ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ! ಮುಳಬಾಗಿಲು ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾರಿ ವಿವಾದ
ಸರ್ಕಾರಿ ಶಾಲೆಯ ಜಾಗವನ್ನೇ ಒತ್ತುವರಿ ಮಾಡಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಗುಂಡ್ಲಹಳ್ಳಿ ಗ್ರಾಮದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದೆ. ಸದ್ಯ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಗ್ರಾಮಸ್ಥರ ದೂರಿನ ಮೇರೆಗೆ ಅಧಿಕಾರಿಗಳು, ಪೊಲೀಸರು ಮಸೀದಿ ನಿರ್ಮಾಣ ಕಾರ್ಯ ಸ್ಥಗಿತಕ್ಕೆ ಸೂಚನೆ ನೀಡಿದ್ದಾರೆ. ಜಮೀನಿನ ಸರ್ವೇ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಕೋಲಾರ, ಜನವರಿ 9: ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಗುಂಡ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿ ಮಸೀದಿ (Mosque) ನಿರ್ಮಾಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ವಿಷಯ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಸ್ಥಳೀಯರು ಹಾಗೂ ಗ್ರಾಮಸ್ಥರು ಮಸೀದಿ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗದಲ್ಲಿ ಹಾಗೂ ಶಾಲಾ ಆವರಣದ ಸಮೀಪದಲ್ಲಿರುವ ದೇವಸ್ಥಾನದ ಬಳಿಯೇ ಮಸೀದಿ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದು ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದ್ದು, ಆದರೆ ಆ ಜಾಗವು ಸರ್ಕಾರಿ ಶಾಲೆಗೆ ಸೇರಿದ್ದು ಎನ್ನುವ ಆರೋಪವನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.
ಈ ಸಂಬಂಧ ಗ್ರಾಮಸ್ಥರು ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಸಹ ಮುಳಬಾಗಿಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಮೀನು ದಾಖಲೆ ಪತ್ರಗಳ ಪ್ರತಿಯ ಸಹಿತ ದೂರು ನೀಡಿದ್ದಾರೆ. ಅದರಲ್ಲಿ, ಶಾಲಾ ಜಾಗ ಒತ್ತುವರಿ ಮಾಡಿಕೊಂಡು ಮಸೀದಿ ನಿರ್ಮಾಣ ಮಾಡುತ್ತಿರುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶಾಲಾ ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಆಸ್ತಿಯ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಸಿ.ಗುಂಡ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ
ವಿವಾದ ತೀವ್ರಗೊಂಡ ಹಿನ್ನೆಲೆ, ಮಸೀದಿ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ಪೊಲೀಸರಿಂದಲೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾಗದ ನೈಜ ಸ್ಥಿತಿಯನ್ನು ಸ್ಪಷ್ಟಪಡಿಸಲು ಸರ್ವೆ ಕಾರ್ಯ ನಡೆಸಲಾಗುವುದು. ಅದರ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ
ಶಾಲಾ ಜಾಗ ಒತ್ತುವರಿ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವಿಚಾರ ಇದೀಗ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.
