ಮರುಜೀವ ಪಡೆಯುತ್ತಿದೆ ಚಿನ್ನಸ್ವಾಮಿ ಸ್ಟೇಡಿಯಂ! ಸದ್ಯದಲ್ಲೇ ಸಿಗಲಿದೆ ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್
ಆರ್ಸಿಬಿ ವಿಜಯೋತ್ಸವ ಸಂದರ್ಭ 11 ಜನರ ಸಾವಿಗೆ ಕಾರಣವಾದ ಘಟನೆಯಿಂದ ಚಿನ್ನಸ್ವಾಮಿ ಸ್ಟೇಡಿಯಂಗೆ ಚೇತರಿಸಿಕೊಳ್ಳಲಾಗಿಲ್ಲ. ಮಾರ್ಗಸೂಚಿಗಳ ಪಾಲನೆಯಾಗದ ಕಾರಣಕ್ಕೆ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ಪಂದ್ಯ ಕೂಡ ಕೊನೇ ಕ್ಷಣದಲ್ಲಿ ಸ್ಥಳಾಂತರಗೊಂಡಿತ್ತು. ಇದೀಗ ಲೋಪದೋಷಗಳನ್ನು ಸರಿಮಾಡಿಕೊಂಡು ಮತ್ತೆ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲು ಸ್ಟೇಡಿಯಂ ಸಿದ್ದವಾಗುತ್ತಿದೆ.

ಬೆಂಗಳೂರು, ಜನವರಿ 9: ಆರ್ಸಿಬಿ (RCB) ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಇದರಿಂದ ಇಡೀ ಸರ್ಕಾರ ಮತ್ತು ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿತ್ತು. ಸೂಕ್ತ ಭದ್ರತೆ ನೀಡದ ಸಲುವಾಗಿ ಕಮಿಷನರ್ ದಯಾನಂದ್ ಸೇರಿ ಹಲವರ ತಲೆದಂಡವಾಗಿತ್ತು. ಅಲ್ಲದೆ RCB ಮ್ಯಾನೆಜ್‌ಮೆಂಟ್ ಸೇರಿ ಹಲವರ ಬಂಧನ ಕೂಡ ಆಗಿತ್ತು. ನಿವೃತ್ತ ನ್ಯಾ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರ ವರಧಿ ಕೇಳಿತ್ತು. ಇದಕ್ಕೆಲ್ಲ ಕಾರಣ ಚಿನ್ನಸ್ವಾಮಿಯಲ್ಲಿ ವ್ಯವಸ್ಥೆ ಸರಿ ಇಲ್ಲದ್ದು ಎಂದು ಸಮಿತಿ ವರದಿ ನೀಡಿತ್ತು. ಅಂದಿನ ಘಟನೆಗೆ ಸ್ಟೇಡಿಯಂನಲ್ಲಿರುವ 16 ಲೋಪಗಳೇ ಕಾರಣ ಎಂದು ಕುನ್ಹಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಅಲ್ಲದೇ ಮುಂದಿನ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ ನಿರಾಕರಿಸುವಂತೆ ವರಧಿಯಲ್ಲಿ ಶಿಫಾರಸು ಮಾಡಲಾಗಿತ್ತು. ಸ್ಟೇಡಿಯಂನ ಎಲ್ಲಾ ಗೇಟ್ಗಳು ತುಂಬಾ ಚಿಕ್ಕದಾಗಿವೆ. ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರಕ್ಕೆ ಸ್ಟೇಡಿಯಂ ಸುತ್ತ ಜಾಗ ಇಲ್ಲ. ಜನ ಬಂದರೆ ಅವರ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಇಲ್ಲ, ಕ್ರಿಕೆಟ್ ತಂಡದ ವಾಹನಗಳ ಪಾರ್ಕಿಂಗ್‌ಗೂ ಸ್ಟೇಡಿಯಂನಲ್ಲಿ ಅವಕಾಶ ಇಲ್ಲ. ಕ್ರೀಡಾಂಗಣದ ಒಳಭಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಸೆಟ್‌ಬ್ಯಾಕ್ ಬಿಟ್ಟಿಲ್ಲ. ಸ್ಟೇಡಿಯಂಗೆ ಎಲ್ಲೂ ತುರ್ತು ನಿರ್ಗಮನ ವ್ಯವಸ್ಥೆ ಇಲ್ಲ. ಸ್ಟೇಡಿಯಂ ಸುತ್ತಲೂ ನಿರ್ಮಾಣ ಆಗಿರುವ ತಡೆಗೋಡೆ ಅವೈಜ್ಞಾನಿಕವಾಗಿದೆ. ಕಾಲ್ತುಳಿತ ನಡೆದ ಬಳಿಕ ಸ್ಟೇಡಿಯಂನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂದ್ಯ ನಡೆಸುವ ದೃಷ್ಟಿಯಲ್ಲಿ ಸ್ಟೇಡಿಯಂ ಸದ್ಯದ ವಾತಾವಾರಣ ಪೂರಕವಾಗಿಲ್ಲ ಎಂದು ವರದಿ ನೀಡಲಾಗಿತ್ತು.
ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ಹಾಗೂ ಮೆಟ್ಟಿಲು ಚಿಕ್ಕದಾಗಿವೆ. ಕಟ್ಟಡಗಳಿಗೆ ನಿಯಮ ಪ್ರಕಾರ ಸೆಟ್‌ಬ್ಯಾಕ್ ಬಿಟ್ಟಿಲ್ಲ, ಸ್ಟೇಡಿಯಂನ ಸಂಪೂರ್ಣ ಕಾಂಪೌಂಡ್ ಅವೈಜ್ಞಾನಿವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಸಮಸ್ಯೆ, ಲೋಪಗಳ ಬಗೆಹರಿಸಲು ಕೆಎಸ್ಸಿಎ ಕ್ರಮ
ನ್ಯಾ ಮೈಕಲ್ ಡಿ ಕುನ್ಹಾ ವರದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಈಗ KSCA ಮುಂದಾಗಿದೆ. ಆ್ಯಂಬುಲೆನ್ಸ್ ಓಡಾಟಕ್ಕೆ ಜಾಗ, ಪರ್ಕಿಂಗ್ ವ್ಯವಸ್ಥೆ, ತುರ್ತು ನಿರ್ಗಮನ, ಅಗಲವಾದ ಗೇಟ್ ಗಳು, ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಸೇರಿ ಎಲ್ಲಾ ಮಾರ್ಗಸೂಚಿಗಳನ್ನು ಸರಿಪಡಿಸುವ ಕೆಲಸಕ್ಕೆ KSCA ಮುಂದಾಗಿದೆ. ಸದ್ಯದಲ್ಲೇ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮತ್ತೆ ಕ್ರಿಕೆಟ್ ವೈಭವವನ್ನ ಜನರೆದುರುತರಲು ಚಿನ್ನಸ್ವಾಮಿ ಸ್ಟೇಡಿಯಂ ಸಿದ್ದವಾಗುತ್ತಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
