ಗುತ್ತಿಗೆದಾರ ಆತ್ಮಹತ್ಯೆ: ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬಿಜೆಪಿ ನಾಯಕರು, ಪೊಲೀಸ್ ಮಧ್ಯೆ ಹೈಡ್ರಾಮಾ
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಹಾಗೂ ಗ್ಯಾಂಗ್ ಟಾರ್ಚರ್ನಿಂದ ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿರುವ ಡೆತ್ನೋಟ್ ಬಿಜೆಪಿ ನಾಯಕರನ್ನು ಅಕ್ಷರಶಃ ಕಂಗೆಡಿಸಿದೆ. ಸಚಿನ್ ಬರೆದಿದ್ದು ಎನ್ನಲಾದ ಡೆತ್ನೋಟ್ನಲ್ಲಿ ಉಲ್ಲೇಖ ಆಗಿರುವ ಕೊಲೆ ಸುಪಾರಿ ವಿಚಾರ ಬಿಜೆಪಿ ಶಾಸಕ ಹಾಗೂ ಕೇಸರಿ ಮುಖಂಡರಲ್ಲಿ ಜೀವ ಭಯ ಹುಟ್ಟಿಸಿದೆ. ಅದಕ್ಕಾಗಿ ಇಂದು ದೂರು ದಾಖಲಿಸಲು ಕಲಬುರಗಿ ಸ್ಟೇಷನ್ ಬಜಾರ್ಗೆ ಹೋಗಿದ್ದ ಬಿಜೆಪಿ ನಾಯಕರ ಮತ್ತು ಖಾಕಿ ಮಧ್ಯೆ ವಾಕ್ಸಮರ ನಡೆದಿದ್ದು, ಠಾಣೆಯಲ್ಲಿ ಡೈ ಡ್ರಾಮಾವೇ ನಡೆದು ಹೋಗಿದೆ.
ಕಲಬುರಗಿ, ಡಿಸೆಂಬರ್ 28: ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ, ಡೆತ್ನೋಟ್ನಲ್ಲಿ ಸುಪಾರಿ ಬಗ್ಗೆ ಉಲ್ಲೇಖವಾಗಿರುವುದು ಕಾಂಗ್ರೆಸ್-ಬಿಜೆಪಿ ರಾಜಕೀಯ ಜಿದ್ದಾಜಿದ್ದಿಗೆ ನಾಂದಿ ಹಾಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಮಾಜಿ ಕಾರ್ಪೋರೆಟರ್ ರಾಜು ಕಪನೂರ್ ಹಾಗೂ ಗ್ಯಾಂಗ್ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್, ಆಂದೋಲಾ ಸ್ವಾಮೀಜಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಂದು ಪಾಟೀಲ್, ಮಣಿಕಂಠ ಸೇರಿ ನಾಲ್ಕು ಜನರ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ಉಲ್ಲೇಖದ ಡೆತ್ನೋಟ್ ಕಲಬುರಗಿಯ ಬಿಜೆಪಿ ನಾಯಕರಲ್ಲಿ ಭಯ ಹುಟ್ಟಿಸಿದೆ.
ಡೆತ್ನೋಟ್ನಲ್ಲಿ ಉಲ್ಲೆಖಿಸಿದ ಅಂಶಗಳ ಆಧಾರದ ಮೇಲೆ ಬಿಜೆಪಿ ಪಡೆ ಪೊಲೀಸ್ ಕಮಿಷನರ್ ಡಾ. ಶರಣಪ್ಲ ಎಸ್ಡಿ ಅವರನ್ನು ಭೇಟಿಯಾಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದರು. ಆದರೆ ಸ್ಟೇಷನ್ ಬಜಾರ್ ಠಾಣೆ ಇನ್ಸ್ಪೆಕ್ಟರ್ ನಾನಾ ಕಾರಣಗಳನ್ನು ಹೇಳಿ ದೂರು ಪಡೆಯಲು ಹಿಂದೇಟು ಹಾಕಿದ್ದಕ್ಕೆ ಇನ್ಸಪೇಕ್ಟರ್, ಸಿಬ್ಬಂದಿ ಹಾಗೂ ಬಿಜೆಪಿ ನಾಯಕರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಹೈ ಡ್ರಾಮಾವೇ ನಡೆದಿದೆ.
ಕಾಂಟ್ರಾಕ್ಟರ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದಂತೆ ನಾಲ್ಕು ಜನರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಆಪ್ತ ರಾಜು ಕಪನೂರ್ ಮತ್ತಿ ಗ್ಯಾಂಗ್ ವಿರುದ್ದ ಎಫ್ಐಆರ್ ದಾಖಲು ಮಾಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಸ್ಟೇಷನ್ ಬಜಾರ್ ಠಾಣೆ ಇನ್ಸ್ಪೆಕ್ಟರ್ ದೂರು ಪಡೆಯದೇ ಇದ್ದಾಗ ಬಿಜೆಪಿ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರ ನಡೆ ಖಂಡಿಸಿ ಕಮಲ ಪಡೆ ನಾಯಕರು ಸ್ಟೇಷನ್ ಬಜಾರ್ ಠಾಣೆ ಎದುರು ಪ್ರತಿಭಟನೆ ನಡೆಸಿ ಖಾಕಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆ ಆಣತಿ ಮೇರೆಗೆ ಪೊಲೀಸರ ಕಾರ್ಯ: ಬಿಜೆಪಿ ಆರೋಪ
ಸಚಿವ ಪ್ರಿಯಾಂಕ್ ಖರ್ಗೆ ಅಣತಿಯಂತೆ ಪೊಲೀಸರು ದೂರು ದಾಖಲು ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ನಾಳೆಯ ದಿನ ನಮಗೆ ಏನಾದರೂ ಆದರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸರೇ ನೇರ ಹೊಡೆ ಎಂದು ಹೇಳಿದ್ದಾರೆ. ಪೊಲೀಸರ ನಡೆ ವಿರುದ್ಧ ಕೆಂಡಾಮಂಡಲವಾಗಿರುವ ಬಿಜೆಪಿ ನಾಯಕರು ನಾಯಕರು, ನ್ಯಾಯಕ್ಕಾಗಿ ಪ್ರತಿಭಟನೆ ಹಾದಿ ತುಳಿಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಹಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಗುತ್ತಿಗೆದಾರ ಆತ್ಮಹತ್ಯೆ!
ಒಟ್ಟಿನಲ್ಲಿ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿದ್ದ ಡೆತ್ನೋಟ್ ವಿಚಾರ ಇದೀಗ ರಾಜಕೀಯ ಸ್ವರೂಪ ಪಡೆದಿದ್ದು, ಕಮಲ ಪಡೆ ಹಾಗೂ ಕೈ ಪಡೆ ಮಧ್ಯೆ ರಾಜಕೀಯ ಫೈಟ್ಗೆ ನಾಂದಿ ಹಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ