ಬಾಂಗ್ಲಾದೇಶದ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು ಎನ್ಐ ವಿಶೇಷ ನ್ಯಾಯಾಲಯ
ಬುರ್ದ್ವಾನ್ ಸ್ಫೋಟ, 2018ರ ಬೋಧಗಯಾ ಸ್ಫೋಟ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಬಾಂಗ್ಲಾದೇಶಿ ಪ್ರಜೆ, ಜಮಾತ್ ಉಲ್ ಉಗ್ರ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ಗೆ ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2014ರಲ್ಲಿ ಭಾರತಕ್ಕೆ ಅಕ್ರಮವಾಗಿ ನುಸುಳಿ, ನಂತರ ಬೆಂಗಳೂರಿಗೆ ಬಂದಿದ್ದ ಉಗ್ರ ಇಲ್ಲಿದ್ದುಕೊಂಡೇ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ.
ಬೆಂಗಳೂರು, ಡಿಸೆಂಬರ್ 31: ಜಮಾತ್ ಉಲ್ ಉಗ್ರ ಸಂಘಟನೆಯ ಕೃತ್ಯಗಳಿಗೆ ಭಾರತದಲ್ಲಿ ಉತ್ತೇಜನ ನೀಡಿದ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಪ್ರಜೆ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂಬಾತನಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಡಕಾಯಿತಿ, ಪಿತೂರಿ, ಭಯೋತ್ಪಾದನೆಗೆ ನಿಧಿ ಸಂಗ್ರಹ ಮತ್ತು ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಹಿದುಲ್‌ಗೆ 57,000 ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆಯಾದಂತಾಗಿದೆ.
ಬುರ್ದ್ವಾನ್ ಸ್ಫೋಟ ಪ್ರಕರಣದ ತನಿಖೆಯ ಸಮಯದಲ್ಲಿ ಏಜೆನ್ಸಿಯ ಕೋಲ್ಕತ್ತಾ ಶಾಖೆಯ ಕಚೇರಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ 2019 ರ ಜೂನ್ನಲ್ಲಿ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.
ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಉಗ್ರ
ಎನ್‌ಐಎ ತನಿಖೆಯಲ್ಲಿ ದೊರೆತ ಮಾಹಿತಿಯ ಪ್ರಕಾರ, 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರ ವಶದಲ್ಲಿದ್ದ ಜಾಹಿದುಲ್, 2014ರಲ್ಲಿ ಜೆಎಂಬಿ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ. ಅದೇ ಸಂದರ್ಭದಲ್ಲಿ 2014 ರ ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ.
ಬುರ್ದ್ವಾನ್ ಸ್ಫೋಟದ ನಂತರ, ಜಾಹಿದುಲ್ ಮತ್ತು ಸಹಚರರು ಬೆಂಗಳೂರಿಗೆ ಪರಾರಿಯಾಗಿದ್ದರು. ಬೆಂಗಳೂರಿನಲ್ಲಿದ್ದುಕೊಂಡೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮುಸ್ಲಿಂ ಯುವಕರಿಗೆ ಭಾರತ-ವಿರೋಧಿ ಚಟುವಟಿಕೆಗಳನ್ನು ನಡೆಸುವಂತೆ ಕುಮ್ಮಕ್ಕು ನೀಡಿದ್ದರು.
ಇದನ್ನೂ ಓದಿ: 1 ದಿನದ ಲೈಸೆನ್ಸ್ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್ ಸಿಗದೇ ವ್ಯಾಪಾರಿಗಳು ಕಂಗಾಲು
ಬೋಧಗಯಾ ಸ್ಫೋಟದಲ್ಲೂ ಶಾಮೀಲು
2018 ರ ಜನವರಿಯಲ್ಲಿ ಬೋಧಗಯಾದಲ್ಲಿ ಸಂಭವಿಸಿದ ಸ್ಫೋಟದಲ್ಲಿಯೂ ಜಾಹಿದುಲ್ ಮತ್ತು ಸಹಚರರ ಕೈವಾಡ ಇತ್ತು. ಜಾಹಿದುಲ್ ಮತ್ತು ಆತನ ಸಹಚರರು ಜೆಎಂಬಿಯ ಚಟುವಟಿಕೆಗಳನ್ನು ಮುನ್ನಡೆಸಲು ದರೋಡೆ ಮೂಲಕ ಹಣವನ್ನು ಸಂಗ್ರಹಿಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ತನಿಖೆಯಲ್ಲಿ ವಾಗೊದೆ. 2018 ರಲ್ಲಿ, ಅವರು ಈ ಕಾರ್ಯಸೂಚಿಯ ಭಾಗವಾಗಿ ಬೆಂಗಳೂರಿನಲ್ಲಿ ನಾಲ್ಕು ಡಕಾಯಿತಿಗಳನ್ನು ಎಸಗಿದ್ದರು. ಲೂಟಿ ಮಾಡಿದ ಹಣವನ್ನು ಮದ್ದುಗುಂಡುಗಳನ್ನು ಸಂಗ್ರಹಿಸಲು, ಅಡಗುತಾಣಗಳ ವ್ಯವಸ್ಥೆ ಮಾಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳ ತರಬೇತಿ ನೀಡಲು ಬಳಸಿದ್ದರು ಎಂದು ಎನ್ಐಎ ತಿಳಿಸಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ