ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಂ ಮಲ್ಲೇಶ್​ ಬಾಬು

| Updated By: ವಿವೇಕ ಬಿರಾದಾರ

Updated on: Jun 05, 2024 | 12:05 PM

ಕಾಂಗ್ರೆಸ್​ನ ಭದ್ರಕೋಟೆ ಎಂದೇ ಖ್ಯಾತಿ ಗಳಿಸಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿ ಎಂಬಂತೆ ಜೆಡಿಎಸ್​ ವಿಜಯಪತಾಕೆ ಹಾರಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇವರ ರಾಜಕೀಯ ಜೀವನ ಇಲ್ಲಿದೆ

ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಎಂ ಮಲ್ಲೇಶ್​ ಬಾಬು
ಸಂಸದ ಮಲ್ಲೇಶ್​ ಬಾಬು
Follow us on

ಎಂ.ಮಲ್ಲೇಶ್​ ಬಾಬು ಅವರು ಐಎಎಸ್​ ಅಧಿಕಾರಿ ದಿವಂಗತ ಎಂ.ಮುನಿಸ್ವಾಮಿ ಹಾಗೂ ಕೋಲಾರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಗಮ್ಮ ಅವರ ಮೂರು ಮಕ್ಕಳ ಪೈಕಿ ಕೊನೆಯ ಪುತ್ರ. ಮಲ್ಲೇಶ್​ ಬಾಬು ಅವರಿಗೆ ಒಬ್ಬರು ಅಕ್ಕ, ಒಬ್ಬ ಅಣ್ಣ ಇದ್ದಾರೆ. ಮಲ್ಲೇಶ್ ಬಾಬು ಎಂ.ಬಿ.ಎ ಪದವೀಧರ ಒಳ್ಳೆಯ ವಿದ್ಯಾವಂತರು. ತಮ್ಮದೇ ಆದ ಖಾಸಗಿ ಶಾಲೆ ನಡೆಸುತ್ತಿದ್ದಾರೆ. 1974ರ ಜೂನ್‌ 30ರಂದು ಜನಿಸಿದ ಮಲ್ಲೇಶ್​ ಬಾಬು ಅವರು ಕೋಲಾರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.

ಭೋವಿ ಸಮುದಾಯಕ್ಕೆ ಸೇರಿರುವ ಎಂ.ಮಲ್ಲೇಶ್ ಬಾಬು ಜೆಡಿಎಸ್ ಪಕ್ಷದ ಮುಖಂಡರಾಗಿದ್ದಾರೆ. ಇವರ ತಾಯಿ ಮಂಗಮ್ಮ ಮುನಿಸ್ವಾಮಿ ಎರಡು ಬಾರಿ ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. 2009ರಲ್ಲಿ ಬಿಜೆಪಿಯಿಂದ ಕೋಲಾರ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದ ಮಂಗಮ್ಮ ಅವರಿಂದ ರಾಜಕೀಯದ ಬಗ್ಗೆ ಕಲಿತಿದ್ದಾರೆ.

ತಾಯಿಯ ರಾಜಕಾರಣ ನೋಡುತ್ತಾ ಬೆಳೆದಿದ್ದ ಮಲ್ಲೇಶ್​ ಬಾಬು ಅವರು ರಾಜಕೀಯವಾಗಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ತಂದೆ-ತಾಯಿ ಕೂಡ ಮಗ ಮಲ್ಲೇಶ್​ ಬಾಬು ಅವರು ರಾಜಕೀಯವಾಗಿ ಬೆಳೆಯ ಬೇಕು ಎಂದು ಆಸೆ ಹೊಂದಿದ್ದರು. ಅದಕ್ಕಾಗಿಯೇ ಮಗ ಮಲ್ಲೇಶ್​ ಬಾಬು ಅವರು ಈ ಮೊದಲು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧೆ ಮಾಡಿದ್ದರು. 2018 ಹಾಗೂ 2023 ರಲ್ಲಿ ಜೆಡಿಎಸ್​ ಪಕ್ಷದಿಂದಲೇ ಸ್ಪರ್ಧೆ ಮಾಡಿದ್ದ ಮಲ್ಲೇಶ್​ ಬಾಬು ಕಾಂಗ್ರೇಸ್​ ಪಕ್ಷದ ವಿರುದ್ದ ಕಡಿಮೆ ಮತಗಳ ಅಂತರದಿಂದಲೇ ಸೋಲನ್ನು ಅನುಭವಿಸಿದ್ದರು.

ಈ ಬಾರಿ ಲೋಕಸಭಾ ಚುನಾವಣೆಗೆ ಜೆಡಿಎಸ್​ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಜೆಡಿಎಸ್​ ಪಕ್ಷ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಯನ್ನಾಗಿ ಮಲ್ಲೇಶ್​ ಬಾಬು ಅವರನ್ನು ಕಣಕ್ಕಿಳಿಯುವಂತೆ ಸೂಚನೆ ನೀಡಿತ್ತು. ಪಕ್ಷದ ಸೂಚನೆ ಮೇರೆಗೆ ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಲ್ಲೇಶ್​ ಬಾಬು ಅವರು 691481 ಮತಗಳನ್ನ ಪಡೆದುಕೊಂಡು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರ​ ಎದುರು 71388 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:01 pm, Wed, 5 June 24