ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ ದುಷ್ಕರ್ಮಿಗಳನ್ನೇ ಬಲೆಗೆ ಬೀಳಿಸಿದ ಕಲಬುರಗಿ ಪೊಲೀಸರು, ನವಿಲು, ಕೃಷ್ಣಮೃಗ ಮಾಂಸ ನೋಡಿ ಶಾಕ್
ಕಲಬುರಗಿಯಲ್ಲಿ ರಾಷ್ಟ್ರ ಪಕ್ಷಿ ನವಿಲು, ಕೃಷ್ಣ ಮೃಗವನ್ನು ಭೇಟೆಯಾಡಿ, ಅವುಗಳ ಮಾಂಸವನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ಬಳಿಯಿದ್ದ ರೈಪಲ್ ಸೇರಿದಂತೆ ಅನೇಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ: ನಗರದ ಯಾದುಲ್ಲಾ ಕಾಲೋನಿಯಲ್ಲಿ ಅಕ್ರಮವಾಗಿ ಕೃಷ್ಣ ಮೃಗ(Blackbuck), ರಾಷ್ಟ್ರ ಪಕ್ಷಿ ನವಿಲ(Peacock)ನ್ನು ಬೇಟೆಯಾಡುವುದು ಹಾಗೂ ಅವುಗಳ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರು ಬಂದಿದ್ದು, ಇದರ ಮಾಹಿತಿ ಮೇರೆಗೆ ಕಲಬುರಗಿ ನಗರ ಪೊಲೀಸರು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಸಿಕ್ಕ ನವಿಲು, ಕೃಷ್ಣ ಮೃಗದ ಮಾಂಸವನ್ನು ನೋಡಿ ಶಾಕ್ ಆಗಿದ್ದಾರೆ.
ಯಾದುಲ್ಲಾ ಕಾಲೋನಿಯ ನಿವಾಸಿಗಳಾದ ಸೈಯದ್ ನಜಮುದ್ದೀನ್, ಮಹಮ್ಮದ್ ಅಜೀಜ್, ಸಮಿ ಜುನೈದಿ ಎನ್ನುವ ಮೂವರನ್ನು ಬಂಧಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಐದು ಕೃಷ್ಣ ಮೃಗದ ಮಾಂಸ, ಒಂದು ಬೇಟೆಯಾಡಿದ್ದ ನವಿಲು ಪತ್ತೆಯಾಗಿದೆ. ದುಷ್ಕರ್ಮಿಗಳು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಅರಣ್ಯ ಪ್ರದೇಶದಲ್ಲಿ ನವಿಲುಗಳನ್ನು ಬೇಟೆಯಾಡುತ್ತಿದ್ದರೆ, ಬೀದರ್ ಜಿಲ್ಲೆಯ ಭಾಲ್ಕಿ ಸೇರಿದಂತೆ ಬೀದರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷ್ಣ ಮೃಗಗಳನ್ನು ಬೇಟೆಯಾಡುತ್ತಿದ್ದರು.
ಬೊಲೆರೋ ವಾಹನದಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು, ಬೇಟೆಯಾಡಿಕೊಂಡು ಕಲಬುರಗಿಗೆ ಬಂದು, ಮನೆಯಲ್ಲಿ ಮಾಂಸವನ್ನು ಕತ್ತರಿಸಿ, ಮಾರಾಟ ಮಾಡುತ್ತಿದ್ದರು.
ವನ್ಯಜೀವಿಗಳನ್ನು ಬೇಟೆಯಾಡುವುದು, ಅವುಗಳ ಮಾಂಸವನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನಿನ ಪ್ರಕಾರ, ವನ್ಯಜೀವಿಗಳನ್ನು ಬೇಟೆಯಾಡುವುದು ಸಾಬೀತಾದರೆ ಏಳು ವರ್ಷಗಳ ಕಾಲ ಶಿಕ್ಷೆ, ಮತ್ತು ದಂಡವನ್ನು ವಿಧಿಸಲು ಅವಕಾಶವಿದೆ. ಆದರೆ ಇದೆಲ್ಲ ಗೊತ್ತಿದ್ದರೂ ಸಹ ಅನೇಕರು ಕದ್ದು ಮುಚ್ಚಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದಾರೆ.
ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿಯ ಕಣ್ತಪ್ಪಿಸಿ, ಶ್ರೀಮಂತರಂತೆ ಐಷಾರಾಮಿ ಕಾರುಗಳಲ್ಲಿ ಓಡಾಡುವ ದುಷ್ಕರ್ಮಿಗಳು ವನ್ಯಜೀವಿಗಳನ್ನು ಬೇಟೆಯಾಡುತ್ತಾರೆ.
ಇದನ್ನೂ ಓದಿ:Wild Boar menace: ಕಾಡು ಹಂದಿ ಬೇಟೆಗೆ ಹೈಕೋರ್ಟ್ ಅನುಮತಿ; ಆದರೆ ವನ್ಯಜೀವಿ ಪ್ರಿಯರು ಎತ್ತಿದ್ದಾರೆ ಆಕ್ಷೇಪ!
ವನ್ಯಜೀವಿಗಳನ್ನು ಭೇಟೆಯಾಡಿ, ಅವುಗಳ ಮಾಂಸವನ್ನು ಮಾರಾಟ ಮಾಡುವ ಇಂತಹ ಖತರ್ನಾಕ್ ಕಿಲಾಡಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಪೊಲೀಸರು ನೋಡಿಕೊಳ್ಳಬೇಕಿದೆ. ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ವನ್ಯಜೀವಿಗಳು ಇರುವುದೇ ಅಪರೂಪ. ಇದೀಗ ದುಷ್ಕರ್ಮಿಗಳು ಇರುವ ವನ್ಯಜೀವಿಗಳನ್ನು ಭಕ್ಷಿಸಿ, ಅವುಗಳನ್ನು ನಾಶ ಮಾಡುತ್ತಿರುವುದು ಮಾತ್ರ ದುರಂತವೇ ಸರಿ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ