ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಸದ್ಯ ಭೂಮಿಗೆ ಚಿನ್ನದ ಬೆಲೆ ಇದೆ. ಇದೀಗ ಈ ಭೂಮಿ ಮೇಲೆ ದುಷ್ಟರು ಕಣ್ಣುಹಾಕಿದ್ದಾರೆ. ವಾರಸುದಾರರಿಲ್ಲದ ಭೂಮಿಯನ್ನು ಅಧಿಕಾರಿಗಳೊಂದಿಗೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಲಪಟಾಯಿಸುವ ದಂಧೆ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು
ಭೂ ಹಗರಣ
Image Credit source: tv9 kannada
Edited By:

Updated on: Feb 02, 2026 | 6:17 PM

ಕೋಲಾರ, ಫೆಬ್ರವರಿ 02: ಅದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿ ಭೂಮಿಗೆ (Land) ಬಂಗಾರದ ಬೆಲೆ ಇದೆ. ಅಂಥ ಜಾಗದಲ್ಲಿ ಯಾರೂ ವಾರಸುದಾರರಿಲ್ಲದ ಭೂಮಿ ಇದೆ ಎಂದಾಗ ಭೂಗಳ್ಳರು, ಪ್ರಭಾವಿಗಳು ಸುಮ್ಮನೆ ಬಿಡುತ್ತಾರಾ, ಸಾಧ್ಯವೇ ಇಲ್ಲ. ಇಂಥಾದೊಂದು ಜಾಗ ಇದೇ ಅಂಥ ಗೊತ್ತಾಗಿದ್ದೇ ನೋಡಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಕೋಟ್ಯಂತರ ರೂ. ಭೂಮಿಯನ್ನು ತಿಂದು ತೇಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಶಿಲ್ಪಿಗಳ ತವರೂರು. ಇದಕ್ಕೆ ಇಂಥದೊಂದು ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಶಿವಾರಪಟ್ಟಣ ಗ್ರಾಮದಲ್ಲಿನ ಜನರು ವಿವಿಧ ಶಿಲ್ಪಕಲೆಗಳಿಂದಲೇ ಇಡೀ ದೇಶವಿದೇಶದಲ್ಲಿ ಹೆಸರು ಮಾಡಿದ್ದಾರೆ. ಆದರೆ ಇಂದಿಗೆ ಇದೇ ಶಿವಾರಪಟ್ಟಣ ಗ್ರಾಮದ ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಜೊತೆಗೆ ನರಸಾಪುರ ಕೈಗಾರಿಕಾ ಪ್ರದೇಶವೂ ಶಿವಾರಪಟ್ಟಣ ಗ್ರಾಮದವರೆಗೂ ವಿಸ್ತಾರಗೊಂಡಿದೆ. ಪರಿಣಾಮ ಈ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಎಕರೆ ಭೂಮಿಗೆ ಸುಮಾರು 4 ರಿಂದ 5 ಕೋಟಿ ರೂ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ! ಮುಳಬಾಗಿಲು ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾರಿ ವಿವಾದ

ಇಂಥ ಪ್ರದೇಶದಲ್ಲಿ ಭೂಗಳ್ಳರು ಹಾಗೂ ಕೆಲವು ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೆ ಜೀರೋ ಬಿನ್ ಜೀರೋ ಹೆಸರಿನಲ್ಲಿ ಪಹಣಿಯಲ್ಲಿ ಯಾವುದೇ ವಾರಸುದಾರರಿಲ್ಲದ ಸುಮಾರು 49 ಎಕರೆಯಷ್ಟು ಭೂಮಿ ಇರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಆ ಭೂಮಿಯನ್ನು ಕಬಳಿಕೆ ಮಾಡಲು ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಸುಮಾರು 16 ಎಕರೆಯಷ್ಟು ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಕಲಿ ವ್ಯಕ್ತಿಯ ಹೆಸರಿಗೆ ಭೂಮಿಯ ದಾಖಲೆಗಳನ್ನು ಸಿದ್ದಮಾಡಿಕೊಂಡು ಅವರಿಂದ ಭೂಮಿಯನ್ನು ಖರೀದಿ ಮಾಡಿದಂತೆ ಮಾಡಿ ಕೋಟ್ಯಂತರ ರೂ ಬೆಲೆ ಬಾಳುವ ಭೂಮಿಯನ್ನು ಲಪಾಟಾಯಿಸಿದ್ದಾರೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ನವೀನ್​ ಅವರ ಆರೋಪವಾಗಿದೆ.

ಏನಿದು ಜೀರೋ ಬಿನ್ ಜೀರೋ?

ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಹಲವು ವರ್ಷಗಳಿಂದ ತೆರಿಗೆ ಪಾವತಿಯಾಗದ ಹಾಗೂ ಸ್ವಾಧೀನದಲ್ಲಿ ಇಲ್ಲದ ಭೂಮಿಯ ಪಹಣಿಯಲ್ಲಿ ಜೀರೋ ಬಿನ್ ಜೀರೋ ಎಂದು ಸೇರಿಸಲಾಗಿರುತ್ತದೆ. ಶಿವಾರಪಟ್ಟಣದ ಬಹಳ ಹಿಂದೆ ಇದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದಂತೆ ಕೆಲವು ಕುಟುಂಬಸ್ಥರು ವಲಸೆ ಹೋದವರು ಮತ್ತೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ಶಿವಾರಪಟ್ಟಣ ಸರ್ವೆ ನಂ-151 ರಿಂದ 172 ರವರೆಗೆ ವಿವಿಧ ಸರ್ವೆ ನಂಬರ್​ಗಳಲ್ಲಿ ಸುಮಾರು 49 ಎಕರೆ ಭೂಮಿ ಇದೆ. ಅದೆಲ್ಲವೂ ಪಹಣಿಯಲ್ಲಿ ಇಂದಿಗೂ ಜೀರೋ ಬಿನ್​ ಜೀರೋ ಅಥವಾ ಡಾಟ್ ಎಂದು ಬರುತ್ತಿದೆ.

ಅಧಿಕಾರಿಗಳು ಶಾಮೀಲು?

ಈ ವಿಷಯ ತಿಳಿದ ಮಾಲೂರಿನ ಒಬ್ಬ ಪ್ರಭಾವಿ  ರಾಜಕಾರಣಿಯೊಬ್ಬರ ಸಂಬಂಧಿಕರು ಹಾಗೂ ಮಕ್ಕಳು ಕೋಲಾರದ ಕೆಲವು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಮೂಲ ಕಂದಾಯ ಕರ್ದಾ ದಾಖಲೆಯಲ್ಲಿ ಸೈಯದ್ ಇಬ್ರಾಹಿಂ ಸಾಬ್ ಹೆಸರನ್ನು ಖಾಜಿ ಸೈಯದ್ ಇಬ್ರಾಹಿಂ ಎಂದು ತಿದ್ದಿ ಆ ಹೆಸರಿನ ನಕಲಿ ವ್ಯಕ್ತಿಗಳಿಂದ ಭೂಮಿ ನಮ್ಮದು ನಮ್ಮ ಹೆಸರಿಗೆ ಮಾಡಿಕೊಡುವಂತೆ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ, ನಂತರ ಅದನ್ನು ಅರ್ಜಿದಾರರ ಹೆಸರಿಗೆ ಮಾಡಿ, ಪಹಣಿಯಲ್ಲಿ ಅವರ ಹೆಸರು ನಮೂದಾಗುತ್ತಿದ್ದಂತೆ ಕೂಡಲೇ ಆ ಭೂಮಿಯನ್ನು ಪ್ರಭಾವಿಗಳು ಖರೀದಿ ಮಾಡಿದಂತೆ ತೋರಿಸಲಾಗಿದೆ.

ಸದ್ಯ ಶಿವಾರಪಟ್ಟಣ ಸರ್ವೆ ನಂ-168 ರಲ್ಲಿ 8.32 ಎಕರೆ, 170 ರಲ್ಲಿ 4.5 ಎಕರೆ ಹಾಗೂ 171 ರಲ್ಲಿ 1.32 ಎಕರೆ ಭೂಮಿಯನ್ನು ಖಾಜಿ ಸೈಯದ್ ಇಬ್ರಾಹಿಂ ಹೆಸರಿಗೆ ಮಾಡಿ ಅವರ ವಂಶಸ್ಥರು ಎಂದು ವಂಶವೃಕ್ಷ ಸೃಷ್ಟಿ ಮಾಡಿ ಸುಮಾರು 80 ಕೋಟಿ ರೂ ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲಾಗಿದೆ. ವಾರಸುದಾರರಿಲ್ಲದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕಿತ್ತು ಅಥವಾ ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶಕ್ಕೆ ನೀಡಬಹುದಾಗಿದ್ದ ಬಂಗಾರದ ಬೆಲೆ ಬಾಳುವ ಭೂಮಿ ಇಂದು ಪ್ರಭಾವಿಗಳ ಪಾಲಾಗಿದೆ. ಸದ್ಯ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ನಾಮಕಾವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಭೈರತಿ ಸುರೇಶ್​ ತನಿಖೆ ಮಾಡಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನು ಉಳಿಸಬೇಕು ಎನ್ನುವ ಕೂಗು ಜಿಲ್ಲೆಯಲ್ಲಿ ಕೇಳಿಬಂದಿದೆ.

ಇದನ್ನೂ ಓದಿ: ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ

ಕಂದಾಯ ಇಲಾಖೆ ಅಧಿಕಾರಿಗಳು ಕೈಜೋಡಿಸಿದರೆ ಜೀರೋಯಿಂದ ಕೋಟಿ ಕೋಟಿ ರೂ. ಹಣ ಮಾಡೋದು ಹೇಗೆ ಅನ್ನೋದು ಈ ಪ್ರಕರಣದಲ್ಲಿ ತಿಳಿದುಬಂದಿದೆ. ಸದ್ಯ 16 ಎಕರೆಯಷ್ಟು ಭೂಮಿಗೆ ಈಗಾಗಲೇ ದಾಖಲಾತಿಗಳನ್ನು ಸೃಷ್ಟಿಸಿದ್ದು, ಉಳಿದ ಭೂಮಿ ಕಬಳಿಕೆ ಮಾಡುವ ಕೆಲಸ ನಡೆಯುತ್ತಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸರ್ಕಾರಿ ಭೂಮಿಯನ್ನು ಉಳಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.