ ಪತ್ನಿ ದಾಂಡಿಯಾ ನೈಟ್ ಕಾರ್ಯಕ್ರಮ ಮಾಡಿದ್ದು ನಿಜ, ಅದಕ್ಕೆ ಅನೇಕರಿಂದ ಸ್ಪಾನ್ಸರ್ ಕೇಳಿದ್ದಾರೆ. ಅದೇ ರೀತಿ ಮಣಿಕಂಠ ರಾಠೋಡ್ರಿಗೂ ಕೂಡಾ ಸಹಾಯ ಕೇಳಿರಬಹುದು ಆದರೆ ಹಣಕ್ಕಾಗಿ ಒತ್ತಾಯ ಮಾಡಿದ್ದಾರೆ ಎನ್ನುವುದು ಸುಳ್ಳು, ಮಣಿಕಂಠ ರಾಠೋಡ್ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾನೆ. ಆತನ ಮೇಲೆ ಮೊದಲೇ ಯಾದಗಿರಿ ಜಿಲ್ಲೆಯಲ್ಲಿ ರೌಡಿಸೀಟ್ ಓಪನ್ ಆಗಿದ್ದು, ಆತನ ಮೇಲೆ ಮೂವತ್ತು ಕೇಸ್ ಇದ್ದಾವೆ. ಹೀಗಾಗಿ ಆತನಿಗೆ ಗಡಿಪಾರು ಆದೇಶ ಮಾಡಲಾಗಿದೆ ಎಂದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ