ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ
ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಬೆನ್ನಲ್ಲೇ ಮತ್ತೊಂದು ಸುತ್ತಿನ ಕಾರ್ಯಾಚರಣೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ನಾಗವಾರ ಬಳಿಯ ಸಾರಾಯಿ ಪಾಳ್ಯದಲ್ಲಿ ಕೂಡ ಬಿಡಿಎಗೆ ಸೇರಿದ ಭೂಮಿಯನ್ನು ಮರುಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಸಿಬಿಗಳು ಗರ್ಜಿಸಿವೆ. ಹೀಗಾಗಿ ಬಿಡಿಎ ಜಾಗ ಒತ್ತುವರಿ ಮಾಡಿಕೊಂಡವರೀಗ ಬೀದಿಪಾಲಾಗಿದ್ದಾರೆ.

ಬೆಂಗಳೂರು, ಜನವರಿ 9: ಕೋಗಿಲು ಲೇಔಟ್ನಲ್ಲಿ (Kogilu Layout) ಸರ್ಕಾರದ ಭೂಮಿ ಒತ್ತುವರಿ ಮಾಡಿದ್ದವರಿಗೆ ಬಿಗ್ ಶಾಕ್ ನೀಡಿದ ಬೆನ್ನಲ್ಲೇ ನಾಗವಾರದಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ನಾಗವಾರದ ಥಣಿಸಂದ್ರ ಬಳಿಯ ಸಾರಾಯಿ ಪಾಳ್ಯದಲ್ಲಿ ಬಿಡಿಎಗೆ (BDA) ಸೇರಿದ ಸರ್ವೆ ಸಂಬರ್ 28 ರ 2 ಎಕರೆ ಜಾಗವನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿದ್ದ 30ಕ್ಕೂ ಹೆಚ್ಚು ಮನೆ, ಶೆಡ್ ಹಾಗೂ ಗ್ಯಾರೇಜ್ಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿ ಕೆಡವಲಾಗಿದೆ.
ಇನ್ನು ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸ್ಥಳೀಯ ನಿವಾಸಿಗಳು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸುಮಾರು 20 ವರ್ಷಗಳಿಂದ ಇಲ್ಲೇ ವಾಸ ಮಾಡುತ್ತಿರುವುದಾಗಿ ಹೇಳುತ್ತಿರುವ ನಿರಾಶ್ರಿತರು ಅಗತ್ಯ ದಾಖಲೆಗಳನ್ನ ಹೊಂದಿದ್ದರೂ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೇ ಅಮಾನವೀಯತೆ ತೋರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ನಿಯಮಾನುಸಾರ ಮತ್ತು ಕೋರ್ಟ್ ಆದೇಶನಕ್ಕನುಗುಣವಾಗಿಯೇ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಗರ್ಜಿಸಿದ ಜೆಸಿಬಿ: ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಮೇಲ್ನೋಟಕ್ಕೆ ಕೋಗಿಲು ಲೇಔಟ್ ರೀತಿಯಲ್ಲಿಯೇ ಸರ್ಕಾರಿ ಜಾಗವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲಾಗಿರುವ ಆರೋಪಗಳೂ ಇವೆ. ಆದರೆ ಇದು ಸರ್ಕಾರಿ ಜಾಗ ಎಂಬುದು ಗೊತ್ತಿದ್ದರೂ ಒಂದಷ್ಟು ಮಂದಿಗೆ ಇ ಖಾತಾ, ರಿಜಿಸ್ಟ್ರೇಷನ್ ಪತ್ರಗಳನ್ನು ಮಾಡಿಕೊಟ್ಟವರು ಯಾರು? ಇಷ್ಟು ಮನೆಗಳು ತಲೆ ಎತ್ತುವ ತನಕ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ವಿಚಾರವೂ ಗೊತ್ತಾಗಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
