ಕೋಲಾರ: ಪಿಡಿಓ ಒಬ್ಬರನ್ನು ಕೋಲಾರ ಸಂಸದ ತರಾಟೆಗೆ ತೆಗೆದುಕೊಂಡು ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇಬ್ಬರ ನಡುವೆ ನಡೆದ ಸಂಭಾಷಣೆ ಆಡಿಯೋ ಸದ್ಯ ಭಾರಿ ಸದ್ದು ಮಾಡುತ್ತಿದೆ. ಇದೇ ನವೆಂಬರ್ 4 ರಂದು ಪಿಡಿಓ ಮತ್ತು ಸಂಸದ ನಡುವೆ ಸಂಭಾಷಣೆ ನಡೆದಿದೆ. ನವೆಂಬರ್ 5 ರಂದು ನರೇಂದ್ರ ಮೋದಿ ಕೇದಾರನಾಥ್ನಲ್ಲಿ ಆದಿಗುರು ಶಂಕರಾಚಾರ್ಯರ ಪ್ರತಿಮೆ ಅನಾವರಣ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ನೇರ ವೀಕ್ಷಣೆಗೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕು ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಮೊದಲ ದಿನ ಕಮ್ಮಸಂದ್ರ ಪಿಡಿಓ ಶ್ರೀನಿವಾಸರೆಡ್ಡಿಯವರಿಗೆ ಮುನಿಸ್ವಾಮಿ ಗ್ರಾಮದಲ್ಲಿ ಕ್ಲೀನ್ ಮಾಡಿಸಿ ಕೆಲವು ಸಿದ್ಧತೆಗಳನ್ನು ಮಾಡಲು ತಿಳಿಸಿದ್ದರು. ಆದರೆ ಪಿಡಿಓ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ಅದನ್ನ ನಾವ್ಯಾಕೆ ಮಾಡಬೇಕು. ಬೇರೆ ಪಕ್ಷದವರು ನಮ್ಮನ್ನ ಟೀಕೆ ಮಾಡುತ್ತಾರೆಂದು ಅಲ್ಲಿಂದ ಹೊರಟು ಹೋಗಿದ್ದಾರಂತೆ.
ಕೋಲಾರ ಸಂಸದ ಮುನಿಸ್ವಾಮಿ ಪಿಡಿಓ ಶ್ರೀನಿವಾಸರೆಡ್ಡಿ ಅವರಿಗೆ ಪೋನ್ ಕರೆ ಮಾಡಿ ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡು ನಿಂದಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.
ಸದ್ಯ ಕಮ್ಮಸಂದ್ರ ಗ್ರಾಮ ಪಂಚಾಯತಿ ಅಧಿಕಾರಿ ಶ್ರೀನಿವಾಸರೆಡ್ಡಿಯನ್ನು ಅಮಾನತು ಮಾಡಲಾಗಿದೆ. ಕೋಲಾರ ಸಿಇಓ ಉಕೇಶ್ ಕುಮಾರ್ ಅಮಾನತು ಮಾಡಿ ಆದೇಶ ನೀಡಿದ್ದಾರೆ. ದುರ್ನಡತೆ ಆಧಾರದಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಮ್ಮಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ನೀಡಿರುವ ದೂರಿನ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ.
ಘಟನೆ ಸಂಬಂಧ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಮನೆ ಕೆಲಸ ಮಾಡಿ ಎಂದು ಕೇಳಿಲ್ಲ. ಅವತ್ತು ಕಾರ್ಯಕ್ರಮದ ಹಿನ್ನೆಲೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದೆ. ಆದರೆ ಬೇರೆ ಪಕ್ಷದವರು ಟೀಕೆ ಮಾಡುತ್ತಾರೆ ಅಂತ ತಮ್ಮ ಕೆಲಸ ಮಾಡದೆ ಇದ್ದದ್ದು ತಪ್ಪು. ಅವರನ್ನು ನಾನು ಕೇಳಿದ್ದೇನೆ ಅಷ್ಟೆ. ಅದರೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆಂದು ಅದಕ್ಕೆ ಒಂದಷ್ಟು ಮಸಾಲೆ ಹಾಕಿ ಹರಿಬಿಟ್ಟಿದ್ದಾರೆ ಅಂತ ತಿಳಿಸಿದ್ದಾರೆ.
ಟಿವಿ9ಗೆ ಹೇಳಿಕೆ ನೀಡಿರುವ ಪಿಡಿಓ ಶ್ರೀನಿವಾಸರೆಡ್ಡಿ, ಕಾರ್ಯಕ್ರಮದ ಹಿನ್ನೆಲೆ ಕ್ಲೀನ್ ಮಾಡಿಸಲು ಹೇಳಿದ್ದರು. ಆದರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸಹಕಾರ ನೀಡದ ಹಿನ್ನೆಲೆ ಕೆಲಸ ತಡವಾಗಿತ್ತು. ಜೊತೆಗೆ ನನಗೆ ಆರೋಗ್ಯವೂ ಸರಿ ಇರಲಿಲ್ಲ. ಅದನ್ನು ಅವರ ಬಳಿ ಹೇಳಿಕೊಂಡೆ. ಅದಕ್ಕೆ ಅವರು ಕೋಪ ಮಾಡಿಕೊಂಡಿದ್ದರು. ಸದ್ಯ ಅಧ್ಯಕ್ಷರ ದೂರಿನ ಮೇಲೆ ಅಮಾನತು ಮಾಡಿದ್ದಾರೆ. ಇಲಾಖೆ ಕ್ರಮಕ್ಕೆ ತಲೆಬಾಗಬೇಕು ಅಂತ ತಿಳಿಸಿದ್ದಾರೆ.
ಮುನಿಸ್ವಾಮಿ, ಅಧಿಕಾರಿಯೊಬ್ಬರನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುವ ಆಡಿಯೋ ವೈರಲ್ ಆಗಿದ್ದು. ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ
ಶಿವಮೊಗ್ಗ: ಉದ್ಯಾನವನಕ್ಕೆ ಪುನೀತ್ ಹೆಸರು; ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಅಪ್ಪು ನಮನ ಕಾರ್ಯಕ್ರಮಕ್ಕೆ ಚಾಲನೆ
ಶ್ರೀಲಂಕಾ ಮಹಿಳಾ ತಂಡದ ಆರು ಆಟಗಾರ್ತಿಯರಿಗೆ ಕೊರೊನಾ ಸೋಂಕು; ವಿಶ್ವಕಪ್ ಅರ್ಹತಾ ಪಂದ್ಯ ರದ್ದು